- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೆಂಪೇಗೌಡ ಬಡಾವಣೆ 5000 ನಿವೇಶನ ಹಂಚಿಕೆಗೆ ಬಿಡಿಎ ಶೀಘ್ರ ಅರ್ಜಿ ಆಹ್ವಾನ

siddaramaiah [1]ಬೆಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜಧಾನಿ ಜನತೆಗೆ ನಿವೇಶನ ಭಾಗ್ಯ ದೊರಕಿಸಲು ತೀರ್ಮಾನಿಸಿದೆ.
ಬಿಡಿಎ ನಿರ್ಮಿಸುತ್ತಿರುವ ಕೆಂಪೇಗೌಡ ಬಡಾವಣೆಯಲ್ಲಿ 5000 ನಿವೇಶನ ಹಂಚಿಕೆ ಮಾಡಲು ಮಾರ್ಚ್ ಅಂತ್ಯದೊಳಗೆ ಅರ್ಜಿ ಅಹ್ವಾನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಗರದಲ್ಲಿ ಬಿಡಿಎ ನಿರ್ಮಿಸಿದ ವಿವಿಧ ಪ್ರಮುಖ ರಸ್ತೆಗಳ ಕೆಳ ಸೇತುವೆಗಳನ್ನು ಶುಕ್ರವಾರ ಉದ್ಘಾಟಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಬಿಡಿಎ ಕಳೆದ 10 ವರ್ಷಗಳಿಂದ ನಗರದ ಜನತೆಗೆ ನಿವೇಶನ ನೀಡಿಲ್ಲ. ಇನ್ನುಮುಂದೆ ಹೀಗಾಗ ಬಾರದೆಂದು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ಹಂಚಿಕೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.

ಕೆಂಪೇಗೌಡ ಬಡಾವಣೆಯಲ್ಲಿ 25,000 ನಿವೇಶನಗಳನ್ನು ನೀಡಲಾಗುತ್ತಿದ್ದು, ಇದಕ್ಕಾಗಿ 2,600 ಎಕರೆ ಜಮೀನು ಬೇಕಿದೆ. ಇದರಲ್ಲಿ 2000 ಎಕರೆ ಪ್ರದೇಶ ಮಾತ್ರ ಭೂ ಸ್ವಾಧೀನವಾಗಿದೆ. ಅದೂ ಒಂದೇ ಸಾಲಿನಲ್ಲಿ ಜಮೀನು ಸಿಗದೆ ಅಲ್ಲಲ್ಲಿ ಮಾತ್ರ ಸ್ವಾಧೀನ ಆಗಿದೆ. ಆದ್ದರಿಂದ ಮೊದಲ ಹಂತದಲ್ಲಿ 5000 ನಿವೇಶನ ನೀಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಸಿದ್ದರಾಮಯ್ಯ ವಿವರಿಸಿದರು. ಅನೇಕ ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಅರ್ಕಾವತಿ ಬಡಾವಣೆ ನಿವೇಶನ ಹಂಚಿಕೆ ವಿವಾದವನ್ನೂ ಸದ್ಯದಲ್ಲೇ ಬಗೆಹರಿಸಲಾಗುತ್ತಿದೆ. ಈ ಬಗ್ಗೆ ಸದ್ಯದಲ್ಲೇ ಸೂಕ್ತ ಪರಿಹಾರ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಪ್ರತಿಕ್ರಿಯಿಸಿದರು.

ಯೋಜನೆಗಳಿಗೆ ಚಾಲನೆ: ಗೊರಗುಂಟೆಪಾಳ್ಯ ಜಂಕ್ಷನ್ ಕೆಳಸೇತುವೆ, ಕಂಠೀರವ ಸ್ಟುಡಿಯೋ ಜಂಕ್ಷನ್ ಸಮೀಪದ ರಿಂಗ್ ರಸ್ತೆ ಉನ್ನತೀಕರಣವನ್ನು 1.25ಕೋಟಿ ವೆಚ್ಚದಲ್ಲಿ ಬಿಡಿಎ ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

1.91ಕೋಟಿ ವೆಚ್ಚದಲ್ಲಿ ಬಿಇಎಲ್ ಬಳಿ ಮೇಲು ಸೇತುವೆ ಹಾಗೂ ಹೊರ ವರ್ತುಲ ರಸ್ತೆ ಉನ್ನತೀಕರಣ ಮಾಡಲಾಗುತ್ತಿದೆ. ಇದರೊಂದಿಗೆ ನಾಗವಾರ, ಕೆ.ಆರ್.ಪುರ, ಸಿಲ್ಕ್‌ಬೋರ್ಡ್ ಮತ್ತು ಗೊರಗುಂಟೆಪಾಳ್ಯವನ್ನು ಸಿಗ್ನಲ್ ಮುಕ್ತವಾಗಿ ಸೇರಲು ಹೊರವರ್ತುಲ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಒಟ್ಟಾರೆ 400 ಕೋಟಿ ಯೋಜನೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಿದ್ದರಾಮಯ್ಯ ವಿವರಿಸಿದರು. ಇದರೊಂದಿಗೆ ಬಿಡಿಎ ಈಗಾಗಲೇ ಪೂರ್ಣಗೊಳಿಸಿರುವ 90 ಕೋಟಿ ವೆಚ್ಚದ ಬಿಇಎಲ್- ಕುವೆಂಪುನಗರ ಕೆಳಸೇತುವೆ, ಭದ್ರಪ್ಪ ಜಂಕ್ಷನ್ ಬಳಿಯ ಮೇಲು ಸೇತುವೆ ಹಾಗೂ ನಾಗವಾರ ಜಂಕ್ಷನ್‌ನ ಮೇಲು ಸೇತುವೆ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲಾಗಿದೆ ಎಂದರು.

ನಗರದಲ್ಲಿ 560 ಕೋಟಿ ವೆಚ್ಚದಲ್ಲಿ  ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ದೇಶದಲ್ಲೇ ಪ್ರಥಮ ಬಾರಿಗೆ ಟೆಂಡರ್ ಶೂರ್‌ನಲ್ಲಿ ರಸ್ತೆಗಳನ್ನು ಉನ್ನತ ಗುಣಮಟ್ಟದಲ್ಲಿ ಪುನರ್ ನಿರ್ಮಿಸಲಾಗುತ್ತಿದೆ ಎಂದು ಅವರು ಪ್ರತಿಕ್ರಿಯೆ ನೀಡಿದರು. ಸಚಿವರಾದ ಕೆ.ಜೆ.ಜಾರ್ಜ್, ರೋಷನ್ ಬೇಗ್, ಕೃಷ್ಣ ಭೈರೇಗೌಡ, ರಾಮಲಿಂಗಾರೆಡ್ಡಿ, ಬಿಡಿಎ ಆಯುಕ್ತ ಶಾಮ್‌ಭಟ್, ಬಿಬಿಎಂಪಿ ಆಯುಕ್ತ ಎಂ.ಲಕ್ಷೀನಾರಾಯಣ ಹಾಜರಿದ್ದರು.

ಬೊಟಾನಿಕಲ್ ಗಾರ್ಡನ್:
ಹೆಣ್ಣೂರು ಕೆರೆ ಬಳಿ ಇರುವ ಅರಣ್ಯ ಪ್ರದೇಶದಲ್ಲಿ ಬಟಾನಿಕಲ್ ಗಾರ್ಡನ್ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಹೆಣ್ಣೂರು ಕೆರೆ ಬಳಿ 33 ಎಕರೆ ಅರಣ್ಯ ಪ್ರದೇಶವಿದ್ದು, ಇದನ್ನು ಸಂರಕ್ಷಿಸುವ ದೃಷ್ಟಿಯಿಂದ ಬಟಾನಿಕಲ್ ಗಾರ್ಡನ್ ಮಾಡಲಾಗುತ್ತಿದೆ. ನಗರದಲ್ಲಿ 6 ಪ್ರದೇಶದಲ್ಲಿ ಇದೇರೀತಿ ಉದ್ಯಾನಗಳನ್ನು ನಿರ್ಮಿಸಲಾಗುತ್ತಿದ್ದು, ಅದಕ್ಕೆ ಅಗತ್ಯ ನೆರವು ಕೂಡ ಸರ್ಕಾರ ನೀಡಲಿದೆ ಎಂದು ಪ್ರತಿಕ್ರಿಯಿಸಿದೆ.

ಪತ್ರಕರ್ತರಿಗೆ ನಿವೇಶನ :
ಮಾನ್ಯತೆ ಪಡೆದ ಪತ್ರಕರ್ತರಿಗೆ ನಿವೇಶನ ನೀಡಬೇಕೆನ್ನುವ ಬೇಡಿಕೆ ಇದೆ. ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು. ಪತ್ರಕರ್ತರ ಬೇಡಿಕೆಗಳನ್ನು ಮೊದಲು ಪರಿಶೀಲಿಸುತ್ತೇನೆ. ಅವು ಸೂಕ್ತ ರೀತಿಯಲ್ಲಿದ್ದರೆ ಕಾನೂನು ವ್ಯಾಪ್ತಿಯಲ್ಲಿ ಕ್ರಮಕೈಗೊಳ್ಳುತ್ತೇನೆ. ಹಾಗೆಯೇ ಪತ್ರಕರ್ತರಿಗೆ ಯಶಸ್ವಿನಿ ಯೋಜನೆಯಡಿ ಆರೋಗ್ಯ ವಿಮಾ ಸೌಲಭ್ಯ ಒದಗಿಸುವ ಬಗ್ಗೆಯೂ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.