ಮಂಗಳೂರು: ಮಾನವ ಸಹಿತ ಬಾಹ್ಯಾಕಾಶ ಯಾನ ಮಾಡುವ ಮೊದಲ ಹೆಜ್ಜೆ ಅಂಗವಾಗಿ ಮೂರು ಪಟ್ಟು ಹೆಚ್ಚು ಸಾಮರ್ಥ್ಯದ ಕ್ರಯೋಜೆನಿಕ್ ಜಿಎಸ್‌ಎಲ್‌ವಿ ಮಾರ್ಸ್3 ಉಪಗ್ರಹ ಉಡ್ಡಯನಕ್ಕೆ ಸಿದ್ಧಗೊಳಿಸಲಾಗುತ್ತಿದೆ ಎಂದು ಇಸ್ರೊ ಅಧ್ಯಕ್ಷ ಡಾ.ಕೆ. ರಾಧಾಕೃಷ್ಣನ್ ಹೇಳಿದರು.
ಮಂಗಳೂರು ವಿಶ್ವ ವಿದ್ಯಾಲಯ ಕ್ಯಾಂಪಸ್‌ನಲ್ಲಿ ಸೋಮವಾರ ವಿವಿ ಘಟಿಕೋತ್ಸವ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಎರಡು ವರ್ಷದ ಬಳಿಕ ಮೂವರು ಮಾನವರನ್ನು ಒಯ್ಯುವ ಸಾಮರ್ಥ್ಯದ ಜಿಎಸ್‌ಎಲ್‌ವಿ ಮಾರ್ಸ್3 ರಾಕೆಟ್ ಮೂಲಕ ಉಪಗ್ರಹ ಉಡ್ಡಯನ ಮಾಡಲಿದ್ದೇವೆ ಎಂದರು. ಮಾನವ ಸಹಿತ ಬಾಹ್ಯಾಕಾಶ ಯಾನ ಮಾಡುವ ಅಧಿಕೃತ ಕಾರ್ಯಕ್ರಮ ಈಗ ಇಲ್ಲ. ಆದರೆ ಅದಕ್ಕೆ ಪೂರಕವಾಗಿ ರಾಕೆಟ್ ಜತೆ ಮಾನವರನ್ನು ಕಳುಹಿಸುವ ಜಿಎಸ್‌ಎಲ್‌ವಿ ಮಾರ್ಸ್3 ಅಭಿವೃದ್ಧಿಗೊಳಿಸುತ್ತಿದ್ದೇವೆ. ಲ್ಯಾಬ್‌ನಲ್ಲಿ ಪರೀಕ್ಷೆಗಳು ನಡೆಯುತ್ತಿದೆ ಎಂದರು.
ಪಿಎಸ್‌ಎಲ್‌ವಿಯಲ್ಲಿ ಒಬ್ಬ ಯಾನಿ, ಜಿಎಸ್‌ಎಲ್‌ವಿಯಲ್ಲಿ 2 ಮಂದಿ ಒಯ್ಯಬಹುದು. ಮೂರು ಪಟ್ಟು ಹೆಚ್ಚಿನ ಸಾಮರ್ಥ್ಯ ಜಿಎಸ್‌ಎಲ್‌ವಿ ಮಾರ್ಸ್ 3ಯಲ್ಲಿ ಕ್ರಯೊಜಿನಿಕ್ ಹಂತ ಅಳವಡಿಸಿದ್ದು, ಮೂರು ಮಂದಿ ಮಾತ್ರವಲ್ಲದೆ 3 ಟನ್ ಲ್ಯಾಬೊರೇಟರಿಯನ್ನು ಒಯ್ಯಬಹುದು.
ಮಂಗಳಯಾನಕ್ಕಿಂತ ಚಂದ್ರಯಾನ ಕಷ್ಟ. ಪ್ರತಿ 26 ತಿಂಗಳಿಗೊಮ್ಮೆ ಚಂದ್ರ ಭೂಮಿಗೆ ಹತ್ತಿರವಾಗುತ್ತಾನೆ. ಹೀಗಾಗಿ ಇನ್ನೆರಡು ವರ್ಷ ಚಂದ್ರಯಾನಕ್ಕೆ ಸಿದ್ಧತೆ ನಡೆಸಲು ಸಮಯ ಇದೆ ಎಂದರು.
ಭಾರತೀಯರಲ್ಲಿ ಧೀ ಶಕ್ತಿ ಇದೆ. ಮುಂದಕ್ಕೆ ಇದೇ ಧೀ ಶಕ್ತಿ ವಿಶ್ವವನ್ನು ಆಳಲಿದೆ ಎಂದು ವಿವೇಕಾನಂದರು ಹೇಳಿದ್ದಾರೆ. ಮಂಗಳೂರು ವಿವಿಯಲ್ಲಿ ಕಲಿತ ವಿದ್ಯಾರ್ಥಿಗಳು ಬಾಹ್ಯಾಕಾಶ ಯೋಜನೆಯಲ್ಲಿ ಭಾವಹಿಸುತ್ತಿದ್ದಾರೆ. ಭಾಗವಹಿಸುವಿಕೆ ಹೆಚ್ಚಿದರೆ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತ ನೇತೃತ್ವ ವಹಿಸುವ ಅವಕಾಶ ಉಜ್ವಲವಾಗಿದೆ ಎಂದರು.
ವಿಶ್ವದ ಮೊದಲ ದೇಶ: ಸಮುದ್ರದ ಅಲೆಗಳ ಎತ್ತರವನ್ನು ಕಂಡು ಹಿಡಿಯಲು ಉಪಗ್ರಹ ನೆರವಾಗುತ್ತಿದೆ. ಹವಾಮಾನ, ಇಬ್ಬನಿ ಅಳೆಯಲು ಭಾರತ ಒಂದು ಉಪಗ್ರಹವನ್ನೇ ಉಡ್ಡಯನ ಮಾಡಿದೆ. ಈ ರೀತಿ ಹವಾಮಾನಕ್ಕೆ ಮಾತ್ರ ಉಪಗ್ರಹ ಬಳಸುತ್ತಿರುವುದು ವಿಶ್ವದಲ್ಲಿ ಭಾರತ ಮಾತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಉಪಗ್ರಹ ಸ್ವತಂತ್ರ ಉಡ್ಡಯನ ನಡೆಸುವ ವಿಶ್ವದ ನಾಲ್ಕನೇ ದೇಶ ಭಾರತ ಎಂದರು.
ಜೀವ ರಕ್ಷಣೆ: ಮಾಹಿತಿ ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರ ಮಾಡಿರುವ ಬಾಹ್ಯಾಕಾಶ ತಂತ್ರಜ್ಞಾನ, ಪ್ರಕೃತಿ ವಿಕೋಪಗಳ ಸಂದರ್ಭ ಸಾವಿರಾರು ಮಂದಿಯ ಜೀವ ಉಳಿಸುವ ಕೆಲಸ ಕೂಡಾ ಮಾಡುತ್ತಿದೆ. ಹಿಂದೆಲ್ಲ ಪ್ರಕೃತಿ ವಿಕೋಪ ಸಂದರ್ಭ ಸಹಸ್ರಾರು ಮಂದಿ ಸಾವನ್ನಪ್ಪುತ್ತಿದ್ದರು. ಆದರೆ ಈಗ ಉಪಗ್ರಹ ಮೂಲಕ ಪೂರ್ವ ಸೂಚನೆಯ ಖಚಿತ ಮಾಹಿತಿ ಪಡೆಯುವ ಕಾರಣ ಎಲ್ಲರನ್ನು ರಕ್ಷಿಸಲು ಸಾಧ್ಯವಾಗುತ್ತಿದೆ ಎಂದರು. ಕುಲಪತಿ ಟಿ.ಸಿ. ಶಿವಶಂಕರಮೂರ್ತಿ ಪದವಿ ಪ್ರದಾನ ಮಾಡಿದರು. ಕುಲಸಚಿವ ಪಿ.ಎಸ್. ಎಡಪಡಿತ್ತಾಯ ಸ್ವಾಗತಿಸಿದರು. ಪರೀಕ್ಷಾಂಗ ಕುಲಸಚಿವ ಬಿ.ನಾರಾಯಣ ಇದ್ದರು.
112 ಮಂದಿಗೆ ಪಿಎಚ್‌ಡಿ ಪ್ರದಾನ
ಮಂಗಳೂರು: ಮಂಗಳೂರು ವಿಶ್ವ ವಿದ್ಯಾಲಯದ 32ನೇ ಘಟಿಕೋತ್ಸವದಲ್ಲಿ 112 ಮಂದಿಗೆ ಡಾಕ್ಟರೇಟ್ ಪದವಿ, 36 ಮಂದಿಗೆ ಚಿನ್ನದ ಪದಕ ಮತ್ತು 65 ಮಂದಿ ವಿದ್ಯಾರ್ಥಿಗಳಿಗೆ ನಗದು ಬಹುಮಾನವನ್ನು ಕುಲಪತಿ ಟಿ.ಸಿ.ಶಿವಶಂಕರಮೂರ್ತಿ ಪ್ರದಾನ ಮಾಡಿದರು. ಒಟ್ಟು 60 ಮಂದಿಗೆ ಸ್ನಾತಕೋತ್ತರ ಮತ್ತು ಪದವಿ ರ್ಯಾಂಕ್ ಪ್ರದಾನ ಮಾಡಲಾಯಿತು.
ಚಿನ್ನದ ಹುಡುಗಿ ಶಾಂತಿ ಶೆಣೈ: 2 ಚಿನ್ನದ ಪದಕ ಮತ್ತು 5 ನಗದು ಪುರಸ್ಕಾರ ಪಡೆದ ಶಾಂತಿ ಶೆಣೈ, ಉಡುಪಿ ದಿನಕರ ಮತ್ತು ಜ್ಯೋತಿ ದಂಪತಿ ಪುತ್ರಿ. ಅಜ್ಜರಕಾಡು ಸರ್ಕಾರಿ ಕಾಲೇಜ್‌ನಲ್ಲಿ ಪದವಿ ಮುಗಿಸಿದ್ದು, ಅಲ್ಲಿಯೇ ಇತಿಹಾಸ ಎಂ.ಎ. ಮಾಡಿದ ಶಾಂತಿ ಇದೀಗ ಈಗ ಅದೇ ಕಾಲೇಜ್‌ನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ.
‘ತಂದೆ ತಾಯಿ ಹಪ್ಪಳ ಸಂಡಿಗೆ ಮಾರಾಟ ಮಾಡಿ ಮಗಳಿಗೆ ಕಲಿಸಿದ್ದಾರೆ. ರ್ಯಾಂಕ್ ಬಂದದ್ದು ಖುಷಿಯಾಗಿದೆ. ಇದರ ಶ್ರೇಯಸ್ಸು ತಂದೆ, ತಾಯಿ ಮತ್ತು ಗುರು ಸುರೇಶ್ ಅವರಿಗೆ ಸಮರ್ಪಿಸುತ್ತೇನೆ. ಮುಂದಕ್ಕೆ ಪಿಎಚ್‌ಡಿ ಮಾಡುವ ಹಂಬಲ ಇದೆ’ ಎಂದು ಕನ್ನಡ ಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ.
ಶ್ರೇಯಾಂಕ ರಾನಡೆ: ಕನ್ನಡ ಎಂಎಯಲ್ಲಿ ಮೊದಲ ರ್ಯಾಂಕ್ ಪಡೆದ ಶ್ರೇಯಾಂಕ ರಾನಡೆ, ‘ಕನ್ನಡದ ಮೇಲಿನ ಅಭಿಮಾನ, ವಿಷಯದ ಜ್ಞಾನಕ್ಕೆ ಹೆಚ್ಚಿನ ಅಧ್ಯಯನ ನಡೆಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಕನ್ನಡ ಸಾಹಿತ್ಯ ವ್ಯಕ್ತಿತ್ವ ವಿಕಸನಕ್ಕೆ ವೇದಿಕೆಗೆ, ಮುಂದಿನ ಭವಿಷ್ಯಕ್ಕಾಗಿ ಓದಿದೆ. ಜಾಗತೀಕರಣ ಸಂದರ್ಭ ಎಲ್ಲರೂ ಕನ್ನಡ, ಸಂಸ್ಕೃತಿ, ಸಾಹಿತ್ಯದಿಂದ ವಿಮುಖರಾಗುತ್ತಿದ್ದಾರೆ. ಆದರೆ ಕನ್ನಡಕ್ಕೆ ವಿಶಾಲ ಅವಕಾಶ ಇದೆ. ರ್ಯಾಂಕ್ ಬರಲು ಓದಿಲ್ಲ, ಆದರೆ ನನಗೆ ರ್ಯಾಂಕ್ ಬರಬಹುದು ಎಂಬ ನಿರೀಕ್ಷೆ ಇತ್ತು. ಓದಿನ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ಭಾಗವಹಿಸುತ್ತಿದ್ದೆ’ ಎಂದು ಹೇಳಿದರು.
Click this button or press Ctrl+G to toggle between Kannada and English