- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪುತ್ತೂರು ಪುರಸಭಾಧ್ಯಕ್ಷರಾಗಿ ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ಆಯ್ಕೆ

puttur TMC President [1]
ಪುತ್ತೂರು: ಪುತ್ತೂರು ಪುರಸಭೆಗೆ ಮಂಗಳವಾರ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಎಚ್‌. ಮಹಮ್ಮದಾಲಿ ಅವರನ್ನು ಸೋಲಿಸುವ ಮೂಲಕ ಬಂಡಾಯ ಅಭ್ಯರ್ಥಿ ಕಾಂಗ್ರೆಸ್‌ನ ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ಪುರಸಭಾ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಅವರು 18 ಮತಗಳನ್ನು ಪಡೆದು ಎಚ್‌. ಮಹಮ್ಮದಾಲಿ ಅವರನ್ನು ಸೋಲಿಸಿದರು.

ಮಂಗಳವಾರ ಬೆಳಗ್ಗೆ ಕಾಂಗ್ರೆಸ್‌ನಿಂದ ಎಚ್‌. ಮಹಮ್ಮದಾಲಿ ಮತ್ತು ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ಹಾಗೂ ಬಿಜೆಪಿಯಿಂದ ವಿಶ್ವನಾಥ ಗೌಡ ನಾಮಪತ್ರ ಸಲ್ಲಿಸಿದ್ದರು. ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ನಾಮಪತ್ರವನ್ನು ಹಿಂದೆ ತೆಗೆದುಕೊಳ್ಳದೇ ಚುನಾವಣಾ ಕಣದಲ್ಲಿ ಉಳಿಯುವುದು ಖಚಿತವಾದಾಗ ಬಿಜೆಪಿಯ ವಿಶ್ವನಾಥ ಗೌಡ ತಮ್ಮ ನಾಮಪತ್ರವನ್ನು ಹಿಂದೆ ತೆಗೆದುಕೊಂಡರು.

ಬಿಜೆಪಿಯ 12 ಮಂದಿ ಮತ್ತು ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ಸಹಿತ ಕಾಂಗ್ರೆಸ್‌ನ 6 ಮಂದಿಯ ಬೆಂಬಲದೊಂದಿಗೆ ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ 18 ಮತಗಳನ್ನು ಪಡೆದರು. ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಎಚ್‌. ಮಹಮ್ಮದಾಲಿ ಕಾಂಗ್ರೆಸ್‌ನ 8 ಮತ್ತು ಶಾಸಕಿ ಶಕುಂತಳಾ ಶೆಟ್ಟಿ ಅವರ 1 ಮತಗಳು ಸೇರಿ 9 ಮತಗಳನ್ನು ಪಡೆದು ಪರಾಜಿತರಾದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು ಪುತ್ತೂರು ಪುರಸಭೆಯ ಎಲ್ಲ 14 ಮಂದಿ ಕಾಂಗ್ರೆಸ್‌ ಸದಸ್ಯರು ಅಧ್ಯಕ್ಷ ಚುನಾವಣೆಯಲ್ಲಿ ಅಧಿಕೃತ ಅಭ್ಯರ್ಥಿ ಎಚ್‌. ಮಹಮ್ಮದಾಲಿ ಅವರಿಗೆ ಮತ ನೀಡುವಂತೆ ಸ್ಪೀಡ್‌ ಪೋಸ್ಟ್‌ ಮೂಲಕ ವಿಪ್‌ ಜಾರಿ ಮಾಡಲಾಗಿತ್ತು. ವಿಪ್‌ಗೆ ವ್ಯತಿರಿಕ್ತವಾಗಿ ವರ್ತಿಸಿದರೆ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರು ಎಚ್ಚರಿಕೆ ನೀಡಿದ್ದರು. ಆದರೆ ಯಾವ ಎಚ್ಚರಿಕೆಯೂ ಪುತ್ತೂರು ಪುರಸಭಾ ಅಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸಹಾಯ ಮಾಡಲಿಲ್ಲ. ಬಂಡಾಯ ಅಭ್ಯರ್ಥಿ ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ತನ್ನ ಬೆಂಬಲಿಗರು ಮತ್ತು ಬಿಜೆಪಿ ಮತಗಳನ್ನು ಪಡೆದು ಪುತ್ತೂರು ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಪುರಸಭಾ ಅಧ್ಯಕ್ಷರಾಗಿ ಪ್ರಾಮಾಣಿಕತೆ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಪಾರದರ್ಶಕ ಆಡಳಿತ ನೀಡುವುದಾಗಿ ತಿಳಿಸಿದರು. ಬಡ ಕುಟುಂಬದಿಂದ ಬಂದ ತಾನು ಸಾಮಾಜಿಕ ಚಟುವಟಿಕೆಗಳ ಮೂಲಕ ರಾಜಕೀಯಕ್ಕೆ ಬಂದವನು. ಪುರಸಭಾ ಅಧ್ಯಕ್ಷನಾಗಿ ಅಧಿಕಾರದಲ್ಲಿದ್ದಷ್ಟು ದಿನ ಜನರ ಪರವಾಗಿ ಕೆಲಸ ಮಾಡುತ್ತೇನೆ. ನಾನು ಕಾಂಗ್ರೆಸ್‌ ಕಾರ್ಯಕರ್ತರ ಸಲಹೆಯಂತೆ ಪಕ್ಷದ ಹಿರಿಯ ನಾಯಕರ ಗಮನಕ್ಕೆ ತಂದು ಪುರಸಭಾ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದೇನೆ. ನಾನು ಈಗಲೂ ಕಾಂಗ್ರೆಸಿಗನೇ ಎಂದರು.

ಪುತ್ತೂರು ತಹಶೀಲ್ದಾರ್‌ ಎಂ.ಟಿ. ಕುಳ್ಳೇಗೌಡ ಚುನಾವಣಾಧಿಕಾರಿಯಾಗಿದ್ದರು.
puttur TMC President [2]