- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಾಡಿನಿಂದ ನಾಡಿಗೆ ಬಂದ 6 ಆನೆಗಳ ಬಲ ಪರೀಕ್ಷೆ

6 Dasara Elephants arrived to Mysore city [1]

ಮೈಸೂರು: ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಮೊದಲ ತಂಡದಲ್ಲಿ ಕಾಡಿನಿಂದ ನಾಡಿಗೆ ಆಗಮಿಸಿರುವ 6 ಆನೆಗಳ ಬಲ ಪರೀಕ್ಷೆಯನ್ನು ಭಾನುವಾರ ಮಾಡಲಾಯಿತು.

ನಗರದ ಧನ್ವಂತ್ರಿ ರಸ್ತೆಯಲ್ಲಿರುವ ವೇಬ್ರಿಡ್ಜ್‌ನಲ್ಲಿ ಆನೆಗಳನ್ನು ನಿಲ್ಲಿಸಿ ತೂಕ ಮಾಡಲಾಯಿತು. ಈ ಬಲ ಪರೀಕ್ಷೆಯಲ್ಲಿ ಅಂಬಾರಿ ಆನೆ ಅರ್ಜುನ 5470 ಕೆ.ಜಿ ಹೊಂದಿದ್ದು, ಮೊದಲ ತಂಡದಲ್ಲಿ ಬಂದಿರವ ಆನೆಗಳ ಪೈಕಿ ಅರ್ಜುನನೇ ಬಲಶಾಲಿಯಾಗಿದ್ದಾನೆ. ಗಜೇಂದ್ರ 5020 ಕೆ.ಜಿ ತೂಕದೊಂದಿಗೆ 2ನೇ ಸ್ಥಾನ, ಮಾಜಿ ಅಂಬಾರಿ ಆನೆ ಬಲರಾಮ 4970 ಕೆ.ಜಿ ತೂಕದೊಂದಿಗೆ 3ನೇ ಸ್ಥಾನದಲ್ಲಿದೆ. ಉಳಿದಂತೆ ಅಭಿಮನ್ಯು 4880 ಕೆ.ಜಿ ವರಲಕ್ಷ್ಮೀ 3265 ಕೆ.ಜಿ ಹಾಗೂ ಮೇರಿ 3035 ಕೆ.ಜಿ ತೂಕ ಹೊಂದಿವೆ. ಮೈಸೂರು ಅರಮನೆ ಆವರಣದಲ್ಲಿ ಬೀಡ ಬಿಟ್ಟಿರುವ ಈ ಆನೆಗಳನ್ನು ಭಾನುವಾರ ಚಾಮರಾಜ ವೃತ್ತ, ಕೆ.ಆರ್ ವೃತ್ತ ಸಯ್ಯಾಜಿರಾವ್ ರಸ್ತೆ, ಧನ್ವಂತ್ರಿ ರಸ್ತೆ ಮೂಲಕ ವೇಬ್ರಿಡ್ಜ್ ಇರುವ ಸ್ಥಳಕ್ಕೆ ಕರೆ ತರಲಾಗಿತ್ತು. ಡಿಸಿಎಫ್ ಕರಿಕಾಳನ್, ಆನೆ ವೈದ್ಯ ಡಾ. ನಾಗರಾಜ್ ಮತ್ತು ಸಿಬ್ಬಂದಿ ಇದ್ದರು. ಪೊಲೀಸರು ಭದ್ರತೆ ಕೈಗೊಂಡಿದ್ದರು.

ತಾಲೀಮು ಇಂದಿನಿಂದ: 6 ಆನೆಗಳು ಆ.18ರಿಂದ ಪ್ರತಿದಿನ ತಾಲೀಮು ಆರಂಭಿಸಲಿವೆ. ಅಂಬಾರಿ ಆನೆ ಅರ್ಜುನ, ಬಲರಾಮ, ಅಭಿಮನ್ಯು, ಗಜೇಂದ್ರ, ವರಲಕ್ಷ್ಮಿ ಮತ್ತು ಮೇರಿ ತಾಲೀಮಿನಲ್ಲಿ ಭಾಗವಹಿಸಲಿವೆ. ಅರಮನೆ ಆನೆ ಬಿಡಾರದಿಂದ ಹೊರಡುವ ಗಜಪಡೆಕೋಟೆ ಆಂಜನೇಯಸ್ವಾಮಿ ದೇವಸ್ಥಾನ, ಕೆ.ಆರ್ ವೃತ್ತ ಸಯ್ಯಾಜಿರಾವ್ ರಸ್ತೆ ಮೂಲಕ ಹೈವೆ ವೃತ್ತದವರೆಗೆ ತೆರಳಿ ವಾಪಸ್ ಬರಲಿವೆ.