- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹಿಂದೂ ವಿರೋಧಿ ರಾಜ್ಯ ಸರಕಾರದಿಂದ ಮಠಮಂದಿರದ ವಶ : ವಿಶ್ವೇಶತೀರ್ಥ ಸ್ವಾಮೀಜಿ

VHP protest [1]

ಮಂಗಳೂರು: ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಮಂಗಳೂರು ಆಶ್ರಯದಲ್ಲಿ ‘ಹಿಂದೂ ವಿರೋಧಿ ರಾಜ್ಯ ಸರಕಾರ’ ಎಂದು ಆರೋಪಿಸಿ ವಿವಿಧ ಮಠಾಧೀಶರ ನೇತೃತ್ವದಲ್ಲಿ ದ. ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಗುರುವಾರ್ ಬೃಹತ್‌ ಪ್ರತಿಭಟನೆ ನಡೆಯಿತು.

ಇದಕ್ಕೂ ಮುನ್ನ ಶರವು ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನ ಮೆರವಣಿಗೆ ನಡೆಯಿತು.

ಧಾರ್ಮಿಕ ಸ್ವಾತಂತ್ರವನ್ನು ಅಪಹರಿಸುವ ಸ್ಥಿತಿ ನಿರ್ಮಾಣವಾಗಿದೆ. ಮಠಮಂದಿರದ ಕುರಿತು ಮಸೂದೆ ರೂಪಿಸಲು ಹೊರಟಿರುವ ಕಾಂಗ್ರೆಸ್‌ ಸರಕಾರ ತತ್‌ಕ್ಷಣವೇ ಅದನ್ನು ವಾಪಾಸು ಪಡೆಯಬೇಕು. ಅಲ್ಲಿ ವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಶ್ರೀ ಕ್ಷೇತ್ರ ಪೇಜಾವರದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಕೇವಲ ಒಂದು ಧರ್ಮವನ್ನು ಮಾತ್ರ ಗುರಿಯಾಗಿಸುವ ಕೆಲಸ ಪ್ರಸ್ತುತ ರಾಜ್ಯ ಸರಕಾರದಿಂದ ನಡೆಯುತ್ತಿದೆ. ಎಲ್ಲ ಧರ್ಮದವರಿಗೂ ಅನ್ವಯವಾಗುವ ನಿಟ್ಟಿನಲ್ಲಿ ಮಸೂದೆ ಅನುಷ್ಠಾನ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಯಾರೂ ಉತ್ತರ ನೀಡುತ್ತಿಲ್ಲ ಎಂದು ಸ್ವಾಮೀಜಿ ಹೇಳಿದರು.

ಮತಾಂತರದ ಬಗ್ಗೆ ಮಾತನಾಡದವರು, ಮರು ಮತಾಂತರದ ಬಗ್ಗೆ ಭಾರೀ ಕೋಲಾಹಲ ಎಬ್ಬಿಸುತ್ತಿದ್ದಾರೆ. ಆಕಾಶವೇ ಕಳಚಿ ಬಿದ್ದಂತೆ ಮಾತನಾಡುತ್ತಿದ್ದಾರೆ. ಹಿಂದೂಗಳಿಗೆ ಒಂದು ನ್ಯಾಯ, ಇನ್ನೊಬ್ಬರಿಗೆ ಒಂದು ನ್ಯಾಯ ಎಂಬಂತಾಗಿದೆ. ಎಲ್ಲ ಧರ್ಮದವರು, ಪಕ್ಷದವರು ಜತೆಯಾಗಿ ಬಲತ್ಕಾರದ ಮತಾಂತರ ನಿಷೇಧ ಕಾನೂನಿಗೆ ಬೆಂಬಲ ನೀಡಬೇಕು ಎಂದು ನಾನು ಹೇಳಿದರೂ ಇದನ್ನು ಒಪ್ಪಲು ಯಾರೂ ತಯಾರಿಲ್ಲ ಎಂದು ಅವರು ದೂರಿದರು.

ಕೊಲ್ಯ ಶ್ರೀ ರಮಾನಂದ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ವಜ್ರದೇಹಿ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಬಾಳೆಕುದ್ರು ಶ್ರೀ ನೃಸಿಂಹ ಸ್ವಾಮೀಜಿ, ಕರಿಂಜ ಶ್ರೀ ಮುಕ್ತಾನಂದ ಸ್ವಾಮೀಜಿ ಮೊದಲಾದವರು ಮಾತನಾಡಿದರು.

ಪ್ರಮುಖರಾದ ಪ್ರೊ| ಎಂ.ಬಿ. ಪುರಾಣಿಕ್‌, ಜಗದೀಶ ಶೇಣವ, ಜಿತೇಂದ್ರ ಕೊಟ್ಟಾರಿ, ಕೃಷ್ಣಮೂರ್ತಿ, ಪಿ.ಎ. ಭಟ್‌, ಅಂಗಾರ ಶ್ರೀಪಾದ, ಸುಪ್ರಸಾದ್‌ ಶೆಟ್ಟಿ, ಗೋಪಾಲ್‌ ಮೊದಲಾದವರು ವೇದಿಕೆಯಲ್ಲಿದ್ದರು. ಸಂಸದ ನಳಿನ್‌ ಕುಮಾರ್‌ ಕಟೀಲು, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಶರಣ್‌ ಪಂಪ್‌ವೆಲ್‌ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.