- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸ್ಥಳೀಯ ಸಂಸ್ಥೆ ಅಧ್ಯಕ್ಷ ಉಪಾಧ್ಯಕ್ಷರ ನೇಮಕ ಹೈಕೋರ್ಟ್ ಒಪ್ಪಿಗೆ

High-Court [1]ಬೆಂಗಳೂರು: ಕಾನೂನು ತೊಡಕಿನಿಂದ ಕಳೆದೊಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯದ ಸ್ಥಳೀಯ ಸಂಸ್ಥೆ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಯ ಚುನಾವಣೆಗೆ ಹೈಕೋರ್ಟ್ ಕೊನೆಗೂ ಹಸಿರು ನಿಶಾನೆ ತೋರಿದೆ.

ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಯ ಮೀಸಲು ಪಟ್ಟಿಯನ್ನು ಮರು ತಯಾರಿಸುವಂತೆ ಏಕ ಸದಸ್ಯ ಪೀಠ ನೀಡಿದ್ದ ಆದೇಶಕ್ಕೆ ಮುಖ್ಯ ನ್ಯಾ.ಡಿ.ಎಚ್.ವಘೇಲ ಹಾಗೂ ನ್ಯಾ.ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದ್ದು, ಶೀಘ್ರದಲ್ಲೇ ಚುನಾವಣೆ ನಡೆಸುವಂತೆ ಆದೇಶಿಸಿದೆ.

ಮಾ.25ಕ್ಕೆ ಮುಂದೂಡಿಕೆ: ವಿವಾದಿತ ಮಂಗಳೂರು ನಗರಪಾಲಿಕೆ ಮೇಯರ್ ಹುದ್ದೆಯನ್ನು ಸಾಮಾನ್ಯ ಹಾಗೂ ಉಪ ಮೇಯರ್ ಹುದ್ದೆಯನ್ನು ಸಾಮಾನ್ಯ ಮಹಿಳೆಗೆ ಮೀಸಲಿಡುವಂತೆ ಆದೇಶಿಸಿದೆ. ಅಲ್ಲದೆ, ಚುನಾವಣೆಯ ಅರ್ಜಿಯ ಅಂತಿಮ ಆದೇಶಕ್ಕೊಳಪಡುತ್ತದೆ ಎಂದು ಸ್ಪಷ್ಟಪಡಿಸಿರುವ ಪೀಠ, ವಿಚಾರಣೆಯನ್ನು ಮಾರ್ಚ್ 25ಕ್ಕೆ ಮುಂದೂಡಿದೆ.

ಇದರಿಂದ ಬೆಂಗಳೂರು ಹೊರತುಪಡಿಸಿ ರಾಜ್ಯದ ಏಳು ಪಾಲಿಕೆಗಳ ಮೇಯರ್, ಉಪಮೇಯರ್ ಹಾಗೂ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳಿಗೆ ಈಗ ಸರ್ಕಾರ ರಚಿಸಿರುವ ಮೀಸಲು ಪಟ್ಟಿಯ ಆಧಾರದ ಮೇಲೆಯೇ ಚುನಾವಣೆ ನಡೆಯಲಿದೆ.

ವಿವಾದವೇನು?: ಮಂಗಳೂರು ಪಾಲಿಕೆ ವಿವಾದ ಸಂಬಂಧ  ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳ ಮೀಸಲು ಪಟ್ಟಿಯಲ್ಲಿ ಎಲ್ಲೆಲ್ಲಿ ಒಂದೇ ವರ್ಗಕ್ಕೆ ಮೀಸಲು ಪುನರಾವರ್ತನೆಯಾಗಿದೆಯೋ ಅಲ್ಲಿ ಮರು ಮೀಸಲು ಪಟ್ಟಿ ತಯಾರಿಸುವಂತೆ ಆದೇಶಿಸಿತ್ತು.