ದುರ್ಗಾಂಬಿಕಾ ಜಾತ್ರೆಯಲ್ಲಿ ಅರೆಬೆತ್ತಲೆಯ ಬೇವಿನ ಉಡುಗೆ ಸೇವೆ, ಕೋಣನ ವಧೆ

12:15 PM, Thursday, March 13th, 2014
Share
1 Star2 Stars3 Stars4 Stars5 Stars
(5 rating, 4 votes)
Loading...
Dhavangere Durgambika Temple

ದಾವಣಗೆರೆ: ಜಿಲ್ಲಾಡಳಿತದ ಕಟ್ಟು­ನಿಟ್ಟಿನ ಕ್ರಮದ ನಡುವೆಯೂ ನಗರದ ದುರ್ಗಾಂಬಿಕಾ ಜಾತ್ರೆಯಲ್ಲಿ ಅರೆಬೆತ್ತಲೆಯ ಬೇವಿನ ಉಡುಗೆ ಸೇವೆ ಮಂಗಳವಾರ ಮಧ್ಯರಾತ್ರಿಯಿಂದ ಬುಧ­ವಾರ ದಿನಪೂರ್ತಿ ನಿರಾತಂಕವಾಗಿ ನಡೆಯಿತು.

ಜಾತ್ರೆ ಅಂಗವಾಗಿ ಜಿಲ್ಲಾಡಳಿತ ಬಿಗಿ ಕ್ರಮ ಕೈಗೊಂಡಿತ್ತು. ಸ್ಥಳದಲ್ಲಿ ರಾತ್ರಿ­ಯಿಡೀ ಪೊಲೀಸರು ಕೋಣನ ವಧೆ ಮಾಡದಂತೆ ಎಚ್ಚರ ವಹಿಸಿದ್ದರು. ಅದರ ನಡುವೆಯೂ ದೇಗುಲದ ಹೊರ ವಲಯದಲ್ಲಿ ಮಧ್ಯರಾತ್ರಿ ಕೆಲವರು ಕೋಣನ ವಧೆ ಮಾಡಿ ಅಂಬೇಡ್ಕರ್‌ ವೃತ್ತದ ಮನೆಯೊಂದರಲ್ಲಿ ತಲೆ ಹಾಗೂ ಕಾಲುಗಳನ್ನು ಇಟ್ಟಿದ್ದರು.

ಅದನ್ನು ದೇಗುಲದ ಸುತ್ತ ಪ್ರದಕ್ಷಿಣೆಗೆ ತರುವ ಮಾಹಿತಿ ಪಡೆದ ಜಿಲ್ಲಾಧಿಕಾರಿ ಎಸ್‌.ಟಿ.ಅಂಜನಕುಮಾರ್‌ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಪ್ರಕಾಶ್‌ ಮನೆಯ ಮೇಲೆ ದಾಳಿ ಮಾಡಿ ಕೋಣನ ರುಂಡ ಹಾಗೂ ಕಾಲು ವಶಕ್ಕೆ ಪಡೆದುಕೊಂಡರು. ಪ್ರತಿ ಜಾತ್ರೆಯಲ್ಲೂ ದೂರದಲ್ಲಿ ಕೋಣನ ವಧೆ ಮಾಡಿ ದೇಗುಲಕ್ಕೆ ತಂದು ಚರಗ ಚೆಲ್ಲಿ ಪೂಜೆ ಸಲ್ಲಿಸುವ ಸಂಪ್ರದಾಯವಿದೆ. ಆದರೆ, ಈ ಬಾರಿ ಜಿಲ್ಲಾ­ಡಳಿತ ಅದಕ್ಕೆ ಅವಕಾಶ ಕಲ್ಪಿಸಲಿಲ್ಲ.

‘ಮನೆಯೊಂದರಲ್ಲಿ ಇಡಲಾಗಿದ್ದ ಕೋಣನ ರುಂಡವನ್ನು ವಶಕ್ಕೆ ಪಡೆಯ­ಲಾಗಿದೆ. ಪ್ರಾಣಿ ಬಲಿ ನಿಷೇಧ ಕಾಯ್ದೆ ಅಡಿ ಮನೆ ಮಾಲೀಕರ ವಿರುದ್ಧ ಪ್ರಕರಣ ದಾಖಲಾಗಿದೆ. ಇದು­ವರೆಗೂ ಯಾರನ್ನೂ ಬಂಧಿಸಿಲ್ಲ. ದೇಗುಲದ ಸುತ್ತಮುತ್ತ ಯಾವುದೇ ಪ್ರಾಣಿ ಬಲಿ ನಡೆದಿಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಪ್ರಕಾಶ್‌ ಹೇಳಿದ್ದಾರೆ.

ಅನಾರೋಗ್ಯ, ಸಂಕಷ್ಟ ನಿವಾರಣೆ, ಸಂತಾನ ಭಾಗ್ಯಕ್ಕಾಗಿ ಹರಕೆ ಹೊತ್ತವರು ಅರೆ ಬೆತ್ತಲೆಯಲ್ಲಿ ಬೇವಿನ ಉಡುಗೆ ಸೇವೆ ಸಲ್ಲಿಸಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳೇ ಸ್ಥಳದಲ್ಲಿದ್ದರೂ ಈ ಸೇವೆ ನಿರಾತಂಕ­ವಾಗಿ ನಡೆಯಿತು. ದೇಗುಲದ ಸುತ್ತ ತಣ್ಣೀರು ಸುರಿದುಕೊಳ್ಳುತ್ತಾ ಪ್ರದಕ್ಷಿಣೆ ಹಾಕಿದರು. ದುಗ್ಗಮ್ಮ ಉಧೋ… ಉಧೋ… ಎಂಬ ಘೋಷಣೆಗಳು ಕೇಳಿಬಂದವು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English