ಕಾರ್ಕಳ: ಉಡುಪಿ ಧರ್ಮಾಧ್ಯಕ್ಷ ಅ|ವಂ|ಡಾ| ಜೆರಾಲ್ಡ್ ಲೋಬೊ ಅವರ ನೇತೃತ್ವ ದಲ್ಲಿ ಕಳೆದ ಮೂರು ದಿನಗಳಿಂದ ‘ಕ್ರಿಸ್ತಕೇಂದ್ರಿತ ಕುಟುಂಬ: ವಿಶ್ವಾಸದ ತೊಟ್ಟಿಲು’ ಎಂಬ ಸಂದೇಶದೊಂದಿಗೆ ನಡೆಯುತ್ತಿದ್ದ ಅತ್ತೂರು ಸಂತ ಲಾರೆನ್ಸರ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ಗುರುವಾರ ಸಂಜೆ 5.30ರ ಕೊನೆಯ ದಿವ್ಯ ಬಲಿಪೂಜೆಯೊಂದಿಗೆ ಸಮಾಪನಗೊಂಡಿತು.
ಗುರುವಾರ ದೇವಮಾತೆಯ ಬಲಿಪೂಜೆಯ ಬಳಿಕ ಮಾತನಾಡಿದ ಅವರು, ಕುಟುಂಬಗಳು ಸಮಾಜದ, ನಾಡಿನ ಹಾಗೂ ವಿಶ್ವದ ಬುನಾದಿ. ಅದುದರಿಂದ ನಮ್ಮ ಕುಟುಂಬಗಳು ಪಿತ, ಸುತ ಮತ್ತು ಪವಿತ್ರಾತ್ಮದ ದೈವಿಕ ಕುಟುಂಬದಂತೆ. ಏಸು ಸ್ವಾಮಿ, ಸಂತ ಜೋಸೆಫ್ ಮತ್ತು ಮರಿಯಮ್ಮನವರ ಪವಿತ್ರ ಕುಟುಂಬದಂತೆ ನಮ್ಮ ಕುಟುಂಬವೂ ಆಗಬೇಕು. ಅಗ ವಿಶ್ವ ಕುಟುಂಬವೇ ಸ್ವರ್ಗವನ್ನು ಪ್ರತಿಧ್ವನಿಸುತ್ತದೆ ಎಂದು ಡಾ| ಜೆರಾಲ್ಡ್ ಲೋಬೊ ಹೇಳಿದರು.
ಸಂತ ಫ್ರಾನ್ಸಿಸ್ ಅಸಿಸಿ ಅವರ ನುಡಿಯನ್ನು ಪ್ರಸ್ತಾಪಿಸಿದ ಅವರು ನೂರು ಪ್ರವಚನಗಳಿಗಿಂತ ಒಂದು ದಂಪತಿಯ ಆದರ್ಶ ಜೀವನ ಮಿಗಿಲು ಎಂಬ ಸಂದೇಶ ತಾಳೆಯಾಗುತ್ತದೆ ಎಂದರು.
ಕ್ಷೇತ್ರದ ಧರ್ಮಗುರು ವಂ| ಜಾರ್ಜ್ ಡಿ’ಸೋಜಾ ಉಪಸ್ಥಿತರಿದ್ದರು.
ಬುಧವಾರ ರಾತ್ರಿ ಅತ್ತೂರು ಪರಿಸರ ಜನಸಾಗರವಾಯಿತು. ಕಾಬೆಟ್ಟು ರಸ್ತೆಯಿಡೀ ವಾಹನಗಳು ತುಂಬಿ ಪದೇಪದೇ ರಸ್ತೆ ತಡೆಯುಂಟಾಯಿತು. ಗುರುವಾರ ಮಧ್ಯಾಹ್ನದ ಬಳಿಕ ಕತ್ತಲೆಯವರೆಗೂ ಸಾವಿರಾರು ಸಂಖೆಯಲ್ಲಿ ಭಕ್ತರು ಕ್ಷೇತ್ರಕ್ಕಾಗಮಿಸಿದರು. ಪೊಲೀಸರ ಹಾಗೂ ಕ್ಷೇತ್ರ ಧರ್ಮಗುರುಗಳ ಮಾರ್ಗದರ್ಶನದಲ್ಲಿ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಜೋನ್ ಡಿ’ಸಿಲ್ವಾ ಅವರ ನೇತೃತ್ವದಲ್ಲಿ ಸ್ವಯಂಸೇವಕರ ಶಿಸ್ತುಬದ್ಧ ವ್ಯವಸ್ಥೆಯಿಂದ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ.
ಬುಧವಾರ ಸಂಜೆಯಿಂದ ತಡರಾತ್ರಿಯ ವರೆಗೆ ಭಾರೀ ಸಂಖೆಯಲ್ಲಿ ಭಕ್ತರು ಕ್ಷೇತ್ರಕ್ಕಾಗಮಿಸಿ ಕ್ಷೇತ್ರದ ಪ್ರಮುಖ ಆಕರ್ಷಣೆಯಾದ ಸಂತ ಲಾರೆನ್ಸರ ಪವಾಡ ಮೂರ್ತಿಯ ದರ್ಶನಗೈದು, ಮೋಂಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು.
Click this button or press Ctrl+G to toggle between Kannada and English