- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅರವಿಂದ ಕೇಜ್ರಿವಾಲ್ ಬಂಧನ

Arvind-kejriwa [1]ಹಮದಾಬಾದ್: ಬುಧವಾರ ಲೋಕಸಭೆ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಉತ್ತರ ಗುಜರಾತ್‌ನಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿ ಆಪ್ ನಾಯಕ ಅರವಿಂದ ಕೇಜ್ರಿವಾಲ್‌ರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಈ ಘಟನೆ ದೆಹಲಿ ಹಾಗೂ ಲಖನೌನಲ್ಲಿ ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಯಿತು. ಕೇಜ್ರಿ ವಶಕ್ಕೆ ತೆಗೆದುಕೊಂಡ ಸುದ್ದಿ ತಿಳಿಯುತ್ತಿದ್ದಂತೆಯೇ ಆಪ್ ಕಾರ್ಯಕರ್ತರು ನವದೆಹಲಿಯಲ್ಲಿನ ಬಿಜೆಪಿ ಪ್ರಧಾನ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ವೇಳೆ ಆಪ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆಯಿತು. ಇದಲ್ಲದೇ ಗುಜರಾತ್‌ನ ಹಲವೆಡೆಯೂ ಬಿಜೆಪಿ-ಆಪ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆಯಿತು.

ಕೇಜ್ರಿ ವಶಕ್ಕೆ: ಗುಜರಾತ್‌ನಲ್ಲಿ ಮೋದಿ ಹೇಳುತ್ತಿರುವ ಅಭಿವೃದ್ಧಿಯನ್ನು ಖುದ್ದಾಗಿ ನೋಡುತ್ತೇನೆ ಎಂದು ಹೊರಟಿದ್ದ ಕೇಜ್ರಿವಾಲ್ 4 ದಿನಗಳ ಗುಜರಾತ್ ಪ್ರವಾಸ ಆರಂಭಿಸಿದ್ದರು. ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ರ್ಯಾಲಿ ಆರಂಭಿಸುವ ಮುನ್ನ ಅನುಮತಿ ಪಡೆಯಬೇಕು. ಕೇಜ್ರಿವಾಲ್ ಅನುಮತಿ ಪಡೆದಿದ್ದಾರೆಯೋ, ಇಲ್ಲವೋ ಎಂಬುದನ್ನು ಖಾತ್ರಿಪಡಿಸಲು ಅವರನ್ನು ವಶಕ್ಕೆ ತೆಗೆದುಕೊಂಡು, ಬಿಡುಗಡೆ ಮಾಡಿದ್ದಾಗಿ ಗುಜರಾತ್ ಪೊಲೀಸರು ತಿಳಿಸಿದ್ದಾರೆ.  ಈ ಬಗ್ಗೆ ಪ್ರತಿಕ್ರಿಯಿಸಿದ ಆಪ್ ನಾಯಕ ಮನೀಷ್ ಸಿಸೋಡಿಯಾ, ಇದು ಗುಜರಾತ್ ಸರ್ಕಾರ ಮಾಡುತ್ತಿರುವ ರಾಜಕೀಯ ಹೊರತು ಬೇರೇನೂ ಅಲ್ಲ ಎಂದಿದ್ದಾರೆ. ಕೇಜ್ರಿವಾಲ್ ಅವರೂ ಮಾತನಾಡಿ, ಮೋದಿ ಅವರ ಆದೇಶದ ಮೇರೆಗೆ ಪೊಲೀಸರು ನನ್ನನ್ನು ಬಂಧಿಸಿದರು ಎಂದರು.

ನೋಡೋಣ ಎಂದ ಕೇಜ್ರಿ: ಇದೇ ವೇಳೆ, ಚುನಾವಣೆಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಕೇಜ್ರಿವಾಲ್, ನೋಡೋಣ ಎಂದಷ್ಟೇ ಉತ್ತರಿಸಿದ್ದಾರೆ. ಗುಜರಾತ್ ಹೊರತುಪಡಿಸಿ ಬೇರೆಲ್ಲಾದರೂ ಮೋದಿ ಸ್ಪರ್ಧಿಸಿದರೆ ಅವರ ವಿರುದ್ಧ ಕೇಜ್ರಿ ಕಣಕ್ಕಿಳಿಯಲಿದ್ದಾರೆ ಎಂದು ಆಪ್ ನಾಯಕರು ಈ ಹಿಂದೆ ಹೇಳಿದ್ದರು.

ಕಪ್ಪುಬಾವುಟ: ಪಟಾನ್ ಜಿಲ್ಲೆಗೆ ಆಗಮಿಸುತ್ತಿದ್ದಂತೆಯೇ ಕೇಜ್ರಿ ಅವರಿಗೆ ಸ್ಥಳೀಯರು ಕಪ್ಪುಬಾವುಟ ಪ್ರದರ್ಶಿಸಿದರು. ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್‌ಗೆ ಆಪ್ ಟಿಕೆಟ್ ನೀಡಿದ್ದನ್ನು ಖಂಡಿಸಿದ ಸ್ಥಳೀಯರು, ಕೇಜ್ರಿವಾಲ್ ಗುಜರಾತ್ ವಿರೋಧಿ ಎಂದು ಘೋಷಣೆ ಕೂಗಿದರು.

ಕೇಜ್ರಿವಾಲ್ ಬಂಧನದ ಸುದ್ದಿ ಹರಡುತ್ತಿದ್ದಂತೆಯೇ ಸುಮಾರು 400 ಮಂದಿ ಆಪ್ ಕಾರ್ಯಕರ್ತರು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯತ್ತ ತೆರಳಿ ಪ್ರತಿಭಟನೆ ಆರಂಭಿಸಿದರು. ಸ್ವಲ್ಪವೇ ಹೊತ್ತಲ್ಲಿ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತು. ಬಿಜೆಪಿ ಹಾಗೂ ಆಪ್ ಕಾರ್ಯಕರ್ತರ ನಡುವೆ ಪರಸ್ಪರ ಕಲ್ಲುತೂರಾಟ ಆರಂಭವಾಯಿತು. ನಂತರ ಪೊಲೀಸರು ಲಾಠಿಚಾರ್ಜ್ ಮಾಡಿ, ಜಲಫಿರಂಗಿ ಪ್ರಯೋಗಿಸಿ ಅಲ್ಲಿದ್ದವರನ್ನು ಚದುರಿಸಿದರು. ಆಪ್ ಕಾರ್ಯಕರ್ತರು ಬಿಜೆಪಿ ಕಚೇರಿಯ ಆವರಣದ ಗೋಡೆಗಳನ್ನು ಹತ್ತಲು ಪ್ರಯತ್ನಿಸಿದ್ದೂ ಕಂಡುಬಂತು. ಇದೇ ವೇಳೆ, ಆಪ್ ನಾಯಕರು, ನಾವು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೆವು.

ಬಿಜೆಪಿ ಕಚೇರಿಯೊಳಗಿಂದಲೇ ಅಲ್ಲಿದ್ದವರು ಕಲ್ಲುಗಳು, ಕುರ್ಚಿಗಳನ್ನು ಎಸೆಯತೊಡಗಿದರು ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು, ನಾವು ನಮ್ಮ ಸ್ವರಕ್ಷಣೆಗಾಗಿ ಹಾಗೆ ಮಾಡಿದೆವು ಎಂದಿದ್ದಾರೆ. ಏತನ್ಮಧ್ಯೆ, ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಆಪ್ ಕಾರ್ಯಕರ್ತರನ್ನು ‘ನಗರದ ಮಾವೋವಾದಿಗಳು’ ಎಂದು ಕರೆದಿದ್ದಾರೆ. ಈ ನಡುವೆ, ದೆಹಲಿಯಲ್ಲಿ ಘರ್ಷಣೆ ಆರಂಭವಾದ ಬೆನ್ನಲ್ಲೇ ಲಖನೌ ಹಾಗೂ ಗುಜರಾತ್‌ನ ಹಲವು ಭಾಗಗಳಲ್ಲೂ ಆಪ್-ಬಿಜೆಪಿ ಜಟಾಪಟಿ ನಡೆದವು.