ಮಂಗಳೂರು: ‘ಹೆಣ್ಣು ಮಕ್ಕಳು ವೇದಿಕೆಯ ಮೇಲೆ ನೃತ್ಯ ಮಾಡುವುದನ್ನು ಕುರಾನ್ ಸಂಪೂರ್ಣವಾಗಿ ವಿರೋಧಿಸುತ್ತದೆ. ಹೆಣ್ಣು ಮಕ್ಕಳು ನೃತ್ಯ ಮಾಡುವುದನ್ನು ಗಂಡು ಮಕ್ಕಳು ನೋಡುವುದು, ಹೆಣ್ಣು ಮಕ್ಕಳು ಗಂಡು ಮಕ್ಕಳನ್ನು ನೋಡುವುದನ್ನು ಹದೀಸ್ ಮತ್ತು ಕುರಾನ್ ವಿರೋಧಿಸುತ್ತದೆ. ಆದ್ದರಿಂದ ಹೆಣ್ಮಕ್ಕಳು ಶಾಲೆಯಲ್ಲಿ ನೃತ್ಯ ಮಾಡಬಾರದು’ ಎಂದು ಪುತ್ತೂರಿನ ಕೊಡಿಪ್ಪಾಡಿ ಮದ್ರಸದ ಧರ್ಮಗುರು ಅಬೂಬಕ್ಕರ್ ಮದನಿ ಫತ್ವಾ ಹೊರಡಿಸಿದ್ದಾರೆ.
ಇದರಿಂದಾಗಿ ಪುತ್ತೂರಿನ ಕೊಡಿಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಕಳೆದುಕೊಂಡಿದ್ದಾರೆ. ಶಾಲೆಯ ಶಿಕ್ಷಕರೊಬ್ಬರು ‘ಪ್ರಜಾವಾಣಿ’ ಜತೆ ಮಾತನಾಡಿ, ‘ಈ ಹಿಂದೆ ನಾಲ್ಕನೇ ತರಗತಿಯೊಳಗಿನ ಮಕ್ಕಳಿಗೆ ನೃತ್ಯ ಮಾಡುವುದಕ್ಕೆ ಯಾವುದೇ ಆಕ್ಷೇಪ ಇರಲಿಲ್ಲ. ಆದರೆ ದೊಡ್ಡ ಮಕ್ಕಳು ನರ್ತಿಸುವಂತಿರಲಿಲ್ಲ. ಆದರೆ ಈ ಬಾರಿ ಒಂದನೇ ತರಗತಿಯ ಮಕ್ಕಳಿಗೂ ನೃತ್ಯ ಮಾಡುವುದಕ್ಕೆ ಅವಕಾಶ ಇಲ್ಲದಂತಾಗಿದೆ. ಗಂಡು ಮಕ್ಕಳು ಕ್ರಿಕೆಟ್ ಅಥವಾ ಫುಟ್‌ಬಾಲ್ ಕೂಡ ಆಡುವಂತಿಲ್ಲ’ ಎಂದು ಹೇಳಿದ್ದಾರೆ.
ಹಾಗೊಂದು ವೇಳೆ ನೃತ್ಯ ಮಾಡಿದ್ದೇ ಆದಲ್ಲಿ ಕುರಾನ್ ವಿರುದ್ಧವಾಗಿ ವರ್ತಿಸಿದ್ದಕ್ಕೆ ಮಕ್ಕಳು ನರಕ ಅನುಭವಿಸ್ತಾರೆ ಅಂತ ಮಕ್ಕಳಲ್ಲಿ ಭಯ ಹುಟ್ಟಿಸಿದ್ದಾರೆ. ಆದ್ರೆ ಮಕ್ಕಳಲ್ಲಿನ ಪ್ರತಿಭೆಯನ್ನು ಹೊರ ತರೋದು ಶಾಲೆಯ ಶಿಕ್ಷಕರ ಕರ್ತವ್ಯ. ಹೀಗಾಗಿ ಮಕ್ಕಳಿಗೆ ಶಾಲೆಯಲ್ಲೇ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಕೊಡಿಪ್ಪಾಡಿ ಶಾಲೆಯಲ್ಲಿ 168 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಈ ಶಾಲೆಯಲ್ಲಿ ಸುಮಾರು 61 ಮಂದಿ ಮಕ್ಕಳು ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಜನವರಿ 27 ರಂದು ಶಾಲೆಯಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಸ್ಲಿಂ ಮಕ್ಕಳು ಮಾತ್ರ ಭಾಗವಹಿಸಿಲ್ಲ. ಇದಕ್ಕೆ ಈ ಧರ್ಮಗುರುಗಳು ಹೊರಡಿಸಿದ್ದ ಪತ್ವಾ ಕಾರಣ ಎಂದು ಶಿಕ್ಷಕರು ವಿವರಿಸಿದ್ದಾರೆ.
‘ಧರ್ಮ ಎನ್ನುವುದು ಮಕ್ಕಳ ಬಾಲ್ಯವನ್ನು ಕಸಿಯುವಂತಹ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಆದರೆ ಕೊಡಿಪ್ಪಾಡಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಮುಕ್ತವಾಗಿ ಬೆಳೆಯುವ ಅವಕಾಶವೇ ಇಲ್ಲವಾಗಿದೆ. ಇದೊಂದೇ ಶಾಲೆಯಲ್ಲ, ಇಂತಹ ಹಲವಾರು ಕಟುನಿಯಮಗಳು ಜಿಲ್ಲೆಯ ಅನೇಕ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಂದ ಬಾಲ್ಯದ
ಸೊಗಸನ್ನು ಕಸಿಯುತ್ತಿವೆ’ ಎಂದು ಮಕ್ಕಳ ಹಕ್ಕುಗಳ ಕಾರ್ಯಕರ್ತೆ ಜೊಹರಾ ಹೇಳುತ್ತಾರೆ.
Click this button or press Ctrl+G to toggle between Kannada and English