- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬೆಂಬಲಿಗರಿಗೆ ಟಿಕೆಟ್; ಸ್ಪರ್ಧೆಯಿಂದ ಹಿಂದೆ ಸರಿಯಲು ಬಿಎಸ್‌ವೈ ತಂತ್ರ

yeddyurappa [1]ಬೆಂಗಳೂರು: ಬಿಜೆಪಿಗೆ ಮರಳಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತನ್ನ ಬೆಂಬಲಿಗರಿಗೆ ಟಿಕೆಟ್ ಕೊಡಿಸುವ ಬಗ್ಗೆ ಒತ್ತಡತಂತ್ರ ಅನುಸರಿಸುತ್ತಿದ್ದು, ಇದು ಬಿಜೆಪಿ ಅಭ್ಯರ್ಥಿಗಳ ಅಂತಿಮ ಪಟ್ಟಿ ಘೋಷಣೆಗೆ ಅಡ್ಡಿಯಾಗಿ ಪರಿಣಮಿಸಿದೆ.

ಒತ್ತಡ ತಂತ್ರಗಳು ಫಲಿಸದೇ ಇದ್ದಲ್ಲಿ, ಅಂತಿಮವಾಗಿ ಶಿವಮೊಗ್ಗ ಕಣದಿಂದ ಹಿಂದೆ ಸರಿಯುವ ಬೆದರಿಕೆ ಒಡ್ಡುವ ಸಿದ್ಧತೆಯಲ್ಲಿ ಯಡಿಯೂರಪ್ಪ ಇದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪತ್ರ ಬರೆವ ಮೂಲಕ ಒತ್ತಡ ತಂತ್ರ: ಲೋಕಸಭೆ ಚುನಾವಣೆಗಳ ಅಭ್ಯರ್ಥಿಗಳ ಪಟ್ಟಿ ಘೋಷಣೆಯ ಅಂತಿಮ ಹಂತದಲ್ಲಿ ಯಡಿಯೂರಪ್ಪ ದಾಳ ಉರುಳಿಸಿದ್ದು, ಶೋಭಾ ಕರಂದ್ಲಾಜೆಗೆ ತಾವು ಹೇಳಿದ ಕ್ಷೇತ್ರದಿಂದಲೇ ಟಿಕೆಟ್ ಕೊಡಿಸುವ ಹುನ್ನಾರ ಹೆಣೆದಿದ್ದಾರೆ ಎನ್ನಲಾಗಿದೆ. ಇದಕ್ಕೆಲ್ಲ ಪೂರ್ವ ಸಿದ್ಧತೆಯೆಂಬಂತೆ ತನ್ನ ಆಪ್ತ ಎಂ.ಡಿ. ಲಕ್ಷ್ಮೀನಾರಾಯಣ ಅವರಿಂದ ತನಗೇ ಪತ್ರ ಬರೆಸಿಕೊಂಡ ಯಡಿಯೂರಪ್ಪ, ಅದೇ ಪತ್ರವನ್ನು ಆಧಾರವಾಗಿಟ್ಟುಕೊಂಡು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆಯುವ ಮೂಲಕ ಒತ್ತಡ ತಂತ್ರದ ಮೊದಲ ಹೆಜ್ಜೆ ಇರಿಸಿದ್ದಾರೆ.

ಮೂರು ಸ್ಥಾನಗಳಿಗಾಗಿ ಪಟ್ಟು: ಯಡಿಯೂರಪ್ಪ ಅವರಿಗೆ ಆಪ್ತರಾದ ಶೋಭಾ ಕರಂದ್ಲಾಜೆ ಚಿಕ್ಕಮಗಳೂರಿನಿಂದ, ಜಿ.ಎಸ್. ಬಸವರಾಜ್ ತುಮಕೂರಿನಿಂದ ಹಾಗೂ ಸೂರ್ಯಕಾಂತ್ ನಾಗಮಾರಪಲ್ಲಿ ಬೀದರ್‌ನಿಂದ ಟಿಕೆಟ್ ಆಕಾಂಕ್ಷಿಗಳು. ಆದರೆ ಜಿ.ಎಸ್. ಬಸವರಾಜ್ ಅವರಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಖಡಾ ಖಂಡಿತವಾಗಿ ಹೇಳಲಾಗಿದೆ.

ಶೋಭಾ ಕರಂದ್ಲಾಜೆಗೆ ಮೈಸೂರಿನಿಂದ ಸ್ಪರ್ಧಿಸುವಂತೆ ಸೂಚಿಸಲಾಗಿದೆ. ಬೀದರ್‌ನಿಂದ ಗುರುಪಾದಪ್ಪ ನಾಗಮಾರಪಲ್ಲಿಗೆ ಬೇಕಾದರೆ ಟಿಕೆಟ್ ನೀಡುತ್ತೇವೆ, ಆದರೆ ಅವರ ಮಗನಿಗೆ ಟಿಕೆಟ್ ನೀಡುವುದಿಲ್ಲ ಎಂದು ಬಿಜೆಪಿ ಹೇಳಿದೆ. ಆದರೆ ಯಡಿಯೂರಪ್ಪ  ಈ ಮೂರು ಸ್ಥಾನಗಳಿಗಾಗಿ ಪಟ್ಟುಹಿಡಿದಿದ್ದಾರೆ. ಈ ಬೇಡಿಕೆಯನ್ನು ಇನ್ನಷ್ಟು ಬಲಪಡಿಸಲೆಂದೇ ಅವರು ರಾಜನಾಥ್ ಸಿಂಗ್ ಅವರಿಗೆ ಭಾನುವಾರ ಪತ್ರ ಬರೆದಿದ್ದಾರೆ. ತನ್ನ ಬೆಂಬಲಿಗರನ್ನು ಕಡೆಗಣಿಸಲಾಗುತ್ತಿದೆ ಎಂಬ ನೆಪವನ್ನೇ ಮುಂದಿಟ್ಟುಕೊಂಡು, ಶೋಭಾ ಕರಂದ್ಲಾಜೆಗೆ ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಕೊಡಿಸುವುದು ಅವರ ತಂತ್ರ.

ಜಿ.ಎಸ್. ಬಸವರಾಜ್‌ಗೆ ಯಾವುದೇ ಕಾರಣಕ್ಕೆ ಟಿಕೆಟ್ ನೀಡಬಾರದು, ನೀಡಿದರೂ ಅವರು ಗೆಲ್ಲುವುದಿಲ್ಲ ಎಂದು ಸಂಘ-ಪರಿವಾರ ಸ್ಪಷ್ಟವಾಗಿ ಹೇಳಿದೆ. ಅಲ್ಲದೇ ಕೆಜೆಪಿ ಸ್ಥಾಪಿಸಿದ ಸಂದರ್ಭದಲ್ಲಿ ಜಿ.ಎಸ್. ಬಸವರಾಜ್ ಅವರು ಬಿಜೆಪಿ ಹಿರಿಯ ನಾಯಕರಿಗೆ ಮತ್ತು ಆರ್‌ಎಸ್ಸೆಎಸ್ ಬಗ್ಗೆ ಕೀಳಾಗಿ ಮಾತನಾಡಿದ್ದರು. ಅದನ್ನು ಸಹಿಸಲು ಸಾಧ್ಯವಿಲ್ಲ ಎಂಬ ಸ್ಪಷ್ಟ ನಿಲುವು ವ್ಯಕ್ತವಾಗಿದೆ. ಅವರ ಸ್ಪರ್ಧೆಗೆ ಕಾರ್ಯಕರ್ತರಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ.

ಆದರೂ ಜಿ.ಎಸ್. ಬಸವರಾಜ್‌ಗೆ ಟಿಕೆಟ್ ನೀಡಬೇಕು ಎಂದು ಯಡಿಯೂರಪ್ಪ ಹೇಳುತ್ತಿರುವುದರ ಹಿಂದೆ ಬೇರೆಯೇ ಕಾರಣ ಅಡಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬಸವರಾಜ್, ಸೂರ್ಯಕಾಂತ್ ನಾಗಮಾರಪಲ್ಲಿ ಮತ್ತು ಶೋಭಾ ಹೆಸರನ್ನು ಮುಂದಿಟ್ಟು, ಅಂತಿಮವಾಗಿ ಎಲ್ಲರಿಗೂ ಆಗದಿದ್ದರೆ ಶೋಭಾ ಕರಂದ್ಲಾಜೆಗೆ ಚಿಕ್ಕಮಗಳೂರು ಕ್ಷೇತ್ರದಿಂದಲೇ ಟಿಕೆಟ್ ಕೊಡಿ ಎಂದು ಪಟ್ಟು ಹಿಡಿಯುವುದು ಯಡಿಯೂರಪ್ಪ ಲೆಕ್ಕಾಚಾರ ಎನ್ನಲಾಗಿದೆ.

ಅಭ್ಯರ್ಥಿಗಳ ಆಯ್ಕೆ ಕಗ್ಗಂಟು: ಯಡಿಯೂರಪ್ಪ ಈ ಒತ್ತಡ ತಂತ್ರದಿಂದಾಗಿ ಉಳಿದಿರುವ 8 ಕ್ಷೇತ್ರಗಳಲ್ಲಿ 3 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಮಾ.13ರಂದು ಉಳಿದ 8 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸುವುದಾಗಿ ಬಿಜೆಪಿ ಹೇಳಿಬಿಟ್ಟಿದೆ. ಆದರೆ ಯಡ್ಯೂರಪ್ಪ ಅವರ ಒತ್ತಡ ತಂತ್ರವನ್ನು ಮೀರಿ, ಮಾ.13ರಂದೇ ಎಲ್ಲ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಿಸಲು ಬಿಜೆಪಿ ಮುಖಂಡರು ಯಶಸ್ವಿಯಾಗುವುರೇ ಎಂಬುದು ಕುತೂಹಲ ಮೂಡಿಸಿದೆ.

ರಾಜ್ಯದಲ್ಲಿ ಬಾಕಿ ಉಳಿದಿರುವ ಎಂಟು ಲೋಕಸಭೆ ಕ್ಷೇತ್ರಗಳ ಪೈಕಿ ಏಳು ಸ್ಥಾನಗಳಿಗೆ ಬಿಜೆಪಿಯ ಅಂತಿಮ ಪಟ್ಟಿ ಬುಧವಾರ ತಯಾರಾಗಲಿದ್ದು, ಕೇಂದ್ರ ಚುನಾವಣೆ ಸಮಿತಿ ಗುರುವಾರ ಬಿಡುಗಡೆ ಮಾಡಲಿದೆ. ಬೆಂಗಳೂರಿನಲ್ಲಿ ಬುಧವಾರ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಮೈಸೂರು, ಉಡುಪಿ-ಚಿಕ್ಕಮಗಳೂರು, ಬಳ್ಳಾರಿ, ಬೀದರ್, ಮಂಡ್ಯ, ಹಾಸನ, ಕೋಲಾರ ಹಾಗೂ ತುಮಕೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಖೈರುಗೊಳಿಸಬೇಕಿದೆ. ಬಿಜೆಪಿಯಲ್ಲಿ ಬಿಎಸ್‌ಆರ್ ವಿಲೀನ ಕುರಿತಂತೆ ಅಂತಿಮ ನಿರ್ಧಾರ ಪ್ರಕಟವಾದ ಬಳಿಕವೇ ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ನಡೆಯಲಿದೆ.

ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದ ಕಾಂಗ್ರೆಸ್, ಗುರುವಾರ ತನ್ನ ಅಂತಿಮ  ಪಟ್ಟಿ ಪ್ರಕಟಿಸಲಿದೆ. ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಅವರ ಸ್ಪರ್ಧೆ ಸೇರಿ ದಕ್ಷಿಣ ಕನ್ನಡ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಆಂತರಿಕ ಚುನಾವಣೆ ತೀರ್ಮಾನಗಳು ಅಂದೇ ಬಹಿರಂಗವಾಗುತ್ತದೆ.

ಪ್ರಧಾನಿ ಹುದ್ದೆಗೆ ಮೋದಿ, ರಾಹುಲ್‌ಗೆ ಬೆಂಬಲ ನೀಡುವುದಿಲ್ಲ ಎಂದು ಡಿಎಂಕೆ ಮುಖ್ಯಸ್ಥ ಕರುಣಾನಿಧಿ ತಿಳಿಸಿದ್ದಾರೆ. ಈ ಮೂಲಕ ಚುನಾವಣೆ ಬಳಿಕ ಕಾಂಗ್ರೆಸ್ ಅಥವಾ ಬಿಜೆಪಿ ಮೈತ್ರಿಕೂಟಕ್ಕೆ ಬೆಂಬಲ ನೀಡುವ ಪ್ರಸ್ತಾಪವನ್ನು ಕರುಣಾನಿಧಿ ತಳ್ಳಿಹಾಕಿದ್ದಾರೆ. ಇದರ ಜತೆಗೆ ಚುನಾವಣೆಗಾಗಿ ಪಕ್ಷದ ಪ್ರಣಾಳಿಕೆಯನ್ನೂ ಅವರು ಬಿಡುಗಡೆ ಮಾಡಿದ್ದಾರೆ.

ಗುಜರಾತ್‌ನಲ್ಲಿ ರಾಹುಲ್ ಬಿರುಸಿನ ಪ್ರಚಾರ. ಮುಖ್ಯಮಂತ್ರಿ ಮೋದಿ ಹೆಸರೆತ್ತದೆ ಹಿಟ್ಲರ್ ಹೆಸರು ಉಲ್ಲೇಖಿಸಿ ಟೀಕಾ ಪ್ರಹಾರ ನಡೆಸಿದ ಕಾಂಗ್ರೆಸ್ ಉಪಾಧ್ಯಕ್ಷ. ದೇಶದ ಜನರಿಗೆ ಬೇಕಾಗಿರುವುದು ವಾಚ್‌ಮ್ಯಾನ್ ಅಲ್ಲ. ಹಕ್ಕುಗಳು. ಗುಜರಾತ್ ಪ್ರಕಾಶಿಸುತ್ತಿರುವುದು ಜನರಿಗಲ್ಲ. ಕೈಗಾರಿಕೋದ್ಯಮಿಗಳಿಗೆ ಎಂದ ರಾಹುಲ್.

ಬಿಜೆಪಿಯನ್ನು ತನ್ನ ಹಳೆಯ ಮಿತ್ರ ಎಂದು ಕರೆದಿರುವ ಶಿವಸೇನೆ ಆ ಪಕ್ಷದ ಮೈತ್ರಿಕೂಟದಿಂದ ಹೊರಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಇದಕ್ಕೂ ಮೊದಲು ಮಹಾರಾಷ್ಟ್ರ ನವನಿರ್ಮಾಣ ಸೇನೆ ಜತೆಗಿನ ಸಂಬಂಧದ ಕುರಿತು ಬಿಜೆಪಿ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಶಿವಸೇನೆ  ಮುಖ್ಯಸ್ಥ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ.

ಏಳು ತಿಂಗಳ ಹಿಂದೆ ಬಿಜೆಪಿ ಜತೆ ವಿಲೀನಗೊಂಡಿದ್ದ ಜನತಾ ಪಕ್ಷದ ಸುಬ್ರಹ್ಮಣ್ಯನ್ ಸ್ವಾಮಿ ಇದೀಗ ಅಯೋಧ್ಯೆ, ಮುಂಬೈ ಅಥವಾ ನವದೆಹಲಿಯಿಂದ ಕಣಕ್ಕಿಳಿಯುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ಅದನ್ನು ಪಾಲಿಸುವುದಾಗಿ ಸ್ವಾಮಿ ತಿಳಿಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ನಮೋ(ನರೇಂದ್ರ ಮೋದಿ) ಮಂತ್ರ ಪಠಿಸುವಾಗ ಎಚ್ಚರಿಕೆಯಿಂದಿರಬೇಕು. ಆರೆಸ್ಸೆಸ್ ರಾಜಕೀಯದಲ್ಲಿಲ್ಲ. ನಮಗೆ ಗುರಿಸಾಧನೆಯಷ್ಟೇ ಮುಖ್ಯವಾಗಬೇಕು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಈ ಹೇಳಿಕೆ ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.