- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನಿತ್ಯಾನಂದ ನಮ್ಮ ಕುಟುಂಬದ ಆನಂದವನ್ನೇ ಕೊಂದ,

nithyananda [1]ಬೆಂಗಳೂರು: ರಾಷ್ಟ್ರಪತಿ, ಪ್ರಧಾನಮಂತ್ರಿ, ವಿದೇಶಾಂಗ ಸಚಿವಾಲಯ, ಹೀಗೆ ನಾನು ಅಲೆಯದ ಜಾಗವಿಲ್ಲ. ಮಾಡಿಕೊಳ್ಳದ ಮನವಿಗಳಿಲ್ಲ. ಆದರೆ ಒಬ್ಬರೂ ಕಿಂಚಿತ್ತು ಸಹಾಯ ಮಾಡಿಲ್ಲ. ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೇ ನೀವಾದರೂ ದಯವಿಟ್ಟು ನನ್ನ ಮಗನನ್ನು ನನಗೆ ಮರಳಿ ಕೊಡಿಸುತ್ತೀರಾ?ಇದ್ದೊಬ್ಬ ಮಗ ಜೈಲಿನಲ್ಲಿರುವಾಗ ನಾನಾದರೂ ಹೇಗೆ ನೆಮ್ಮದಿಯಿಂದಿರಲಿ? ಮಗನನ್ನು ಉಳಿಸಿಕೊಳ್ಳಲು ನಾನು ಪಟ್ಟಪಾಡು ಅಷ್ಟಿಷ್ಟಲ್ಲ. ಆದರೆ ಈ ದೇಶದಲ್ಲಿ ಒಬ್ಬ ಸಾಮಾನ್ಯ ತಾಯಿಯ ನೋವಿಗೆ ಬೆಲೆ ಎಲ್ಲಿದೆ ಹೇಳಿ? ಸಿದ್ದರಾಮಯ್ಯನವರೇ, ನಾನು ಮೈಸೂರಿನವಳು. ನನ್ನ ಮಗನಾದ ವಿನಯ್ ಭಾರದ್ವಾಜ್ ಅಮೆರಿಕದಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದಾನೆ. ಆತನಿಗೆ ಸಹಾಯ ಮಾಡಲು ಸತತ 2 ವರ್ಷದಿಂದ ಪ್ರಯತ್ನ ಮಾಡುತ್ತಿದ್ದೇನೆ, ಸಾಧ್ಯವಾಗಿಲ್ಲ.

ಇದ್ದೊಬ್ಬ ಮಗ ಕಷ್ಟದಲ್ಲಿದ್ದಾಗ ಆತನಿಗೊಂದು ಆಸರೆಯಾಗಿ ಜತೆಗಿರಲು ಸಾಧ್ಯವಾಗದ ಕೊರಗು ನನ್ನನ್ನು ಕಾಡುತ್ತಿದೆ.ನನ್ನ ಮಗ ನಿಜವಾಗಿಯೂ ತಪ್ಪು ಮಾಡಿದ್ದರೆ ತಾಯಿ ಕರುಳು ಹೇಗೋ ಸಮಾಧಾನ ಮಾಡಿಕೊಳ್ಳುತ್ತಿತ್ತು. ಆದರೆ ನನ್ನ ಮಗ ಪಿತೂರಿಗೆ ಸಿಲುಕಿ ಶಿಕ್ಷೆಗೆ ಗುರಿಯಾಗಿದ್ದಾನೆ. ನಮ್ಮದೇ ರಾಜ್ಯದ ಮಾನವ ಹಕ್ಕು ಆಯೋಗ ಕೂಡ ಅದೇ ಅನುಮಾನವನ್ನು ವ್ಯಕ್ತಪಡಿಸಿದೆ. ಆದರೆ ನಮ್ಮ ಸರ್ಕಾರಕ್ಕೆ ಯಾಕೆ ನನ್ನ ಮಗ ಅಮಾಯಕ ಅಂತ ಅನಿಸುತ್ತಿಲ್ಲ?ಮಗನನ್ನು ಕಾಣದ ನೋವು ಒಂದೆಡೆ. ಅನಾರೋಗ್ಯದಿಂದ ನನ್ನ ಪತಿ ಹಾಸಿಗೆ ಹಿಡಿದು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಇಷ್ಟಾದರೂ ನನ್ನ ಕಷ್ಟ ಯಾರಿಗೂ ಕಾಣುತ್ತಿಲ್ಲ.

ಸಿದ್ದರಾಮಯ್ಯನವರೇ ನೀವಾದರೂ ನನ್ನ ಕಷ್ಟ ಅರ್ಥಮಾಡಿಕೊಳ್ಳುತ್ತೀರಾ? ಈ ತಾಯಿಗೆ ನ್ಯಾಯ ಕೊಡಿಸುತ್ತೀರಾ?ನಿಮ್ಮದೇ ಪಕ್ಷದ ಕೇಂದ್ರ ಸರ್ಕಾರವಿದೆ. ನಮ್ಮ ದೇಶದ ಪ್ರಜೆಯೊಬ್ಬ ವಿದೇಶಗಳಲ್ಲಿ ತೊಂದರೆಗೆ ಸಿಲುಕಿಕೊಂಡರೆ ಕೇಂದ್ರ ಸರ್ಕಾರ ಸಹಾಯಕ್ಕೆ ಧಾವಿಸುತ್ತದೆ. ಆದರೆ ನನ್ನ ಮಗನ ಬಗ್ಗೆ ಯಾಕೋ ನಿರ್ಲಕ್ಷ ತಾಳಿದೆ. ಆತನಿಗೆ ಸರಿಯಾದ ಕಾನೂನು ನೆರವು ಕೂಡ ಸಿಕ್ಕಿಲ್ಲ. ಯಾಕೆ ಸ್ವಾಮಿ ಈ ಅನಾದರ? ನನ್ನ ಮಗನೇನು ದೇಶದ್ರೋಹಿಯಾ?ಕಾರಾಗೃಹದಲ್ಲಿರುವ ಮಗನೊಂದಿಗೆ ದೂರವಾಣಿ ಮೂಲಕ ಮಾತನಾಡಲು ತಿಂಗಳಿಗೆ ರು. 7 ಸಾವಿರ ದೂರವಾಣಿ ಬಿಲ್ ಬರುತ್ತಿದೆ. ಕಾನೂನು ಸಮರಕ್ಕೆ ಅಮೆರಿಕಾದಲ್ಲಿ ಇರುವ ಸಂಬಂಧಿಗಳು ಸ್ವಲ್ಪ ಧನಸಹಾಯ ಮಾಡಿರುವುದು ಬಿಟ್ಟರೆ ಸರ್ಕಾರದಿಂದ ಕಿಂಚಿತ್ತೂ ಸಹಾಯ ಸಿಕ್ಕಿಲ್ಲ.

ಮುಂದಿನ ಕಾನೂನು ಹೋರಾಟಕ್ಕೆ 30 ಸಾವಿರ ಡಾಲರ್ ಅಗತ್ಯವಿದೆ. 2012ರ ಆಗಸ್ಟ್ ತಿಂಗಳಿಂದ ನಾವು 30 ಸಾವಿರ ಡಾಲರ್ ಖರ್ಚು ಮಾಡಿದ್ದೇವೆ. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದಾಗ 98 ಸಾವಿರ ಡಾಲರ್ ಖರ್ಚು ಮಾಡಿದರೂ ನ್ಯಾಯ ಸಿಕ್ಕಿಲ್ಲ.ಆಗಿದ್ದು ಆಗಿಹೋಯಿತು. ಯಾರನ್ನೂ ದೂರಿ ನನಗೆ ಆಗಬೇಕಾದ್ದೇನಿಲ್ಲ. ನನ್ನ ಮಗನಿಗೆ ಶಿಕ್ಷೆ ವಿಧಿಸಿದ ತೀರ್ಪನ್ನು ಅಮೆರಿಕದ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದೇವೆ.

ಸದ್ಯದಲ್ಲೇ ಅದು ವಿಚಾರಣೆಗೆ ಬರಲಿದೆ. ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಖಂಡಿತಾ ನನ್ನ ಮಗನನ್ನು ನನಗೆ ಮರಳಿ ಕೊಡಿಸಬಹುದು. ಅವನಿಗಾಗಿರುವ ಅನ್ಯಾಯಕ್ಕೆ ಕೊಂಚವಾದರೂ ನ್ಯಾಯ ಕೊಡಿಸಬಹುದು. ದಯವಿಟ್ಟು ಸಹಾಯಮಾಡಿ ಎಂದು ನಿಮ್ಮಲ್ಲಿ ಕೈಮುಗಿದು ಕೇಳಿಕೊಳ್ಳುತ್ತೇನೆ.ನನ್ನ ಮಗ ಒಂದು ಕಾಲದಲ್ಲಿ ನಿತ್ಯಾನಂದನ ಹಿಂಬಾಲಕನಾಗಿದ್ದ. ಆದರೆ ಪ್ರಕರಣಗಳಾದಾಗ ಆತ ಸಾಕ್ಷ್ಯ ಹೇಳಲು ಮುಂದಾದ. ಅದೇ ಆತನಿಗೆ ಮುಳುವಾಯಿತು. ಅದರ ನಂತರವೇ ಅವನ ಮೇಲೆ ಪ್ರಕರಣ ದಾಖಲಾಗಿದ್ದು.

ಅದೂ 2 ವರ್ಷ ಹಳೆಯ ಪ್ರಕರಣ. ನಿಜವಾಗಿಯೂ ನನ್ನ ಮಗ ತಪ್ಪು ಮಾಡಿದ್ದೇ ಹೌದಾದರೆ ಅವರು 2 ವರ್ಷ ಯಾಕೆ ಸುಮ್ಮನಿದ್ದರು ಎಂಬ ಪ್ರಶ್ನೆಗೆ ಈವರೆಗೆ ಉತ್ತರ ಸಿಕ್ಕಿಲ್ಲ.ನನ್ನ ಮಗ ಭಾರತದ ಪ್ರತಿಷ್ಠಿತ ಸಂಸ್ಥೆ ಬಾಂಬೆ ಐಐಟಿಯಲ್ಲಿ ಬಿ.ಟೆಕ್ ಪದವಿ ಪಡೆದ. ಬಳಿಕ ಅಮೆರಿಕದ ಹ್ಯೂಸ್ಟನ್ ವಿಶ್ವವಿದ್ಯಾಲಯದಿಂದ ಸ್ಕಾಲರ್‌ಶಿಪ್ ಸಿಕ್ಕ ಹಿನ್ನೆಲೆಯಲ್ಲಿ ಎರಡು ವರ್ಷ ಅಲ್ಲಿ ಎಂ.ಎಸ್.ಮುಗಿಸಿದ. ಮೈಕ್ರೋಸಾಫ್ಟ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡ. ಆಗ ವಿನಯ್ ತಿಂಗಳ ಸಂಬಳ 11 ಸಾವಿರ ಡಾಲರ್. ಅದೇನು ಕೇಡುಗಾಲವೋ ಅಮೆರಿಕದಲ್ಲಿ ವೇದಿಕ್ ದೇವಸ್ಥಾನವೊಂದರ ಅರ್ಚಕರ ಮಗಳು, ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಆತನನ್ನು ಸಿಲುಕಿಸಿ, ಅಮೆರಿಕಾದ ನ್ಯಾಯಾಲಯದಲ್ಲಿ 57 ತಿಂಗಳ ಶಿಕ್ಷೆಗೆ ಗುರಿಯಾಗಿಬಿಟ್ಟ. ಸಿದ್ದರಾಮಯ್ಯನವರೇ ದಯವಿಟ್ಟು ನೀವಾದರೂ ಹೇಳಿ. ರಾಜ್ಯದ ಮುಖ್ಯಮಂತ್ರಿಯಾಗಿ ಈ ತಾಯಿಗೊಂದು ಚಿಕ್ಕ ಸಹಾಯ ಮಾಡಲಾರಿರಾ?