- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದಿಢೀರ್ ಪ್ರತಿಭಟನೆ: ಆಸ್ಪತ್ರೆ ವೈದ್ಯನ ಬಂಧನ

Fast-to-protest [1]ಬಂಟ್ವಾಳ: ಬಿ.ಸಿ.ರೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ತುಂಬು ಗರ್ಭಿಣಿ ಚಂಚಲಾಕ್ಷಿ ಹಾಗೂ ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸಾವಿರಾರು ಸಾರ್ವಜನಿಕರು ಶುಕ್ರವಾರ ಸಂಜೆ ಆಸ್ಪತ್ರೆ ಮುಂಭಾಗ ದಿಢೀರನೆ ಪ್ರತಿಭಟನೆ ನಡೆಸಿದರು. ಮುಂದೆ ನಡೆಯಬಹುದಾದ ಅಪಾಯವನ್ನು ತಪ್ಪಿಸಲು ಪೊಲೀಸರು ಆಸ್ಪತ್ರೆ ವೈದ್ಯನನ್ನು ಬಂಧಿಸಿದ್ದಾರೆ.

ಆಕ್ರೋಶಿತ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಆಸ್ಪತ್ರೆಯ ವಠಾರದಲ್ಲಿ ಜಮಾಯಿಸಿ ವೈದ್ಯನ ಬಂಧನಕ್ಕೆ ಬಂಟ್ವಾಳ ನಗರ ಪೊಲೀಸರು ವಿಳಂಬ ಧೋರಣೆ ಅನುಸರಿಸಿದ್ದಾರೆಂದು ಆರೋಪಿಸಿ ಧಿಕ್ಕಾರ ಕೂಗಿದರು. ಈ ಹಂತದಲ್ಲಿ ಆಸ್ಪತ್ರೆ ವಠಾರದೊಳಗೆ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತು. ಆಸ್ಪತ್ರೆಯ ವಠಾರ ಸಹಿತ ರಾಷ್ಟ್ರೀಯ ಹೆದ್ದಾರಿ ಮತ್ತು ಚತುಷ್ಪಥ ಮೇಲ್ಸೇತುವೆ ಮೇಲೆಯೂ ಕುತೂಹಲಿಗರು ಜಮಾಯಿಸಿದ್ದರಿಂದ ವಾಹನಗಳ ಸುಗಮ ಸಂಚಾರಕ್ಕೂ ಅಡಚಣೆಯಾಯಿತು.

ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದ್ದು, ಆಕ್ರೋಶಿತ ಜನರನ್ನು ಸಮಾಧಾನಪಡಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಸಬ್ ಇನ್ಸ್‌ಪೆಕ್ಟರ್‌ಗಳಾದ ಸಂಜಿತ್ ಕಲ್ಲೂರ, ಪ್ರಮೋದ್ ಕುಮಾರ್ ಸ್ಥಳಕ್ಕಾಮಿಸಿ ಉದ್ರಿಕ್ತ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿದರೂ ಫಲಕಾರಿಯಾಗಲಿಲ್ಲ. ಈ ಸಂದರ್ಭ ವೈದ್ಯ ಸ್ವಾಗತ ಕೌಂಟರ್ ಬಳಿಯೇ ನಿಂತಿದ್ದರು.
ಆದರೂ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಳ್ಳದಿದ್ದುದು ಪ್ರತಿಭಟನಾಕಾರರನ್ನು ಮತ್ತಷ್ಟು ಕೆರಳಿಸಿತು. ಸುದ್ದಿ ತಿಳಿದ ಬಂಟ್ವಾಳ ವೃತ್ತನಿರೀಕ್ಷಕ ರಾಜಶೇಖರ ಮೇಸ್ತ್ರಿ ಸ್ಥಳಕ್ಕೆ ದೌಡಾಯಿಸಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪುರಸಭೆ ಸದಸ್ಯ ಸದಾಶಿವ ಬಂಗೇರ, ಲಕ್ಷಣ್ ಅಗ್ರಬೈಲು, ಆನಂದ ಕುಲಾಲ್, ಪ್ರಭಾಕರ ದೈವಗುಡ್ಡೆ, ಕಿಶೋರ್ ಕುಲಾಲ್,  ಗಣೇಶ ಪುಂಜಾರಕೋಡಿ, ರಾಜೇಶ್, ಭಾರತಿ, ಯಶೋಧ ಮೊದಲಾದವರೊಂದಿಗೆ ಮಾತುಕತೆ ನಡೆಸಿದರು.

ಆದರೆ ಗರ್ಭಿಣಿ ಸಾವಿಗೆ ಕಾರಣಕರ್ತರಾದ ವೈದ್ಯನನ್ನು ಬಂಧಿಸದೆ ನಾವು ಕದಲುವುದಿಲ್ಲ ಎಂದು ಪಟ್ಟು ಹಿಡಿದು ಅಲ್ಲೇ ಧರಣಿ ಕುಳಿತರು. ಅಂತಿಮವಾಗಿ ಸಿಐ ರಾಜಶೇಖರ ಮೇಸ್ತ್ರಿ ಅವರು ವೈದ್ಯನೊಂದಿಗೆ ಖುದ್ದು ಚರ್ಚಿಸಿ ಬಳಿಕ ಬಿಗಿ ಬಂದೋಬಸ್ತ್ ಮೂಲಕ ತಮ್ಮ ವಶಕ್ಕೆ ತೆಗೆದುಕೊಂಡು ಠಾಣೆಗೆ ಕರೆದೊಯ್ದರು. ಬಳಿಕ ಆಸ್ಪತ್ರೆಯ ಮುಂಭಾಗ ಜಮಾಯಿಸಿದ್ದ ಆಕ್ರೋಶಿತ ಸಾರ್ವಜನಿಕರು ಸ್ಥಳದಿಂದ ನಿರ್ಗಮಿಸಿದರು.

ಅನುಚಿತ ವರ್ತನೆ: ಸುದ್ದಿ ಮಾಡಲೆಂದು ಸ್ಥಳಕ್ಕೆ ತೆರಳಿದ್ದ ಸುದ್ದಿಗಾರರೊಂದಿಗೆ ವೈದ್ಯನ ಪುತ್ರ ಅನುಚಿತವಾಗಿ ವರ್ತಿಸಿದ ಘಟನೆಯೂ ನಡೆಯಿತು.  ‘ಮಾಧ್ಯಮದಲ್ಲಿ ತಪ್ಪು ಸಂದೇಶವನ್ನು ನೀಡುತ್ತೀರಿ’ ಎಂದು ಉಡಾಫೆಯಿಂದ ಮಾತನಾಡಿದಾಗ ಪತ್ರಕರ್ತರು ಆತನನ್ನು ತರಾಟೆಗೆ ತೆಗೆದುಕೊಂಡರು. ಈ ಹಂತದಲ್ಲಿ ಸ್ಥಳದಲ್ಲಿದ್ದ ಕೆಲ ಪ್ರಮುಖರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.