ಕಿನ್ನಿಗೋಳಿ : ಕಲ್ಲು ಕೋರೆ ಸಮೀಪದ ಶೆಡ್‌ನಲ್ಲಿ ರವಿವಾರ ಭೀಕರ ಸ್ಫೋಟ ಸಂಭವಿಸಿದ್ದುದರಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟು ನಾಲ್ವರು ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ಸುಮಾರು 10ಕ್ಕೂ ಹೆಚ್ಚು ಮನೆಗಳು ಛಿದ್ರಗೊಂಡಿವೆ.
ಕಿನ್ನಿಗೋಳಿಯ ಐಕಳ ನೆಲ್ಲಿಗುಡ್ಡೆಯ ಕಲ್ಲಿನ ಕೋರೆಯ ಪಕ್ಕದಲ್ಲೇ ಕಾರ್ಮಿಕರ ಶೆಡ್‌ಗಳು ಇದ್ದು ಅವುಗಳಲ್ಲಿ ತಮಿಳುನಾಡು ಸಹಿತ ರಾಜ್ಯದ ವಿವಿಧ ಭಾಗಗಳ 25ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಕೆಲವು ಗುಡಿಸಲುಗಳು ಸಿಮೆಂಟ್ ಶೀಟ್ ಹಾಕಿ ನಿರ್ಮಿಸಿದವು ಹಾಗೂ ಮತ್ತೆ ಕೆಲವು ಪ್ಪಾಸ್ಟಿಕ್ ಹೊದೆಸಿದವು.
ಶೆಡ್‌ನಲ್ಲಿ ವಾಸವಾಗಿದ್ದ ತಮಿಳುನಾಡು ಮೂಲದ ತೆರಿಯಪ್ಪಯ್ಯ ಅವರ ಪತ್ನಿ ಈರಸಮ್ಮ (60) ಹಾಗೂ ಪುತ್ರ ಪರಮಚ್ಚಿ (26) ಮೃತಪಟ್ಟವರು. ಅಕ್ಕಪಕ್ಕದ ಗುಡಿಸಲ ವಾಸಿಗಳಾದ ನಾಗರಾಜ, ಪತ್ನಿ ಯಶೋದಾ, ಪುತ್ರಿ ಪೂಜಾ ಹಾಗೂ ರಾಮೇಶ್ ಗಾಯಗೊಂಡವರು.
ರವಿವಾರ ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ತೆರಿಯಪ್ಪಯ್ಯ ಅವರ ಪತ್ನಿ ಈರಸಮ್ಮ ಹಾಗೂ ಪುತ್ರ ಪರಮಚ್ಚಿ ಗುಡಿಸಲಲ್ಲಿ ಅಡುಗೆ ಮಾಡಿಕೊಂಡಿರುವಾಗ ಮನೆಯೊಳಗೆ ಭೀಕರ ಸ್ಫೋಟ ಸಂಭವಿಸಿತು. ತಮಿಳುನಾಡು ಸೇಲಂನ ಒಮಲೂರು ತಾಲೂಕು ತಾರಮಂಗಳಂನವರಾದ ತೆರಿಯಪ್ಪಯ್ಯ ಕುಟುಂಬದವರು ಕಳೆದ ಕೆಲವು ವರ್ಷಗಳಿಂದ ಐಕಳ ಕಲ್ಲಿನ ಕೋರೆಯಲ್ಲಿ ಕೆಲಸ ಮಾಡಿಕೊಂಡಿದ್ದರು.
ಸ್ಫೋಟದ ತೀವ್ರತೆಗೆ ಈರಸಮ್ಮ ಅವರ ತಲೆ ಮತ್ತು ಒಂದು ಕೈ ದೇಹದಿಂದ ಬೇರ್ಪಟ್ಟಿದ್ದು, ದೇಹ ಛಿದ್ರವಾಗಿದೆ. ಸುಟ್ಟು ಕರಕಲಾದ ದೇಹ 50 ಅಡಿ ಅಳದ ಕಲ್ಲಿನ ಕೋರೆಯಲ್ಲಿ ಬಿದ್ದಿತ್ತು. ಮರಮಚ್ಚಿಯ ಮೃತದೇಹ ಸ್ಥಳದಲ್ಲೇ ಕಲ್ಲುಗಳ ಅಡಿಯಲ್ಲಿ ಲಭಿಸಿದೆ.
ಪಕ್ಕದ ಗುಡಿಸಲಿನ ರಾಮೇಶ ‘ಕಿನ್ನಿಗೋಳಿ ಪೇಟೆಗೆ ತೆರಳಿದ್ದವ ಆಗಷ್ಟೇ ಮನೆಗೆ ಹಿಂದಿರುಗಿದ್ದು, ಅಷ್ಟರಲ್ಲಿ ಭೀಕರ ಸ್ಫೋಟದ ಶಬ್ದ ಕೇಳಿಸಿತು ಎಂದು ಘಟನೆಯನ್ನು ವಿವರಿಸಿದ್ದಾನೆ.
ರವಿವಾರ ರಜಾದಿನ ಆಗಿರುವುದರಿಂದ ಹೆಚ್ಚಿನ ಕಾರ್ಮಿಕರು ಬೆಳಗ್ಗಿನ ಉಪಾಹಾರ ಮುಗಿಸಿ ಕಿನ್ನಿಗೋಳಿ ಪೇಟೆಗೆ ಪಡಿತರ ಸಾಮಗ್ರಿ ತರಲು ಹೋಗಿದ್ದರಿಂದ ಬದುಕುಳಿದ್ದಾರೆ.
ಮೂಲ್ಕಿ ವೃತ್ತ ನೀರಿಕ್ಷಕ ರಾಮಚಂದ್ರ ನಾಯಕ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಕಂದಾಯ ಅಧಿಕಾರಿ ದಾಸ್, ಐಕಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಪದ್ಮಿನಿ, ಉಪಾಧ್ಯಕ್ಷ ದಿವಾಕರ ಚೌಟ ಮತ್ತಿತರರು ಭೇಟಿ ನೀಡಿದ್ದಾರೆ.
Click this button or press Ctrl+G to toggle between Kannada and English