- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 9ಕ್ಕೆ ಏರಿಕೆ

Commonwealth Games 2014 [1]

ಗ್ಲಾಸ್ಗೋ: ಭಾರತದ ವೇಟ್‌ಲಿಫ್ಟರ್‌ ಸತೀಶ್‌ ಶಿವಲಿಂಗಂ ತಮ್ಮ ಪದಾರ್ಪಣಾ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲೇ ಚಿನ್ನದ ಪದಕದಿಂದ ಸಿಂಗಾರಗೊಂಡು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅವರು ಪುರುಷರ 77 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಈ ಸಾಧನೆಗೈದರು. ಇದೇ ವಿಭಾಗದ ರಜತ ಪದಕ ಭಾರತದ ಮತ್ತೂಬ್ಬ ಸ್ಪರ್ಧಿ ರವಿ ಕಾಟುಲು ಪಾಲಾಯಿತು.

ಕಳೆದ ವರ್ಷ ನಡೆದ ಕಾಮನ್‌ವೆಲ್ತ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ತಮಿಳುನಾಡಿನ ವೆಲ್ಲೂರಿನವರಾದ 22ರ ಹರೆಯದ ಸತೀಶ್‌ ಶಿವಲಿಂಗಂ, ರವಿವಾರ ತಡರಾತ್ರಿ ನಡೆದ ಸ್ಪರ್ಧೆಯಲ್ಲಿ ಒಟ್ಟು 328 ಕೆಜಿ (149+179) ಭಾರವೆತ್ತಿ ಚಿನ್ನಕ್ಕೆ ಕೊರಳೊಡ್ಡಿದರು. 2010ರ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಒಡಿಶಾದ ರವಿ ಕಾಟುಲು ಈ ಬಾರಿ 317 (142+175) ಕೆಜಿಗೆ ಸೀಮಿತಗೊಂಡು ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. 314 ಕೆಜಿ ಭಾರವೆತ್ತಿದ (137+177) ಆಸ್ಟ್ರೇಲಿಯದ ಫ್ರ್ಯಾಂಕೋಯಿಸ್‌ ಇಟೌಂಡಿ ಕಂಚು ಗೆದ್ದರು.

ಸ್ನ್ಯಾಚ್‌ನಲ್ಲಿ 149 ಕೆಜಿ ಎತ್ತಿದ ಸತೀಶ್‌ ಶಿವಲಿಂಗಂ, 2010ರ ದಿಲ್ಲಿ ಗೇಮ್ಸ್‌ನಲ್ಲಿ ನೌರುವಿನ ಯುಕೊ ಪೀಟರ್‌ ನಿರ್ಮಿಸಿದ 148 ಕೆಜಿ ದಾಖಲೆಯನ್ನು ಮುರಿದರು. ಆಗಲೇ ಅವರು ಬಂಗಾರ ಗೆಲ್ಲುವುದು ಖಾತ್ರಿಯಾಗಿತ್ತು. ಸ್ನ್ಯಾಚ್‌ನ ಮೊದಲ ಪ್ರಯತ್ನದಲ್ಲಿ ಸತೀಶ್‌ ನಿರಾಯಾಸವಾಗಿ 142 ಕೆಜಿ ಲಿಫ್ಟ್ ಮಾಡಿದರು. ಆದರೆ ರವಿ ಇಷ್ಟೇ ತೂಕವೆತ್ತಲು ವಿಫ‌ಲರಾದರು. ಆದರೆ ದ್ವಿತೀಯ ಪ್ರಯತ್ನದಲ್ಲಿ 142 ಕೆಜಿ ಗುರಿ ಸಾಧಿಸಿದರು.

ಇಂಗ್ಲೆಂಡಿನ ಜಾಕ್‌ ಒಲಿವರ್‌ ಕೂಡ ದ್ವಿತೀಯ ಪ್ರಯತ್ನದಲ್ಲಿ 142 ಕೆಜಿ ಎತ್ತಿದರಾದರೂ ಮೂರನೇ ಪ್ರಯತ್ನದಲ್ಲಿ 145 ಕೆಜಿ ಮರೀಚಿಕೆಯಾಯಿತು.

ಸತೀಶ್‌ ಮತ್ತೂಮ್ಮೆ ಯಶಸ್ವಿಯಾಗಿ 146 ಕೆಜಿ ಲಿಫ್ಟ್ ಮಾಡಿದರೆ, ರವಿ 147 ಕೆಜಿಗೆ ಮುಂದಾಗಿ ವಿಫ‌ಲರಾದರು. ಕೊನೆಯ ಲಿಫ್ಟ್ ನಲ್ಲಿ ಸತೀಶ್‌ 149 ಕೆಜಿ ಸಾಧನೆಗೈದು ಗೇಮ್ಸ್‌ ದಾಖಲೆಯನ್ನು ಮುರಿದರು. ಕ್ಲೀನ್‌ ಆ್ಯಂಡ್‌ ಜರ್ಕ್‌ನಲ್ಲೂ ಸತೀಶ್‌ ಮತ್ತು ರವಿ ಪಯಣ ಇದೇ ರೀತಿ ಸಾಗಿತ್ತು.

ಸತೀಶ್‌ ಹಾಗೂ ರವಿ ಅವರ ಸಾಧನೆಯಿಂದಾಗಿ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 9ಕ್ಕೆ ಏರಿತು (3-2-4). ಇದು ಕಳೆದ ಸಲಕ್ಕಿಂತ ಒಂದು ಹೆಚ್ಚು (2-2-4).