- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸೈಕಲ್ ಬಿಟ್ಟು ಕೈ ಹಿಡಿದ ಸಿ.ಪಿ ಯೋಗೀಶ್ವರ್

Yogeshwar [1]

ಬೆಂಗಳೂರು : ಸಿ..ಪಿ ಯೋಗೀಶ್ವರ್ ಅವರು ಮತ್ತೊಮ್ಮೆ ಪಕ್ಷಾಂತರ ಮಾಡಿದ್ದಾರೆ. ಸಮಾಜವಾದಿ ಪಕ್ಷದ ಏಕೈಕ ಶಾಸಕ ಮಂಗಳವಾರದಂದು ಕೆಪಿಸಿಸಿ ಕಚೇರಿಗೆ ತೆರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶಾಸಕ ಸಿ.ಪಿ ಯೋಗೀಶ್ವರ್ ಅವರು ಸಮಾಜವಾದಿ ಪಕ್ಷ ತೊರೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಸಚಿವ ಡಿ.ಕೆ ಶಿವಕುಮಾರ್, ಮುಂತಾದ ನಾಯಕರು ಉಪಸ್ಥಿತರಿದ್ದರು.

ಕಳೆದ ಆಗಸ್ಟಿನಲ್ಲಿ ಚನ್ನಪಟ್ಟಣದಲ್ಲಿ ನಡೆದಿದ್ದ ಸಮಾಜವಾದಿ ಪಕ್ಷದ ಬೆಂಬಲಿಗರ ಸಭೆಯಲ್ಲಿ ದಿಢೀರನೆ ಪ್ರತ್ಯಕ್ಷರಾಗಿದ್ದ ಡಿಕೆಶಿ, ಯೋಗಿ ಕೊರಳಿಗೆ ಗಂಧದ ಹಾರ ಹಾಕಿ ತಾವಿಬ್ಬರೂ ಕೊರಳ ಗೆಳೆಯರು ಎಂದು ಘೋಷಿಸಿದ್ದರು. ಅಂದಿನಿಂದಲೂ ಇಬ್ಬರ ದೋಸ್ತಿ ಜಾರಿಯಲ್ಲಿತ್ತು. ಇದೀಗ ಲೋಕಸಭಾ ಚುನಾವಣೆ ನಿರ್ಣಾಯಕ ಹಂತದಲ್ಲಿ ಯೋಗೀಶ್ವರ್ ನಿಷ್ಠೆ ಸಂಪೂರ್ಣವಾಗಿ ತಮ್ಮ ಮಾತೃಪಕ್ಷ ಕಾಂಗ್ರೆಸ್ ಪರ ಬದಲಾಗಿದೆ.

ಕಾಂಗ್ರೆಸ್ಸಿಗೆ ಮಾತ್ರ ಎಲ್ಲಾ ವರ್ಗದವರನ್ನು ಒಟ್ಟಿಗೆ ಕೊಂಡೊಯ್ಯುವ ಶಕ್ತಿ ಹೊಂದಿದೆ. ಬಿಜೆಪಿ ಕೋಮುವಾದಿ ಪಕ್ಷ, ನರೇಂದ್ರಮೋದಿ ಯಂಥವರು ಅಧಿಕಾರಕ್ಕೆ ಬಂದರೆ ಜನರು ಶಾಂತಿ ನೆಮ್ಮದಿಯಿಂದಿರಲು ಸಾಧ್ಯವೇ ಇಲ್ಲ.ಜೆಡಿಎಸ್ ಕೋಮುವಾದಿ ಪಕ್ಷವಲ್ಲದಿದ್ದರೂ ಕುಟುಂಬ ರಾಜಕಾರಣ ಅನುಸರಿಸುತ್ತದೆ. ಅವರಿಗೆ ಪಕ್ಷ ಸಿದ್ಧಾಂತವೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಹೇಳಿದರು.

ಕಾಂಗ್ರೆಸ್ ಪಕ್ಷ 20 ಸ್ಥಾನಗಳನ್ನು ಗೆಲ್ಲಲಿದೆ. ಹಾಸನ ಕ್ಷೇತ್ರದಲ್ಲಿ ಗೆದ್ದರೂ ಅಚ್ಚರಿಪಡಬೇಕಾಗಿಲ್ಲ. ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಹಳೆ ಮೈಸೂರು ಪ್ರಾಂತ್ಯಗಳಲ್ಲಿ ಈ ಬಾರಿ ಕಾಂಗ್ರೆಸ್ ಅಚ್ಚರಿ ಗೆಲುವು ಸಾಧಿಸಲಿದೆ. ಸಿಪಿ ಯೋಗೀಶ್ವರ್ ಸೇರ್ಪಡೆಯಿಂದ ಬೆಂಗಳೂರು ಗ್ರಾಮಾಂತರ, ಚನ್ನಪಟ್ಟಣಗಳಲ್ಲಿ ಕಾಂಗ್ರೆಸ್ ಬಲ ಇನ್ನಷ್ಟು ಹೆಚ್ಚಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.