- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕನ್ನಡಿಗರಿಗೇ ಕನ್ನಡ ಬಾಷೆಯ ಮೇಲೆ ಅಭಿಮಾನ ಇಲ್ಲ !

Kannada [1]

ಮಂಗಳೂರು : ಕರ್ನಾಟಕ ರಾಜ್ಯ ಸರಕಾರ ಭ್ರಮೆಯಲ್ಲಿ ಇದೆಯೋ ಅಥವಾ ವಾಸ್ತವಿಕತೆಯನ್ನು ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿದೆಯೋ ಗೊತ್ತಾಗುತ್ತಿಲ್ಲ. ಇಲ್ಲದೇ ಹೋದರೆ 1994 ರಿಂದ ಬಂದ ಅಷ್ಟೂ ಸರಕಾರಗಳು ತಮ್ಮ ಜೋಳಿಗೆಯಲ್ಲಿದ್ದ ಭಾಷಾ ನೀತಿಯನ್ನು ನ್ಯಾಯಾಲಯದ ಅಂಗಳದಲ್ಲಿ ಬಿಚ್ಚಿಟ್ಟು ಖುಷಿ ನೋಡುತ್ತಿರಲಿಲ್ಲ. ಪ್ರತಿ ಸಾರಿ ನ್ಯಾಯಾಲಯದಿಂದ ಪೆಟ್ಟು ತಿಂದರೂ ಮತ್ತೇ ಮತ್ತೇ ಮೇಲ್ಮನವಿಯನ್ನು ಸಲ್ಲಿಸುವುದರ ಮೂಲಕ ಭಾಷಾ ನೀತಿಯನ್ನು ಗಾಳಿಗೆ ಬಿಟ್ಟ ಅಪವಾದದಿಂದ ದೂರ ಉಳಿಯುವ ಯತ್ನ ಮಾಡುತ್ತಿದೆ. ಆದರೆ ಈ ಬಾರಿ ರಾಜ್ಯ ಸರಕಾರಕ್ಕೆ ಅಂತಹ ಅವಕಾಶ ಸಿಗುವ ಸಾಧ್ಯತೆ ಇಲ್ಲ.

ಸುಪ್ರೀಂ ಕೋರ್ಟ್ ನ ಏಕ ಸದಸ್ಯ ಪೀಠದ ನ್ಯಾಯ ಮೂರ್ತಿ ಸಿರಿಯಾಕ್ ಜೋಸೆಫ್ ಅವರು ಕೊಟ್ಟ ತೀರ್ಪಿನ ಪ್ರಕಾರ ರಾಜ್ಯ ಸರಕಾರ ತನ್ನ ರಾಜ್ಯದಲ್ಲಿ ಮಕ್ಕಳು ಯಾವ ಭಾಷೆಯಲ್ಲಿ ಕಲಿಯಬೇಕು ಎನ್ನುವುದನ್ನು ನಿರ್ಧರಿಸುವ ಹಕ್ಕನ್ನು ಹೊಂದಿಲ್ಲ. ಒಂದು ಮಗು ತನ್ನ ಒಂದನೇ ತರಗತಿಯಿಂದ 5ನೇ ತರಗತಿ ತನಕ ಕನ್ನಡ ಭಾಷಾ ಮಾಧ್ಯಮದಲ್ಲಿಯೇ ವಿದ್ಯಾಭ್ಯಾಸವನ್ನು ಮಾಡಬೇಕು ಎಂದು ನಿರ್ಧರಿಸುವ ಹಕ್ಕನ್ನು ಆಯಾ ಮಗುವಿನ ಪೋಷಕರಿಗೆ ಬಿಡಬೇಕು ಎನ್ನುವುದು ಸರ್ವೋಚ್ಚ ನ್ಯಾಯಾಲಯದ ತೀರ್ಪು ಸರಕಾರಕ್ಕೂ ಗೊತ್ತಿದೆ, ತಪ್ಪಾಗಿರುವುದು ತನ್ನಿಂದಲೇ. ಏಕೆಂದರೆ ಇವತ್ತಿನ ದಿನಗಳಲ್ಲಿ ಸರಕಾರಿ ಕನ್ನಡ ಶಾಲೆಗಳ ಗುಣಮಟ್ಟವನ್ನು ನೋಡಿದರೆ ಒಬ್ಬ ಬಡವ ಕೂಡ ತನ್ನ ಮಗುವನ್ನು ಅಲ್ಲಿ ಸೇರಿಸಲು ಹಿಂದೆ ಮುಂದೆ ನೋಡುತ್ತಾನೆ. ಹಾಗಿರುವಾಗ ಒಬ್ಬ ವ್ಯಕ್ತಿ ತನ್ನ ಮಗುವಿನ ಭವಿಷ್ಯದ ವಿಷಯ ಬಂದಾಗ ಕನ್ನಡ ಒಂದು ಅನ್ನದ ಭಾಷೆಯಾಗಿ ಉಳಿದಿಲ್ಲ ಎಂದು ಧೈರ್ಯವಾಗಿ ಹೇಳಬಲ್ಲ. ನನ್ನ ಮಗುವಿಗೆ ಕನ್ನಡ ಭಾಷಾ ಮಾಧ್ಯಮದಲ್ಲಿ ಕಲಿಸಿಯೇ ಅವನ ಬದುಕನ್ನು ರೂಪಿಸುತ್ತೇನೆ ಎಂದು ಹೇಳುವ ಅಪ್ಪಟ ಕನ್ನಡ ಪ್ರೇಮಿಗಳ ಸಂಖ್ಯೆ ಈಗ ರಾಜ್ಯದಲ್ಲಿಯೇ ಬೆರಳೆಣಿಕೆಯಷ್ಟು ಇದೆ. ಖ್ಯಾತ ಕನ್ನಡ ಸಾಹಿತಿಗಳ, ಕನ್ನಡ ಹೋರಾಟಗಾರರ ಮಕ್ಕಳು ಕೂಡ ಕಲಿಯುವುದು ಆಂಗ್ಲ ಭಾಷೆಯಲ್ಲಿಯೆ, ಅದಕ್ಕೆ ನಮ್ಮ ಬಳಿ ಸಾಕ್ಷಿಗಳಿವೆ ಎನ್ನುವುದು ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸೂಡಿ ಸುರೇಶ್ ಅವರ ಹೇಳಿಕೆ.ಸರಕಾರದ ನಿಲುವಿನ ಪ್ರಕಾರ ಮಕ್ಕಳು ತಮ್ಮ 5 ನೇ ತರಗತಿಯ ತನಕದ ಕಲಿಕೆಯನ್ನು ಮಾತೃಭಾಷೆ ಅಂದರೆ ಕನ್ನಡದಲ್ಲಿಯೇ ಕಲಿತರೆ ಅದರ ಮೇಲೆ ವಿಪರೀತ ಒತ್ತಡ ಕಡಿಮೆ ಆಗುತ್ತದೆ. ಆಗ ಮಗುವಿಗೆ ಶಿಕ್ಷಣ ಎನ್ನುವುದು ಹೊರೆಯಾಗುವುದಿಲ್ಲ. ಆದ್ದರಿಂದ ಕಲಿಕೆಯನ್ನು ಮಗು ಒತ್ತಡದಲ್ಲಿ ಕಲಿಯುವ ಅವಶ್ಯಕತೆ ಇರುವುದಿಲ್ಲ.

ಆದರೆ ಒಂದು ಸಮೀಕ್ಷೆಯ ಪ್ರಕಾರ ಮಗು ತನ್ನ 3 ರಿಂದ 6 ವರ್ಷದ ನಡುವಿನ ವಿದ್ಯಾಭ್ಯಾಸವನ್ನು ಯಾವ ಭಾಷೆಯಲ್ಲಿ ಕಲಿಯುತ್ತದೆಯೋ ಆ ಭಾಷೆಗೆ ಒಗ್ಗಿ ಕೊಳ್ಳಲು ಅದಕ್ಕೆ ಸುಲಭವಾಗುತ್ತದೆ. ಭವಿಷ್ಯದಲ್ಲಿ ಈ ಸ್ಪರ್ಧಾತ್ಮಕ ಯುಗದಲ್ಲಿ ಅದಕ್ಕೆ ಯಾವುದೇ ಅಡಚಣೆಯಿಲ್ಲದೆ, ಸಂವಹನದ ಕೊರತೆ ಆಗದೇ ತನ್ನ ಉದ್ಯೋಗದಲ್ಲಿ ಉನ್ನತ ಮಜಲನ್ನು ಮುಟ್ಟಲು ಅನುಕೂಲವಾಗುತ್ತದೆ. ಆದರೆ ಒಳ ಮನಸ್ಸಿನಲ್ಲಿ ಇದನ್ನು ಒಪ್ಪುವ ರಾಜಕಾರಣಿಗಳು, ಅಧಿಕಾರಿಗಳು ನೇರವಾಗಿ ನ್ಯಾಯಾಲಯಗಳು ಆಂಗ್ಲ ಮಾಧ್ಯಮ ಶಾಲೆಗಳ ಪರವಾಗಿ ನೀಡಿರುವ ತೀರ್ಪನ್ನು ಅನುಷ್ಠಾನಕ್ಕೆ ತರಲು ಹಿಂಜರಿಯುತ್ತಾರೆ. ಹಾಗಾದರೆ ಇದು ನ್ಯಾಯಾಲಯದ ತೀರ್ಪಿನ ಉಲ್ಲಂಘನೆ ಅಥವಾ ನ್ಯಾಯಾಂಗ ನಿಂದನೆ ಆಗುವುದಿಲ್ಲವೇ? ಸದ್ಯಕಂತೂ ಸವೋಚ್ಚ ನ್ಯಾಯಾಲಯದ ಪೂರ್ಣಕಾಲೀನ ಬೆಂಚಿನ ಎದುರು ಮೇಲ್ಮನವಿ ಸಲ್ಲಿಸಲು ಸರಕಾರ ನಿರ್ಧಾರ ಮಾಡುತ್ತಿದೆ ಎನ್ನುವ ವರದಿಗಳು ಬಂದಿವೆ. ಇನ್ನೂ ಆಂಗ್ಲ ಭಾಷೆಯ ಶಾಲೆಗಳಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳು ಇರುತ್ತದೆಯಾ? ಅಲ್ಲಿಗೆ ಸೇರುವ ಮಕ್ಕಳು ಸಂಪೂರ್ಣವಾಗಿ ತಮ್ಮ ದೈಹಿಕ, ಬೌದ್ದಿಕ ಮಟ್ಟವನ್ನು ಎದುರಿಸುವಷ್ಟು ಸೌಕರ್ಯಗಳು ಶಾಲೆಗಳಲ್ಲಿ ಇರುತ್ತದಾ? ಇದಕ್ಕೆ ಉತ್ತರ ಇಲ್ಲ. ಏಕೆಂದರೆ ಇಲ್ಲೂ ಕೂಡ ಭ್ರಷ್ಟಾಚಾರದ ವಾಸನೆ ದಟ್ಟವಾಗಿ ಮೂಗಿಗೆ ಬಡಿಯುತ್ತದೆ. ನಾವು ಆಂಗ್ಲ ಭಾಷೆಯಲ್ಲಿ ಶಿಕ್ಷಣ ಕೊಡಿಸುತ್ತೇವೆ ಎಂದು ಮುಂದೆ ಬಂದ ಎಲ್ಲರಿಗೂ ಅವರವರ “ಆರ್ಥಿಕ” ಶಕ್ತಿಯನ್ನು ನೋಡಿ ಸರಕಾರ ಅನುಮತಿ ನೀಡಿದೆ. ಅಲ್ಲಿ ಆಟದ ಮೈದಾನ ಸಹಿತ ಇತರ ಎಲ್ಲ ಪೂರಕ ವ್ಯವಸ್ಥೆ ಇದೆಯೇ ಇಲ್ಲವೆ ಎಂದು ಪರಿಶೀಲಿಸಿ ನೋಡುವ ಗೋಜಿಗೆ ಅಧಿಕಾರಿಗಳು ಹೋಗಿಯೇ ಇಲ್ಲ. ಈಗ ಕೇವಲ ಅನುಮತಿ ಸಿಕ್ಕಿ ಮೂಲಭೂತ ಸೌಲಭ್ಯ ಇಲ್ಲದ ಶಾಲೆಗಳು ನೋಂದಾವಣೆ ಆಗದೇ ಅದರ ಮಕ್ಕಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಒಂದು ಕಡೆ ಅಂತಿಮ ತೀರ್ಪಿನಲ್ಲಿ ಸರಕಾರ ಮತ್ತೇ ಸೋತರೆ ಆಗ ಅಂತಹ ಶಾಲೆಗಳು ನೋಂದಾವಣೆ ಆಗಲಿವೆ. ಒಂದು ವೇಳೆ ಸರಕಾರ ಗೆದ್ದರೆ ಆ ಮಕ್ಕಳ ಭವಿಷ್ಯ ದೇವರೇ ಗತಿ. ಆದರೆ ತಾವೇ ಗೆಲ್ಲುತ್ತೇವೆ ಎನ್ನುವ ಧೈರ್ಯದಲ್ಲಿ ಶಾಲೆಗಳ ಆಡಳಿತ ಮಂಡಳಿಗಳು ಇವೆ. ಇನ್ನೂ ಮಕ್ಕಳ ಭವಿಷ್ಯದ ಬ್ಲಾಕ್ಮೇಲ್ ಮಾಡಿ ತಮ್ಮ ಶಾಲೆಗಳನ್ನು ನೋಂದಾವಣೆ ಮಾಡುವ ಪ್ರಕ್ರಿಯೆಯೆ ಕೆಲವು ಶಾಲೆಗಳು ಮುಂದಾಗುತ್ತವೆ. ಅಷ್ಟಕ್ಕೂ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕೂಡ ಕನ್ನಡವನ್ನು ಒಂದು ಪಠ್ಯವನ್ನಾಗಿ ಕಲಿಸುತ್ತಾರೆ.

ಇನ್ನೂ ಒಂದು ವೇಳೆ ಸರಕಾರ ನ್ಯಾಯಾಲಯದ ತೀರ್ಪಿಗೆ ತಲೆಬಾಗಿ ಆಂಗ್ಲ ಭಾಷಾ ಮಾಧ್ಯಮ ಶಾಲೆಗಳಿಗೆ ಅನುಮತಿ ಕೊಟ್ಟರೆ ಎನು ಆಗುತ್ತದೆ? ಏನು ಆಗುವುದಿಲ್ಲ. ಏಕೆಂದರೆ ಇದು ಕೋರ್ಟ್ ಆದೇಶ.

ಕೃಪೆ: ಮೆಗಾ ಮೀಡಿಯ ನ್ಯೂಸ್ ಕನ್ನಡ ಪತ್ರಿಕೆ ಯ ನವೆಂಬರ್ 15 ರ ಸಂಚಿಕೆಯಿಂದ