ಕೋಲಾರ: ಮಾಲೂರು ತಾಲ್ಲೂಕಿನ ಮಾಸ್ತಿ ಠಾಣೆಯ ಟಿ.ಆರ್.ರಂಗಪ್ಪ ಅವರನ್ನು ಪ್ರಕರಣವೊಂದರ ಸಂಬಂಧ ಮಾಹಿತಿ ನೀಡಲಿಲ್ಲ ಎಂಬ ಕಾರಣಕ್ಕೆ ಕವಾಯತು ಮೈದಾನವನ್ನು ಮೂರು ದಿನ ಸುತ್ತು ಹಾಕುವ ಶಿಕ್ಷೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿ ವಿಧಿಸಿದ ಘಟನೆ ಬೆಳಕಿಗೆ ಬಂದಿದೆ.
ಮಾಸ್ತಿ ಠಾಣೆಯ ಟಿ.ಆರ್.ರಂಗಪ್ಪ ಲೋಕಸಭೆ ಚುನಾವಣೆಯ ದಿನವಾದ ಗುರುವಾರ ರಾತ್ರಿ ಅವರು ಮಾಲೂರು ತಾಲ್ಲೂಕಿನ ಹುಳದೇನಹಳ್ಳಿಯಲ್ಲಿ ಜಮೀನು ವಿವಾದ ಸಂಬಂಧ ನಡೆದ ಹಲ್ಲೆ ಪ್ರಕರಣವನ್ನು ರಾಜಿಯಲ್ಲಿ ಮುಕ್ತಾಯ ಮಾಡಿದ್ದರು. ಪ್ರಕರಣದ ಮಾಹಿತಿಯನ್ನು ತಮಗೆ ನೇರವಾಗಿ ನೀಡಲಿಲ್ಲ ಎಂಬ ಕಾರಣಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿಕ್ಷೆ ವಿಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೋಮವಾರದಿಂದಲೇ ಮೈದಾನವನ್ನು ಸುತ್ತುಹಾಕಲು ಸೂಚನೆ ನೀಡಲಾಗಿತ್ತು. ಅದರಂತೆ ಸಬ್ ಇನ್‌ಸ್ಪೆಕ್ಟರ್ ಸುತ್ತು ಹಾಕುತ್ತಿದ್ದರು. ಎರಡನೇ ದಿನವಾದ ಮಂಗಳವಾರ ಸಂಜೆ ವೇಳೆಗೆ ಶಿಸ್ತು ಕ್ರಮ ಮೊಟಕುಗೊಳಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ಎಂಥದ್ದೇ ಇರಲಿ. ತಮಗೆ ನೇರವಾಗಿ ಮಾಹಿತಿ ನೀಡಲೇಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಎಲ್ಲರಿಗೂ ಸೂಚನೆ ನೀಡಿದ್ದರು.
ಅದರಂತೆ ಸಬ್ ಇನ್‌ಸ್ಪೆಕ್ಟರ್ ಮಾಹಿತಿ ನೀಡದ್ದರಿಂದ ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು ಎಂದು ಅವರು ಹೇಳಿದ್ದಾರೆ.
Click this button or press Ctrl+G to toggle between Kannada and English