ಚೌಕಾಸಿ ಮಾಡಿ ಪ್ರಯಾಣಿಸಿದ್ರೆ ಅರ್ಧದಲ್ಲೇ ಇಳಿಸ್ತಾರೆ!

12:32 PM, Thursday, February 20th, 2014
Share
1 Star2 Stars3 Stars4 Stars5 Stars
(4 rating, 6 votes)
Loading...

Private-Tourist-busಮಂಗಳೂರು: ದರದಲ್ಲಿ ಚೌಕಾಸಿ ಮಾಡಿ ಟಿಕೆಟ್ ಇಲ್ಲದೆ ದೂರ ಪ್ರದೇಶಗಳಿಗೆ ಖಾಸಗಿ ಟೂರಿಸ್ಟ್ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರೇ ಎಚ್ಚರ. ಇನ್ನು ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ ಚೆಕ್ಕಿಂಗ್ ಸಿಬ್ಬಂದಿ ಮಾರ್ಗ ಮಧ್ಯೆಯೇ ಇಳಿಸುತ್ತಾರೆ. ಮಾತ್ರವಲ್ಲ ಈ ಖಾಸಗಿ ಟೂರಿಸ್ಟ್ ಬಸ್‌ಗಳಲ್ಲಿ ರಾಜ್ಯಾದ್ಯಂತ ಏಕರೂಪದ ಪ್ರಯಾಣ ದರ ಕೂಡ ಜಾರಿಗೊಳಿಸಲಾಗಿದೆ.

ಇದುವರೆಗೆ ಖಾಸಗಿ ಟೂರಿಸ್ಟ್ ಬಸ್‌ಗಳಲ್ಲಿ ದಿನಕ್ಕೊಂದು ದರ ವಸೂಲಿ ಮಾಡುತ್ತಿದ್ದರು, ಇನ್ನೂ ಕೆಲವು ಬಸ್ ಕಂಪನಿಗಳು ದುಬಾರಿ ದರ ಪೀಕಿಸುತ್ತಿದ್ದರು. ನಿಗದಿತ ಜಾಗದ ಬದಲು ಅರ್ಧದಲ್ಲೇ ಇಳಿಸುತ್ತಿದ್ದರು. ಇದು ಪ್ರಯಾಣಿಕರ ಕಿರಿಕಿರಿ, ತಗಾದೆಗೆ ಕಾರಣವಾಗಿತ್ತು. ಈ ಬಗ್ಗೆ ಪ್ರಯಾಣಿಕರು ದೂರು ನೀಡಿದರೆ ಬಸ್ ಕಂಪನಿಯಿಂದ ಸರಿಯಾದ ಸ್ಪಂದನ ಸಿಗುತ್ತಿರಲಿಲ್ಲ. ಈ ಅವ್ಯವಸ್ಥೆ ಇನ್ನು ಖಾಸಗಿ ಟೂರಿಸ್ಟ್ ಬಸ್‌ಗಳಲ್ಲಿ ಕಂಡುಬರದು. ಇದಕ್ಕೆಂದೇ ಕರ್ನಾಟಕ ರಾಜ್ಯ ಟೂರಿಸ್ಟ್ ಬಸ್ ಮಾಲಕರ ಸಂಘಟನೆ ರಚನೆಯಾಗಿದೆ.

ಏಕರೂಪ ದರ: ಒಂದು ನಗರದಿಂದ ಇನ್ನೊಂದು ನಗರಕ್ಕೆ ತೆರಳುವ ಖಾಸಗಿ ಟೂರಿಸ್ಟ್ ಬಸ್‌ಗಳಲ್ಲಿ ಏಕರೂಪ ದರ ನಿಗದಿಪಡಿಸಲಾಗಿದೆ. ರಾಜ್ಯದ ಯಾವುದೇ ಭಾಗದಿಂದ ಇನ್ನೊಂದು ಭಾಗಕ್ಕೆ ಎಷ್ಟೇ ಟೂರಿಸ್ಟ್ ಬಸ್‌ಗಳು ಸಂಚರಿಸಲಿ, ಅವುಗಳಲ್ಲಿ ದರ ಒಂದೇ ತೆರನಾಗಿ ಇರುತ್ತದೆ. ಇಷ್ಟರವರೆಗೆ ಬೇರೆ ಬೇರೆ ಕಂಪನಿಗಳ ಬಸ್‌ಗಳಲ್ಲಿ ದರ ವ್ಯತ್ಯಾಸ ಇತ್ತು. ಉದಾಹರಣೆಗೆ ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ನಿತ್ಯ 85ಕ್ಕೂ ಅಧಿಕ ಟೂರಿಸ್ಟ್ ಬಸ್‌ಗಳು ಸಂಚರಿಸುತ್ತವೆ. ಒಂದೊಂದು ಬಸ್‌ನಲ್ಲಿ ಒಂದೊಂದು ದರ. ನಿಗದಿತ ಪ್ರಯಾಣ ದರ ಕೆಎಸ್‌ಆರ್‌ಟಿಸಿಯಲ್ಲಿ ಮಾತ್ರ ಕಾಣಬಹುದಿತ್ತು.

ಈಗ ಸ್ಲೀಪರ್, ಎಸಿ, ನಾನ್ ಎಸಿ ಟೂರಿಸ್ಟ್ ಬಸ್‌ಗಳಲ್ಲಿ ಎಕ್ಸಿಕ್ಯೂಟಿವ್ ವರ್ಗಕ್ಕೆ ಅನುಗುಣವಾಗಿ ದರ ನಿಗದಿಪಡಿಸಲಾಗಿದೆ. ರಜಾ ದಿನ ಹೊರತುಪಡಿಸಿ ಉಳಿದ ದಿನಗಳಲ್ಲಿ ಮಂಗಳೂರು-ಬೆಂಗಳೂರು ಪ್ರಯಾಣದರ ರು. 600, ಮಂಗಳೂರು ಮುಂಬೈ ರು. 1,200 ದರ ನಿಗದಿಪಡಿಸಿದ್ದಾರೆ. ಇದೇ ರೀತಿ ಬೇರೆ ಕಡೆಗಳಿಂದ ಸಂಚರಿಸುವ ಟೂರಿಸ್ಟ್ ಬಸ್‌ಗಳಲ್ಲೂ ಜಾರಿಯಾಗಿದೆ ಎನ್ನುತ್ತಾರೆ ಮಂಗಳೂರಿನ ಟೂರಿಸ್ಟ್ ಬಸ್ ಟಿಕೆಟ್ ಬುಕ್ಕಿಂಗ್ ಏಜೆಂಟರು.

ಅರ್ಧದಲ್ಲೇ ಇಳಿಸ್ತಾರೆ!: ಅಲ್ಲಲ್ಲಿ ಚೌಕಾಸಿ ಮಾಡಿ ಬಸ್ ಹತ್ತುವವರಿದ್ದರು. ಬಸ್‌ನಲ್ಲಿ ಸೀಟು ಖಾಲಿ ಇದ್ದರೆ ಪ್ರಮುಖ ನಿಲ್ದಾಣಗಳಿಂದ ಇಂಥವರು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದರು. ಹೀಗೆ ಪ್ರಯಾಣಿಸಲು ಚಾಲಕ-ನಿರ್ವಾಹಕರ ಹೊಂದಾಣಿಕೆಯಿಂದ ಸಾಧ್ಯವಾಗುತ್ತಿತ್ತು. ಈ ಮೊತ್ತ ಕಂಪನಿಗೆ ಹೋಗದೆ, ಸಿಬ್ಬಂದಿಗಳ ಜೇಬು ಸೇರುತ್ತಿತ್ತು. ಇದಕ್ಕೆ ಇನ್ನು ಕಡಿವಾಣ ಬಿದ್ದಿದೆ.

‘ಒಂದು ವಾರ ಟೂರಿಸ್ಟ್ ಬಸ್‌ನಲ್ಲಿ ಪೋಸ್ಟರ್ ಹಚ್ಚುತ್ತೇವೆ. ಟಿಕೆಟ್ ಇಲ್ಲದೆ ಪ್ರಯಾಣ ಕಂಡುಬಂದರೆ ದಾರಿ ಮಾಧ್ಯೆ ತಪಾಸಣೆ ನಡೆಸುವ ಸಿಬ್ಬಂದಿ ಮುಲಾಜಿಲ್ಲದೆ ಅಂಥ ಪ್ರಯಾಣಿಕರನ್ನು ಕೆಳಗಿಳಿಸುತ್ತಾರೆ. ಬಳಿಕ ಇದಕ್ಕೆ ಬಸ್ ಮಾಲಕರು ಹೊಣೆಯಲ್ಲ. ಪ್ರಯಾಣಿಕರಿಗೆ ಸಾಕಷ್ಟು ಮುಂಚಿತವಾಗಿಯೇ ಈ ಬಗ್ಗೆ ತಿಳಿಸುತ್ತೇವೆ’ ಎನ್ನುತ್ತಾರೆ ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಸದಾನಂದ ಛಾತ್ರಾ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English