- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಉಸ್ತುವಾರಿ ಸಚಿವರ ಸೀಮೆಎಣ್ಣೆ ಮುಕ್ತ ನಗರ ಅವಾಸ್ತವಿಕ DYFI

Rai [1]

ಮಂಗಳೂರು : ಮಂಗಳೂರು ನಗರವನ್ನು ನವೆಂಬರ್ ಒಂದರಿಂದ ಸೀಮೆಎಣ್ಣೆ ಮುಕ್ತ ನಗರವನ್ನಾಗಿ ಘೋಷಿಸಲಾಗುವುದು ಎಂಬ ಉಸ್ತುವಾರಿ ಸಚಿವರ ಹೇಳಿಕೆಯನ್ನು ಅವಾಸ್ತವಿಕ ಎಂದು DYFI ನಗರ ಸಮಿತಿ ಹೇಳಿದೆ.

ಮಂಗಳೂರು ನಗರದಲ್ಲಿ ವಾಸಿಸುವ ಕಡುಬಡವರಿಗೆ ಬ್ಯಾಂಕ್ ಸಾಲದ ಮೂಲಕ ಅಡುಗೆ ಅನಿಲ ಸಂಪರ್ಕವನ್ನು ಬಲವಂತವಾಗಿ ನೀಡುವುದು, ಹಾಗೆಯೇ ವಾಸ್ತವ್ಯ ದಾಖಲೆ ಗುರುತು ಚೀಟಿ ಇದ್ದವರಿಗಷ್ಟೇ ಅಡುಗೆ ಸಂಪರ್ಕ ನೀಡುತ್ತೇವೆ. ಅದಕ್ಕಾಗಿ ಪ್ರತ್ಯೇಕ ಕೌಂಟರ್ಗಳನ್ನು ತೆರೆಯುತ್ತೇವೆ ಅನ್ನುವ ಮಾತುಗಳು ಆಡಳಿತದ ಬಾಲಿಶತನವನ್ನು ಎತ್ತಿ ತೋರಿಸುತ್ತಿದೆ. ಇನ್ನು ಪ್ರತಿಯೊಬ್ಬರಿಗೂ ಪಡಿತರ ಚೀಟಿ ನೀಡಲಾಗದ ಆಡಳಿತ ಸಾವಿರಾರು ಸಂಖ್ಯೆಯಲ್ಲಿ ನಗರಕ್ಕೆ ಬಂದು ಈ ನಗರದ ಅಭಿವೃದ್ಧಿಗಾಗಿ ದುಡಿಯುತ್ತಿರುವ ಉತ್ತರ ಕರ್ನಾಟಕ, ಉತ್ತರ ಭಾರತದ ವಲಸೆ ಕಾರ್ಮಿಕರಿಗೆ ಯಾವ ಗುರುತು ಚೀಟಿ, ವಾಸ್ತವ್ಯ ಸರ್ಟಿಫಿಕೇಟ್ ಇದೆ, ಅಂಥವರು ಅಡುಗೆ ಮಾಡುವುದು ಹೇಗೆ ಎಂಬುವುದನ್ನು ಉಸ್ತುವಾರಿ ಮಂತ್ರಿಗಳು ಆಲೋಚಿಸಿದ್ದಾರೆಯೇ? ಹಾಗೆಯೇ ಎಷ್ಟೋ ಮನೆಮಾಲಿಕರು ತಮ್ಮ ಮನೆ ಬಾಡಿಗೆದಾರರಿಗೆ ವಾಸ್ತವ್ಯದ ದಾಖಲೆ, ಒಪ್ಪಂದ ಪತ್ರವನ್ನು ನೀಡುವುದಿಲ್ಲ, ಇಂತಹ ಕಾನೂನುಬಾಹಿರ ನಡವಳಿಕೆಗಳ ಬಗ್ಗೆ ಕ್ರಮ ಕೈಗೊಳ್ಳಲು, ಬಡಪಾಯಿ ಬಾಡಿಗೆದಾರರ ಸಮಸ್ಯೆ ಪರಿಹರಿಸಲು ಯೋಚಿಸದ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಸೀಮೆಎಣ್ಣೆ ಬಳಕೆಯನ್ನು ಖಡ್ಡಾಯವಾಗಿ ನಿಷೇಧಿಸುತ್ತೇವೆ ಎನ್ನುವುದು ಬಾಲಿಶತನ ಮಾತ್ರವಲ್ಲದೆ ಮೂರ್ಖತನದ ನಿರ್ಧಾರ ಅಂತ DYFI ಮಂಳೂರು ನಗರ ಸಮಿತಿ ಟೀಕಿಸಿದೆ.

ಆಡಳಿತಕ್ಕೆ ನಿಜಕ್ಕೂ ಕಾಳಜಿ ಇದ್ದರೆ ಅಡುಗೆ ಅನಿಲ ಪಡೆಯುವುದನ್ನು ಸರಳೀಕರಿಸಲು, ಅನಿಲ ಸಂಪರ್ಕ ಪ್ರತಿಯೊಬ್ಬರು ಪಡೆಯುವಂತಹ ವಾತಾವರಣವನ್ನು ನಿರ್ಮಿಸಲಿ. ಆನಂತರ ಸೀಮೆಎಣ್ಣೆ ಮುಕ್ತ ನಗರವನ್ನಾಗಿಸುವ ಬಗ್ಗೆ ನಿರ್ಧಾ ಕೈಗೊಳ್ಳಲಿ ಎಂದು DYFI ನಗರ ಕಾರ್ಯದರ್ಶಿ ಸಂತೋಷ್ ಬಜಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.