- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

20ರೊಳಗೆ ಜಿಪಿಎಸ್ ಅಳವಡಿಕೆ ಕಷ್ಟ: ಸಚಿವ ರಾಮಲಿಂಗಾರೆಡ್ಡಿ

KSRTC [1]ಬೆಂಗಳೂರು: ಸಾರ್ವಜನಿಕ ಸಾರಿಗೆಯ ಎಲ್ಲ ವಾಹನಗಳಿಗೆ ಫೆ. 20ರ ಒಳಗೆ ಜಿಪಿಎಸ್ ಅಳವಡಿಕೆ ಕಷ್ಟ. ಆ ಬಗ್ಗೆ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಸಾರ್ವಜನಿಕ ಸಂಚಾರದ ಅಂತಾರಾಷ್ಟ್ರೀಯ ಸಂಸ್ಥೆ(ಯುಐಟಿಪಿ) ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಪ್ರಥಮ ಯುಐಟಿಪಿ ಬಸ್ ವಿಚಾರಸಂಕಿರಣ’ ಉಯುಐಟಿಪಿದ್ಘಾಟಿಸಿ ಅವರು ಮಾತನಾಡಿದರು.

ಹತ್ತು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿನ ಸಾರ್ವಜನಿಕ ಸಾರಿಗೆ ವಾಹನಗಳಿಗೆ ಫೆ. 20ರ ಒಳಗೆ ಜಿಪಿಎಸ್ ಅಳವಡಿಕೆ ಕಡ್ಡಾಯ ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದೆ. ಆ ಪ್ರಕಾರ ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ ಮುಂತಾದೆಡೆಯ ಸಾರ್ವಜನಿಕ ಸಾರಿಗೆಗಳಲ್ಲಿ ಜಿಪಿಎಸ್ ಅಳವಡಿಕೆ ಕಡ್ಡಾಯವಾಗುತ್ತದೆ. ಕೇಂದ್ರದ ಸೂಚನೆ ಮೇರೆಗೆ ಅದನ್ನು ಪಾಲಿಸಬೇಕಾಗುತ್ತದೆ. ಆದರೆ ಫೆ. 20ರ ಒಳಗೆ ಜಿಪಿಎಸ್ ಅಳವಡಿಸುವುದು ಸಾಧ್ಯವಿಲ್ಲ. ಅದಕ್ಕಾಗಿ ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಅಲ್ಲದೆ ಜಿಪಿಎಸ್ ಅಳವಡಿಕೆ ಬಗ್ಗೆ ಇಲಾಖೆಗೆ ಇದುವರೆಗೆ ಅಧಿಕೃತ ಸೂಚನೆ ಬಂದಿಲ್ಲ. ಆ ಬಗ್ಗೆ ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಲಾಗುವುದು. ಅಧಿಕೃತ ಮಾಹಿತಿ ಬಂದ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಭವಿಷ್ಯ ನಿಧಿ ಹಣ ಬಾಕಿ ಉಳಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಸಂಸ್ಥೆ ಕೆಲವರ್ಷಗಳ ಕಾಲ ನಷ್ಟದಲ್ಲಿದ್ದುದರಿಂದ ಈ ರೀತಿ ಆಗಿದೆ. ಹಾಗಾಗಿ ಸಾಲ ಪಡೆದು ಬಾಕಿ ತೀರಿಸುವಂತೆ ಸಂಸ್ಥೆಗೆ ಸೂಚಿಸಲಾಗಿದೆ. ಜತೆಗೆ ಆ ಭಾಗದಲ್ಲಿ ಖಾಸಗಿ ಬಸ್ಸುಗಳ ಹಾವಳಿ ನಿಯಂತ್ರಿಸಿರುವುದರಿಂದ ಆ ಸಂಸ್ಥೆಗೆ ಮಾಸಿಕ ರು. 6 ಕೋಟಿ ಆದಾಯ ಬರುತ್ತಿದೆ. ಮುಂದಿನ ವರ್ಷದೊಳಗೆ ಸಂಸ್ಥೆ ನಷ್ಟದಿಂದ ಹೊರಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನರನ್ನು ಸಾರ್ವಜನಿಕ ಸಾರಿಗೆಯತ್ತ ಸೆಳೆಯಬೇಕಾದರೆ ಗುಣಮಟ್ಟ ಹಾಗೂ ಹೊಸ ಮಾದರಿಯ ಸೇವೆ ನೀಡಿ ಸಾರ್ವಜನಿಕರ ಧೋರಣೆ ಬದಲಿಸಬೇಕು. ಸಾರ್ವಜನಿಕ ಸಾರಿಗೆ ಸಂಸ್ಥೆಗಳು ಕಾರ್ಪೊರೇಟ್ ಸಂಸ್ಕೃತಿಯ ಬದಲಿಗೆ ಗ್ರಾಹಕ ಹಾಗೂ ಪ್ರಯಾಣಿಕ ಕೇಂದ್ರಿತ ಸಂಸ್ಥೆಗಳಾಗಿ ರೂಪುಗೊಳ್ಳಬೇಕು. ಅಲ್ಲದೆ, ಯುವಜನರ ಅಭಿರುಚಿ ಹಾಗೂ ಜೀವನಶೈಲಿಗೆ ತಕ್ಕಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಾಚಾರಿ ಮಾತನಾಡಿ, ಸಾರ್ವಜನಿಕ ಸಾರಿಗೆ ಅಗ್ಗ ಹಾಗೂ ಪ್ರತಿ ಪ್ರದೇಶಕ್ಕೂ ಅದು ತಲುಪುವಂತಿರಬೇಕು. ಅಲ್ಲದೆ ಬಸ್ಸುಗಳನ್ನು ಹೆಚ್ಚಿಸುವ ಮುನ್ನ ರಸ್ತೆ ಅಗಲೀಕರಣ, ಮೂಲಭೂತ ಸೌಲಭ್ಯ ಕಲ್ಪಿಸಬೇಕಾದ್ದು ಅನಿವಾರ್ಯ ಎಂದರು.

ಯುಐಟಿಪಿ ಇಂಡಿಯಾ ಮುಖ್ಯಸ್ಥ ಡಿ.ಸಿ.ಪ್ರಕಾಶ್ ಮಾತನಾಡಿ, ದೇಶದಲ್ಲಿ ಸಾರ್ವಜನಿಕ ಸಾರಿಗೆ ಶೇ. 35ರಷ್ಟು ಮಾತ್ರ ಬಳಕೆಯಾಗುತ್ತಿದ್ದು, ಅದನ್ನು ಗಣನೀಯವಾಗಿ ಹೆಚ್ಚಿಸುವುದು ನಮ್ಮ ಉದ್ದೇಶ. ಅದಕ್ಕಾಗಿ ಸಾರಿಗೆ ವಲಯದ ವಿವಿಧ ಸಂಸ್ಥೆಗಳು, ಬಸ್ ಕಂಪನಿಗಳ ಮುಖ್ಯಸ್ಥರನ್ನು ಒಳಗೊಂಡಂತೆ ದೇಶದಲ್ಲೇ ಪ್ರಥಮ ಬಾರಿಗೆ ವಿಚಾರಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದರು.

ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ್ ಪ್ರಸಾದ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್, ಕೆಎಸ್‌ಆರ್‌ಟಿಸಿ ನಿರ್ದೇಶಕ(ಭದ್ರತಾ ಮತ್ತು ಜಾಗೃತಾ ವಿಭಾಗ) ಬಿ.ಎನ್.ಎಸ್.ರೆಡ್ಡಿ ಹಾಜರಿದ್ದರು.

ರಸ್ತೆ ಬದಿಯಲ್ಲಿ ಹೊಟೇಲ್, ಶೌಚಾಲಯ ವ್ಯವಸ್ಥೆಗೆ ಹಾಗೂ ಬಸ್ಸು ನಿಲ್ದಾಣ ನಿರ್ಮಾಣ, ದುರಸ್ತಿ ಮತ್ತು ಮೇಲ್ದರ್ಜೆಗೇರಿಸುವುದಕ್ಕೆ ಸಂಬಂಧಪಟ್ಟಂತೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡುವಂತೆ ಮುಖ್ಯಮಂತ್ರಿ ಅವರಲ್ಲಿ ಕೋರಲಾಗಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಈ ಬಜೆಟ್‌ನಲ್ಲಿ ಸಾರಿಗೆಗೆ ಎಷ್ಟು ಅನುದಾನ ಕೇಳಿದ್ದೀರಿ ಎಂಬ ಪ್ರಶ್ನೆಗೆ ಅವರು ಸುದ್ದಿಗಾರರಿಗೆ ಈ ರೀತಿ ಪ್ರತಿಕ್ರಿಯಿಸಿದರು.