- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಉಭಯ ಸದನಗಳಲ್ಲಿ ಲೋಕಾಯುಕ್ತ ಸದ್ದು

Jagadish-Shettar [1]ಬೆಂಗಳೂರುಃ ಲೋಕಾಯುಕ್ತ ಕಾಯಿದೆ ತಿದ್ದುಪಡಿ ವಿಚಾರವು ಉಭಯ ಸದನಗಳಲ್ಲಿ ಮಂಗಳವಾರ ಸದ್ದು ಮಾಡಿತು.

ಲೋಕಾಯುಕ್ತ ಕಾಯಿದೆಯನ್ನು ರಾಜ್ಯ ಸರ್ಕಾರ ಶಕ್ತಿ ಹೀನ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧಪಕ್ಷ ನಾಯಕ ಜಗದೀಶ್ ಶೆಟ್ಟರ್ ಕಿಡಿಕಾರಿದರೆ, ಭ್ರಷ್ಟಾಚಾರ ನಿಯಂತ್ರಣ ಎನ್ನುವುದು ಕಾಂಗ್ರೆಸ್ ಪಾಲಿಗೆ ಘೋಷಣೆಗೆ ಮಾತ್ರ ಸೀಮಿತ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಡಿ.ವಿ.ಸದಾನಂದಗೌಡ ಲೇವಡಿ ಮಾಡಿದರು. ಲೋಕಾಯುಕ್ತ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಸರ್ಕಾರ ಅದನ್ನು ಶಕ್ತಿಹೀನಗೊಳಿಸಲು ನಿರ್ಧರಿಸಿದಂತಿದೆ. ಕ್ಯಾಬಿನೆಟ್‌ನಲ್ಲೇ ಇದಕ್ಕೆ ಅನುಮತಿ ನೀಡಿ, ವಾಪಸ್ ತೆಗೆದುಕೊಳ್ಳುವ ಗೊಂದಲ ಏಕೆ ಎಂದು ಜಗದೀಶ್‌ಶೆಟ್ಟರ್ ಪ್ರಶ್ನಿಸಿದರು.

ಲೋಕಾಯುಕ್ತ ಕಾಯಿದೆ ತಿದ್ದುಪಡಿ ಕುರಿತಂತೆ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಕಾಯಿದೆಯನ್ನು ಸರ್ಕಾರ ದುರ್ಬಲಗೊಳಿಸುತ್ತಿದೆ ಎಂದು ಲೋಕಾಯುಕ್ತರೇ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಮಾಡಿಯೇ ಸಿದ್ಧ ಎಂದು ಅಧಿಕಾರಕ್ಕೆ ಬಂದ ಸರ್ಕಾರ ಕೇವಲ ಮಾತಿನ ಅರಮನೆ ಕಟ್ಟುತ್ತಿದೆ ಎಂದು ಸದಾನಂದಗೌಡರು ಲೇವಡಿ ಮಾಡಿದರು.

ಗಣಿ ಧಣಿಗಳ ಜತೆ ಚೀನಾ ಪ್ರವಾಸ: ಸಿ ಕೆಟಗರಿ ಗಣಿ ಧಣಿಗಳ ಜತೆ ಚೀನಾ ಪ್ರವಾಸ ಮಾಡಿ ಬಂದ ಸಿಎಂ ಗಣಿ ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಇದರ ಪರಿಣಾಮವಾಗಿಯೆ ಲೋಕಾಯುಕ್ತ ಕಾಯಿದೆಯನ್ನು ಬಲಹೀನ ಮಾಡುವ ಪ್ರಯತ್ನಕ್ಕೆ ಅಧಿಕಾರಿಗಳ ಜತೆ ಸರ್ಕಾರವು ಶಾಮೀಲಾಗಿದೆ. ಭ್ರಷ್ಟಾಚಾರ ವಿರುದ್ಧದ ಹೋರಾಟವನ್ನೆಲ್ಲ ಸರ್ಕಾರ ಮರೆತಿದೆ ಎಂದು ಅವರು ಆರೋಪಿಸಿದರು.

ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ: ಲೋಕಾಯುಕ್ತವನ್ನು ದುರ್ಬಲಗೊಳಿಸುವ ಅಥವಾ ಶಕ್ತಿಹೀನಗೊಳಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ. ಲೋಕಾಯುಕ್ತಕ್ಕೆ ಹೆಚ್ಚಿನ ಬಲ ನೀಡಬೇಕು ಎಂಬುದೇ ನಮ್ಮ ಆಲೋಚನೆ. ಈ ನಿಟ್ಟಿನಲ್ಲಿ ಲೋಕಾಯುಕ್ತ ಕಾಯಿದೆಗೆ ತಿದ್ದುಪಡಿ ತರುವ ಮುನ್ನ ಸಾರ್ವಜನಿಕವಾಗಿ ಚರ್ಚೆ ಮಾಡಲು ಸರ್ಕಾರ ಸಿದ್ಧವಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.

ಲೋಕಪಾಲ ಮಾದರಿಯಲ್ಲಿ ಲೋಕಾಯುಕ್ತಕ್ಕೂ ಹೆಚ್ಚಿನ ಶಕ್ತಿ ನೀಡಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ತಿದ್ದುಪಡಿ ಮಾಡಲು ಆಲೋಚಿಸಲಾಗಿತ್ತು. ಮೇಲ್ಮನೆಯಲ್ಲಿ ಎಂ.ಸಿ. ನಾಣಯ್ಯ ಅವರೂ ಖಾಸಗಿ ವಿಧೇಯಕ ತಂದಿದ್ದರು. ಆದ್ದರಿಂದ, ಎಲ್ಲವನ್ನೂ ಸಾರ್ವಜನಿಕವಾಗಿ ಚರ್ಚೆ ಮಾಡಬೇಕು. ಎಲ್ಲರ ಅಭಿಪ್ರಾಯವನ್ನೂ ಸಂಗ್ರಹಿಸಿ ತಿದ್ದುಪಡಿ ಮಾಡಲು ನಿರ್ಧರಿಸಲಾಗಿದೆ ಎಂದು ಟಿ.ಬಿ. ಜಯಚಂದ್ರ ಸಮಜಾಯಿಷಿ ನೀಡಿದರು.

ಕ್ಯಾಬಿನೆಟ್‌ಗೆ ತರುವ ಮೊದಲು ತಿದ್ದುಪಡಿ ಕರಡು ಸಿದ್ಧಪಡಿಸುವಾಗ ಯಾರೂ ಇಂತಹ ಆಲೋಚನೆ ಮಾಡಿರಲಿಲ್ಲವೇ? ಇಂತಹ ಪೇಚಿಗೆ ಸರ್ಕಾರ ಸಿಕ್ಕಿಕೊಳ್ಳಬೇಕಿತ್ತಾ? ಮುಂದೆ ಇಂತಹ ಮುಖಭಂಗ ಅನುಭವಿಸಬೇಡಿ ಎಂದು ಶಾಸಕ ಬಿ.ಆರ್. ಪಾಟೀಲ್ ಕಿವಿಮಾತು ಹೇಳಿದರು.