ಕಲುಬುರ್ಗಿಯವರ ಅವಹೇಳನಕಾರಿ ಹೇಳಿಕೆಗೆ ಖಂಡನೆ- ಕಲ್ಕೂರ

10:52 PM, Sunday, June 15th, 2014
Share
1 Star2 Stars3 Stars4 Stars5 Stars
(5 rating, 6 votes)
Loading...
Kulkura

ಮಂಗಳೂರು : ಪ್ರಾಚೀನ ಕಾಲದಿಂದ ಆರಾಧಿಸಿಕೊಂಡು ಬರುತ್ತಿರುವ ಮೂರ್ತಿ ಪೂಜೆ ಬಗ್ಗೆ ಅವಹೇಳನಕಾರಿಯಾದ ಹೇಳಿಕೆಯನ್ನು ನೀಡಿದ ಪ್ರೊ. ಎಂ. ಎಂ. ಕಲುಬುರ್ಗಿಯವರ ಪತ್ರಿಕಾ ವರದಿಯನ್ನು ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹಾಗೂ ಸದಸ್ಯರು ಖಂಡತುಂಡವಾಗಿ ಖಂಡಿಸಿರುತ್ತಾರೆ. ಯಾವಾಗಲೋ ಎಲ್ಲೊ ಬರೆದ ಅನಂತಮೂರ್ತಿ ಲೇಖನವನ್ನು ಎತ್ತಿ ಹಿಡಿದು ತನ್ನ ಸ್ವಂತದ್ದಷ್ಟನ್ನು ಸೇರಿಸಿ ಅಗ್ಗದ ಪ್ರಚಾರಕ್ಕಾಗಿ ಇಂದು ಹೇಳಿಕೆ ನೀಡ ಬೇಕಾದ ಅಗತ್ಯವಿರಲಿಲ್ಲ. ಇದು ಕೋಟಿ ಕೋಟಿ ಆಸ್ತಿಕ ಬಂಧುಗಳಿಗೆ ಘಾಸಿ ಉಂಟುಮಾಡುವ ತುಚ್ಛ ಕ್ಷುದ್ರ ಹೇಳಿಕೆಯಾಗಿದೆ. ಇದುಸ್ವಾಸ್ಥ್ಯ ಸಮಾಜದ ಶಾಂತಿಗೆ ಭಂಗತರುವ ಅಲ್ಲದೆ ಅರಾಜಕತೆಗೂ ಕಾರಣವಾಗಬಲ್ಲ ಬೇಜಾವಬ್ದಾರಿ ವರ್ತನೆಯಾಗಿದೆ.

ಇದು ಅವರ ಗೌರವಕ್ಕೆ ತೀರಾ ಅನುಚಿತ ವರ್ತನೆಯಾಗಿದೆ. ಭಾರತೀಯ ಮನಸ್ಸು ತೃಪ್ತಿ ಪಡುವುದು ಧರ್ಮ ಮೂಲವಾದ ನಂಬಿಕೆಗಳು ಸ್ಥಿರಗೊಂಡಾಗ ಮಾತ್ರ. ನಂಬಿಕೆಯ ಮೇಲೆ ನಿಕೃಷ್ಟ ಕನಿಷ್ಠ ಜ್ಞಾನವುಳ್ಳವರು ಬಹುದೊಡ್ಡ ಅನಾಗರಿಕ ರೀತಿಯ ಹೇಳಿಕೆ ನೀಡುವುದು ಭಾರತ ದೇಶದ ದುರಂತ.

ಸನಾತನ ಸಂಸ್ಕೃತಿಯಲ್ಲಿ ಯಜ್ಞ, ಯಾಗ, ಮೂರ್ತಿ ಪೂಜೆ. ಜಪ, ಅನುಷ್ಠಾನಗಳು ಮಾನವನ ಜೀವನದಲ್ಲಿ ಹಾಸುಹೊಕ್ಕಾಗಿ ಬೆಳೆದು ಬಂದಿದೆ. ಕೇವಲ ಶಿಲೆಯನ್ನು ಕೆತ್ತಿ ರಚಿಸಿದ ಮೂರ್ತಿ ಎಂದಷ್ಟೇ ತಿಳಿದು ಕೊಂಡರೆ ಸಾಲದು. ಆಗಮ ಶಾಸ್ತ್ರದಲ್ಲಿ ಈ ಬಗ್ಗೆ ಬೃಹತ್ ವಿವರಣೆಗಳಿವೆ. ವಿಧಿ ವಿಧಾನಗಳಿವೆ. ಹಲವಾರು ವರ್ಷ ತಪಸ್ಸಿನಿಂದ ಮೈ ದಂಡಿಸಿಕೊಂಡ ಋಷಿಮುನಿಗಳ ಆಳವಾದ ಚಿಂತನೆ ಇದೆ. ದಿವ್ಯ ಮಂತ್ರಗಳಿವೆ.

ಮೂರ್ತಿ ಪ್ರತಿಷ್ಠೆಯ ಸಂದರ್ಭ, ಸಹಸ್ರ ಕಲಶ ಸಹಿತ ಬ್ರಹ್ಮಕಲಶಾಭಿಷೇಕದ ಮೂಲಕ ಪರಿಪೂರ್ಣ ಭಗವತ್ ಶಕ್ತಿಯ ಅವಿರ್ಭಾವ ಉಂಟಾಗುತ್ತದೆ. ಈ ಬಗ್ಗೆ ಆಗಮಶಾಸ್ತ್ರ ಸವಿಸ್ತಾರವಾದ ವಿವರಣೆ ನೀಡಿದ್ದು ಇದು ಸಾದಾರಣ ಸಾವಿರಾರು ಪುಟಗಳನ್ನು ಮೀರಿದೆ. ನಾವು ಭಗವಂತನನ್ನು ಭಾವನಾತ್ಮಕವಾಗಿ ವಿಗ್ರಹಗಳಲ್ಲಿ ರೂಪಿಸಿ, ಪೂಜಿಸಿ ಅವನನ್ನು ಅನುಭವಿಸುತ್ತೇವೆ. ಅಂತಶ್ಚರತಿ ಭೂತೇಷು ಗುಹಾಯಾಂ ವಿಶ್ವಮೂರ್ತಿಷು ಎಂಬಂತೆ ಈ ಪರಬ್ರಹ್ಮವು ಎಲ್ಲ ಪ್ರಾಣಿಗಳ ಎಲ್ಲ ವಿಗ್ರಹಗಳಲ್ಲಿ ವ್ಯಾಪಿಸಿದೆ. ಪ್ರ್ರವೃತ್ತಿಯಿಂದ ನಿವೃತ್ತಿ ಸಾಧ್ಯ. ಕೋಟಿ ಕೋಟಿ ಭಕ್ತರ ಮನಸ್ಸಿಗೆ ಘಾಸಿ ಮಾಡುವ ಈ ಅನಾಗರಿಕ ಹೇಳಿಕೆಯನ್ನು ಕಲ್ಕೂರ ಪ್ರತಿಷ್ಠಾನ ಒಕ್ಕೊರಲಿನಿಂದ ಖಂಡಿಸುತ್ತದೆ. ಬಹಿರಂಗ ಕ್ಷಮೆಯಾಚಿಸಬೇಕಾಗಿ ಆಗ್ರಹಿಸುತ್ತದೆ ಎಂದು ಪ್ರದೀಪ ಕುಮಾರ ಕಲ್ಕೂರ ಹೇಳಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English