ಮಂಗಳೂರು : ಮಂಗಳೂರು ತಾಲೂಕ್ ಪಂಚಾಯತ್ ನ ಪ್ರಸಕ್ತ ಆಡಳಿತದ 3ನೇ ಅವಧಿಯ ಅಧ್ಯಕ್ಷೆಯಾಗಿ ರಜನಿ (ಕಾಂಗ್ರೆಸ್) ಹಾಗೂ ಉಪಾಧ್ಯಕ್ಷರಾಗಿ ಪ್ರಕಾಶ್(ಬಿಜೆಪಿ) ಆಯ್ಕೆಯಾಗಿದ್ದಾರೆ.
ಶುಕ್ರವಾರ ತಾ.ಪಂ. ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷರಾಗಿ ಆಯ್ಕೆಯಾದ ರಜನಿ ಅವರು ಪಡುಮಾರ್ನಾಡು ಕ್ಷೇತ್ರ ಹಾಗೂ ಉಪಾಧ್ಯಕ್ಷ ಪ್ರಕಾಶ್ ಅವರು ಬಡಗ ಎಡಪದವು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಮಂಗಳೂರು ಉಪವಿಭಾಗಾಧಿಕಾರಿ ಡಾ.ಪ್ರಶಾಂತ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ಸಚಿವರ ಅಭಿನಂದನೆ: ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ತಾಲೂಕ್ ಪಂಚಾಯತ್ ಸಭಾಂಗಣಕ್ಕೆ ಆಗಮಿಸಿ ನೂತನವಾಗಿ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಅಧಿಕಾರ ವಿಕೇಂದ್ರೀಕರಣದಲ್ಲಿ ತಾಲೂಕ್ ಪಂಚಾಯತ್ಗಳಿಗೆ ತನ್ನದೇ ಆದ ಮಹತ್ವವಿದೆ. ಲಭ್ಯ ಅನುದಾನ ಮತ್ತು ಸಂಪನ್ಮೂಲಗಳನ್ನು ಕ್ರೋಢೀಕರಿಸಿ, ಗ್ರಾಮೀಣ ಜನತೆಗೆ ಉತ್ತಮ ಸೌಕರ್ಯಗಳನ್ನು ತಾಲೂಕು ಪಂಚಾಯತ್ಗಳು ಒದಗಿಸಿಕೊಡಬೇಕು ಎಂದು ಹೇಳಿದರು.
ಸಾಂಕ್ರಾಮಿಕ ರೋಗಗಳ ತಡೆಗಟ್ಟಲು ಎಲ್ಲ ಗ್ರಾಮ ಪಂಚಾಯತ್ಗಳಿಗೆ ಸೂಕ್ತ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯನ್ನು ತಾ.ಪಂ. ವತಿಯಿಂದ ನಡೆಯಬೇಕಿದೆ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಸದಸ್ಯರಾದ ಎನ್.ಎಸ್. ಕರೀಂ, ಯಶವಂತಿ ಆಳ್ವ, ಮೆಲ್ವಿನ್ ಡಿಸೋಜ, ತಾಲೂಕ್ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಪೂಜಾರಿ ಮತ್ತಿತರರು ಇದ್ದರು.
Click this button or press Ctrl+G to toggle between Kannada and English