ಕದ್ರಿ ದೇವಸ್ಥಾನದ ಭಾಗೀರಥಿ ತೀರ್ಥ ವಿನಾಶದ ಅಂಚಿನಲ್ಲಿ

12:14 AM, Monday, January 5th, 2015
Share
1 Star2 Stars3 Stars4 Stars5 Stars
(5 rating, 7 votes)
Loading...

Kadri Bhagirathi

ಮಂಗಳೂರು : ಇಲ್ಲಿ ಕದ್ರಿ ದೇವಸ್ಥಾನ ಇತಿಹಾಸ ಪ್ರಸಿದ್ಧ ಎನ್ನುವುದು ಹೊಸತೂ ಅಲ್ಲ. ಯಾರಿಗೂ ಗೊತ್ತಿಲ್ಲದ ಸಂಗತಿಯೂ ಅಲ್ಲ. ಪುರಾಣ ಕಾಲದಲ್ಲಿ ಕದಳೀಯ ವನದಲ್ಲಿ ದೇವರನ್ನು ಒಲಿಸಲು ಋಷಿ, ಮುನಿಗಳು ಘೋರ ತಪಸ್ಸನ್ನು ಮಾಡಿದ್ದರು, ಅದಕ್ಕಾಗಿ ಕದಿಳೀಯ ವನ ಕಾಲಾಂತರದಲ್ಲಿ ಕದ್ರಿ ಎಂದು ಜನರ ಮಾತಿನಲ್ಲಿ ಹೇಳಲು ಪ್ರಾರಂಭವಾಯಿತು. ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಪುರಾಣ ಪ್ರಸಿದ್ಧ ಎನ್ನುವುದು ಮಂಗಳೂರಿಗೆ ಹೆಮ್ಮೆಯ ಸಂಗತಿ. ಅದಕ್ಕೆ ಅನೇಕ ಸಾಕ್ಷಾಧಾರಗಳು ಇವೆ. ಅದನ್ನು ವಿವರಿಸುವ ಮೊದಲು ನಿಮಗೆ ಗೊತ್ತಿಲ್ಲದೆ ಈ ಕದ್ರಿಯ ಸನಿಹ ನಡೆಯುತ್ತಿರುವ ಘನಘೋರ ದುರಂತವೊಂದರ ಮುನ್ನುಡಿಯನ್ನು ಕೆಲವು ಸ್ಥಾಪಿತ ಹಿತಾಸಕ್ತಿಗಳು ಬರೆಯುತ್ತಿವೆ. ಅಂದರೆ ಇದೇ ಕದ್ರಿ ದೇವಸ್ಥಾನದ ಪ್ರಾವಿತ್ರ್ಯತೆಯನ್ನು ವ್ಯವಸ್ಥಿತವಾಗಿ ಸರ್ವನಾಶ ಮಾಡುವ ಕೆಲಸಕ್ಕೆ ಮಂಗಳೂರಿನ ಹೆಸರಾಂತ ಕಟ್ಟಡ ನಿರ್ಮಾಣ ಕಂಪೆನಿಗಳು ಮುಂದಾಗಿವೆ. ಮಂಗಳೂರಿನ ಕದ್ರಿ ದೇವಸ್ಥಾನಕ್ಕೆ ಬಂದವರು ದೇವಸ್ಥಾನದ ಹಿಂದಿರುವ ಸಪ್ತ ಕೆರೆಗೆ, ಅದರ ದಡದಲ್ಲಿರುವ ಅಶ್ವಥ ಕಟ್ಟೆ, ನಾಗದೇವರ ಕಟ್ಟೆಗೆ ಪ್ರದಕ್ಷಿಣೆ ಹಾಕದೇ ಬರುವುದಿಲ್ಲ. ಕೆರೆಯ ಪಾಶ್ರ್ವದಲ್ಲಿ ಅನಾದಿ ಕಾಲದಲ್ಲಿ ಋಷಿ, ಮುನಿಗಳೇ ಪ್ರತಿಷ್ಟಾಪಿಸಿದರು ಎಂದು ಹೇಳಲಾಗುವ ಶಿವನ ಲಿಂಗದ ಸಾನಿಧ್ಯವಿದೆ. ಅದರ ಎದುರಿಗೆ ಇರುವ ಪುಟ್ಟ ಗುಡಿಯಲ್ಲಿ ಅನೇಕ ಶಿವಲಿಂಗ ಮತ್ತು ದೇವರ ಮೂರ್ತಿಗಳಿವೆ. ಅಂತಹ ಕದ್ರಿ ದೇವಳದ ಜನ ಬಹಳ ಹಿಂದಿನಿಂದಲೂ ನಂಬಿಕೊಂಡು ಬಂದದ್ದು ಗೋಮುಖ ತೀರ್ಥ. ಗೋಮುಖ ತೀರ್ಥವನ್ನು ಸೇವಿಸಿದರೆ ಪುಣ್ಯ ಬರುತ್ತದೆ ಎನ್ನುವುದು ಒಂದು ನಂಬಿಕೆಯಾದರೆ ಅದೇ ತೀರ್ಥವನ್ನು ಚೆಂಬಿನಲ್ಲಿ ತೆಗೆದುಕೊಂಡು ಹೋಗಿ ಅದರ ಎದುರಿನಲ್ಲಿರುವ ಶಿವನ ಮೂರ್ತಿಗೆ ಅಭಿಷೇಕ ಮಾಡಿದರೆ ಮನದಲ್ಲಿ ಬಯಸಿರುವ ಕಾರ್ಯಗಳು ಈಡೇರುತ್ತವೆ ಎನ್ನುವುದನ್ನು ಭಕ್ತರು ಶ್ರದ್ದಾಭಕ್ತಿಯಿಂದ ಒಪ್ಪುತ್ತಾರೆ.

ಆದರೆ ಬಿಲ್ಡರ್ ಗಳಿಗೆ ಹಣದ ಥೈಲಿಯ ಎದುರು ಯಾವುದೂ ಬೇಕಾಗಿರುವುದಿಲ್ಲವಲ್ಲ. ಕದ್ರಿಗೆ ಅದರದೇ ಆದ ಭಕ್ತ ಸಂಕುಲವಿದೆ. ಕದ್ರಿ ಮಂಜುನಾಥನನ್ನು ಅರಸಿ ಬರುವ ಭಕ್ತರಿಗೆ ಮುಂದಿನ ದಿನಗಳಲ್ಲಿ ಗೋಮುಖ ತೀರ್ಥ ಬರುವುದು ನಿಂತು ಹೋಗಲಿದೆ. ಒಂದು ಕಾಲದಲ್ಲಿ ಪಾಂಡವರು ತಮ್ಮ ಅಜ್ಙಾತ ವಾಸದ ಸಮಯದಲ್ಲಿ ಕದಿಳೀ ವನವನ್ನು ಅರಸಿ ಇದೇ ಜಾಗಕ್ಕೆ ಬಂದಿದ್ದರು ಎನ್ನುವುದಕ್ಕೆ ಇಲ್ಲಿ ಕುರುಹುಗಳಿವೆ. ಅಷ್ಟೆ ಅಲ್ಲದೇ ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ಹಾಗೂ ಸೀತಾದೇವಿ ಲಕ್ಷ್ಮಣನ್ನೊಳಗೊಂಡು ಇದೇ ಕದ್ರಿಗೆ ಬಂದಿದ್ದರು ಎನ್ನುವುದಕ್ಕೆ ಅಲ್ಲಿ ಕಂಡುಬರುವ ಸೀತಾಬಾವಿಯೇ ಜ್ವಲಂತ ಉದಾಹರಣೆ. ಸೀತಾದೇವಿಯ ಬಾಯಾರಿಕೆಯನ್ನು ನೀಗಿಸಲು ರಾಮ ಅದನ್ನು ತನ್ನ ದೈವಿಶಕ್ತಿಯಿಂದ ಕ್ಷಣಮಾತ್ರದಲ್ಲಿ ನಿರ್ಮಿಸಿದ ಎನ್ನುವುದು ಮುನಿಗಳ ಅಂಬೋಣ. ಅದರ ಪಕ್ಕದಲ್ಲಿ ಹನುಮಾನ ಗುಡಿ, ನಾಥಪಂಥದ ಮೂರು ತಪೋಮುನಿಗಳ ಸಮಾಧಿ ಮತ್ತು ಪರಶುರಾಮ ಅಗ್ನಿಕುಂಡಗಳು ಕದ್ರಿ ಪುರಾಣಕಾಲದಿಂದಲೂ ಎಷ್ಟು ಮಹತ್ವದ್ದು ಎಂದು ಎಳೆಎಳೆಯಾಗಿ ವಿವರಿಸುತ್ತವೆ. ಅಂತಹ ತ್ರೇತಾಯುಗ, ದ್ವಾಪರಯುಗದಲ್ಲಿ ತನ್ನ ಇರುವಿಕೆಯಿಂದ ಪ್ರಸಿದ್ಧಗೊಂಡಿದ್ದ ಪ್ರದೇಶ ಈಗ ಕೆಲವೇ ಲೋಭಿಗಳ, ಹಣದ ದಾಹಿಗಳ ಕರಾಳ ಲೋಲಪತೆಗೆ ಕಲಿಯುಗದಲ್ಲಿ ಅವನತಿಯ ಅಂಚಿಗೆ ಬಂದು ಮುಟ್ಟಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ವಿ.ಪೊನ್ನುರಾಜ್ ಅವರಿಗೆ ಈ ಸ್ಥಳದ ಪ್ರಾಮುಖ್ಯತೆ ಗೊತ್ತಿತ್ತು. ಅಷ್ಟೇ ಅಲ್ಲ ಈ ಸ್ಥಳದ ಮಹತ್ವ ಮತ್ತು ಭವಿಷ್ಯದಲ್ಲಿ ಈ ಸ್ಥಳಕ್ಕೆ, ಇಲ್ಲಿನ ಮಣ್ಣಿಗೆ ಅರ್ಥಾತ್ ಇಲ್ಲಿನ ನೆಲಕ್ಕೆ ಬರಬಹುದಾದ ಬೆಲೆ ಗೊತ್ತಿತ್ತು. ಅದರ ಸುಳಿವು ಅವರಿಗೆ ಆವತ್ತೇ ತಿಳಿದಿತ್ತು. ಅದನ್ನು ಮನಗಂಡ ಅವರು ತಮ್ಮ ಅಧಿಕಾರಾವಧಿಯಲ್ಲಿಯೇ ಅದಕ್ಕೊಂದು ಸೂಕ್ತ ಬಂದೊಬಸ್ತ್ ಮಾಡುವ ಉದ್ದೇಶದಿಂದ ಒಂದು ಯೋಜನೆ ಹಾಕಿಕೊಂಡಿದ್ದರು. ಕದ್ರಿಯ ಸುತ್ತಮುತ್ತಲ ಪ್ರದೇಶವನ್ನು ಗ್ರೀನ್ ಬೆಲ್ಟ್ ಅಥವಾ ಹಸಿರುಪಟ್ಟಿ ಪ್ರದೇಶ ಎಂದು ಗುರುತಿಸಿದ್ದರು. ಅದರ ಉದ್ದೇಶ ಒಂದೇ. ಯಾವ ಪ್ರದೇಶವನ್ನು ಗ್ರೀನ್ ಬೆಲ್ಟ್ ಎಂದು ಘೋಷಣೆ ಮಾಡಲಾಗುತ್ತೋ ಆ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲ ನೂರು ಮೀಟರ್ ಪ್ರದೇಶದಲ್ಲಿ ಯಾವುದೇ ಕಟ್ಟಡವನ್ನು ನಿರ್ಮಿಸುವಂತಿಲ್ಲ. ಗ್ರೀನ್ ಬೆಲ್ಟ್ ಅಲ್ಲಿಯೇ ಇರುವ ಜೋಗಿ ಮಠ, ಡಾಕ್ಟರ್ ಕಾಲೋನಿಯನ್ನು ಒಳಗೊಂಡು ವಿಶಾಲವಾಗಿ ಹರಡಿಕೊಂಡಿದೆ. ಅದು ಈಗ ಉಳ್ಳವರ ಅಂದರೆ ಬಿಲ್ಡರ್ಸ್ ಗಳ ಕಣ್ಣು ಕುಕ್ಕುತ್ತಿದೆ. ಅಲ್ಲಿ 18 ಮಹಡಿಗಳ ವಸತಿ ಸಮುಚ್ಚಯ ಕಟ್ಟಲು ಕೆಲವು ಬಿಲ್ಡರ್ಸ್ಗಳು ಬಹಳ ಹಿಂದಿನಿಂದಲೂ ಪ್ರಯತ್ನಿಸುತ್ತಲೇ ಬರುತ್ತಿದ್ದಾರೆ. ಆದರೆ ನಿಮಗೆ ಗೊತ್ತಿರುವ ಹಾಗೇ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕಟ್ಟಡ ಕಟ್ಟುವ ಮೊದಲು ಪಾಲಿಕೆಯ ಅನುಮತಿ ಪಡೆಯಲೇಬೇಕಾಗುತ್ತದೆ. ಆದರೆ ಗ್ರೀನ್ಬೆಲ್ಟ್ನಲ್ಲಿ ದೊಡ್ಡ ದೊಡ್ಡ ವಸತಿ ಸಮುಚ್ಚಯ ನಿರ್ಮಾಣ ವಾದರೆ ಅದರ ಎಫೆಕ್ಟ್ ಕದ್ರಿಯ ಪಾವಿತ್ರ್ಯತೆಗೆ ದಕ್ಕೆ ಬೀಳುವುದು ಖಂಡಿತ ಎಂದು ಗೊತ್ತಿದ್ದ ಕಾರಣ ಈ ಹಿಂದೆ ಮನಪಾದಲ್ಲಿ ಅಧಿಕಾರದಲ್ಲಿದ್ದ ಭಾರತೀಯ ಜನತಾ ಪಕ್ಷದ ಸರಕಾರ ಅನುಮತಿ ನೀಡಿರಲಿಲ್ಲ. ಅದರಿಂದ ಎಷ್ಟು ಹಣ ಕೊಟ್ಟಾದರೂ ಆ ಭೂಮಿಯನ್ನು ಕಬಳಿಸುವ ಬಿಲ್ಡರ್ಸ್ ಗಳ ಲಾಬಿಗೆ ತೀವ್ರ ಹಿನ್ನಡೆ ಆಗಿತ್ತು. ಆದರೆ ಈಗ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಶತಾಯಗತಾಯ ಅನುಮತಿ ಪಡೆಯುವ ಪ್ರಯತ್ನದಲ್ಲಿ ಯಶಸ್ಸು ಕಂಡಿರುವ ಬಿಲ್ಡರ್ಸ್ಗಳು ತಮ್ಮ ಕಾರ್ಯದಲ್ಲಿ ಜಯ ಸಾಧಿಸಿದ್ದಾರೆ. ಬಿಲ್ಡರ್ ಗಳಿಂದಲೇ ತಾವು ಜನ್ಮ ತಾಳಿದ್ದು ಎಂದು ಅಂದುಕೊಂಡಿರುವ ಕೆಲವು ಕಾಂಗ್ರೆಸ್ಸಿನ ಮಾಜಿ ಮೇಯರ್ ಗಳು, ಹಾಲಿ ಸದಸ್ಯರುಗಳು ಖ್ಯಾತ ಬಿಲ್ಡರ್ಸ್ ಳಿಗೆ ನಮ್ಮ ಪವಿತ್ರ ಕದ್ರಿಯ ನೆಲದಲ್ಲಿ ಅಗೆಯಲು ಅನುಮತಿ ಕೊಡಿಸಿಬಿಟ್ಟಿದ್ದಾರೆ. ಅಲ್ಲಿ ನಿರ್ಮಾಣಗೊಂಡು ಜನರ ಸೇವೆಗೆ? ಸಿದ್ಧವಾಗಿರುವ ಮೇರಿಡಿಯನ್, ಜೆ.ವಿ.ಸನ್ಸ್, ಗೋಲ್ಡ್ ಪ್ಯಾಲೇಸ್ ಮತ್ತು ಭಂಡಾರಿ ಬಿಲ್ಡರ್ಸ್ ಸಮೂಹ ಸಂಸ್ಥೆಗಳು ಕದ್ರಿಯ ನೆಲದಲ್ಲಿ ಬುಲ್ಡೋಜರ್ಸ್ಗಳ ಆರ್ಭಟ ನಡೆಸಿ ಆಗಿದೆ. ಇದು ಹೀಗೆ ಮುಂದುವರೆದರೆ ಮುಂದಿನ ಕೆಲವೇ ವರ್ಷಗಳಲ್ಲಿ ಕದ್ರಿಯ ಕಾಶಿ ಮೂಲದ ಗೋಮುಖ ತೀರ್ಥ ಎನ್ನುವುದು ನಮ್ಮ ಪಾಲಿಗೆ ಮರೀಚಿಕೆ ಆಗಿ ಹೋಗಲಿದೆ. ಅಲ್ಲಿನ ಹಸಿರು ಸಂಪತ್ತು ಎನ್ನುವುದು ಕಾಣದಂತೆ ಮಾಯವಾಗಿ ಹೋಗಲಿದೆ. ನೂರಾರು ವಸತಿ ಸಮುಚ್ಚಯಗಳು ಅಲ್ಲಿ ಎತ್ತಿ ಅದರಿಂದ ಬರುವ ಡ್ರೈನೆಜ್ನ ತ್ಯಾಜ್ಯ ಇಡೀ ಕದ್ರಿಯ ಮೂಲದಲ್ಲಿ ಹರಿಯುತ್ತಿರುವ ನೀರಿನ ಹರಿವಿಗೆ ದಕ್ಕೆ ತರಲಿದೆ. ಇತಿಹಾಸ ನಮಗೆ ಕೊಟ್ಟಿರುವ ಕುರುಹುಗಳು ನಮಗೆ ಉಡುಗೊರೆಗಳಲ್ಲ, ಅವು ನಾವು ನಮ್ಮ ಮುಂದಿನ ಪೀಳಿಗೆಗೆ ಉಳಿಸಬೇಕಾಗುವ ಅಮೂಲ್ಯ ಸಂಪತ್ತುಗಳು. ಇದರ ಅರಿವು ಇರಬೇಕಾಗುತ್ತದೆ. ಮಂಗಳೂರು ದಕ್ಷಿಣದ ಶಾಸಕರಾಗಿರುವ ಜೆ.ಆರ್.ಲೋಬೋ ಅವರು ಈ ಬಗ್ಗೆ ತಕ್ಷಣ ಗಮನ ಹರಿಸಿ ಮುಂಬರುವ ಅಪಾಯವನ್ನು ತಪ್ಪಿಸದಿದ್ದರೆ ಪಾಲಿಕೆಯ ಭ್ರಷ್ಟ ಕಾಪರ್ೋರೇಟರ್ಗಳೊಂದಿಗೆ ಅವರು ಕೂಡ ಕೈ ಜೋಡಿಸಿದ್ದಾರೆ ಎಂದು ಕದ್ರಿ ದೇವಳದ ಆಸ್ತಿಕ ಭಾಂದವರು ನಿರ್ಣಯಿಸಬೇಕಾಗುತ್ತದೆ. ಧಾಮರ್ಿಕ ದತ್ತಿ ಇಲಾಖೆಯ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿ ತಮ್ಮ ಜೇಬನ್ನು ತುಂಬಿರುವ ವಾಸನೆ ಕೂಡ ಜನರ ಮೂಗಿಗೆ ಬಡಿಯುತ್ತದೆ. ಕದ್ರಿಯ ಮಂಜುನಾಥನ ಭಕ್ತರ ಆಶಯ ಒಂದೇ, ಬಿಲ್ಡರ್ಸ್ಗಳ ಎಂಜಲು ಕಾಸಿಗೆ ಜೊಲ್ಲು ಸುರಿಸುವ ಮನಪಾದ ಕಾಂಗ್ರೆಸ್ ಸದಸ್ಯರು, ಅಧಿಕಾರಿಗಳು ಶ್ರೀದೇವರ ಶಾಪಕ್ಕೆ ಗುರಿಯಾಗಿ ಬೀದಿಗೆ ಬೀಳದಿರಲಿ. ಮಂಜುನಾಥ ಎಲ್ಲವನ್ನು ಗಮನಿಸುತ್ತಿದ್ದಾನೆ. ದೇವರ ಹೆದರಿಕೆ ಕಿಂಚಿತ್ತಾದರೂ ಇರಲಿ.

ಕದ್ರಿ ಕಂಬಳ ನಡೆಯದೆ ಅಂದು ದೇವರ ಲಕ್ಷದೀಪೋತ್ಸವ ನಡೆಯುತ್ತಿರಲಿಲ್ಲ.
ಅರ್ಧ ಶತವಾನದ ಹಿಂದೆ ದೇವರ ಚಾಕರಿ ಮಾಡುವವರಿಗೆ ದೇವಸ್ಥಾನ ಸ್ಥಳವನ್ನು ಉಂಬಳಿಯಾಗಿ ನೀಡಲಾಗಿತ್ತು. ದೇವರ ಚಾಕರಿ ಮಾಡುವವರು ಆ ನೆಲದಲ್ಲಿ ವಾಸ ಮಾಡಿ ಬೇಸಾಯ ಮಾಡಿ ತಮ್ಮ ಜೀವನ ವನ್ನು ಸಾಗಿಸುತ್ತಿದ್ದರಲ್ಲದೆ ದೇವಸ್ಥಾನಕ್ಕೂ ಗೇಣಿಕೊಡವ ಪದ್ದತಿ ಇತ್ತು. ಯಾವಾಗ ಉಳುವವನೇ ಒಡೆಯ ಎಂಬ ಕಾನೂನು ಬಂತೋ ಆಗ ಉಂಬಳಿ ಪಡೆದಿದ್ದ ದೇವಸ್ಥಾನ ಸ್ಥಳಗಳನ್ನು ಸರಕಾರಕ್ಕೆ ಬರೆದು ದೇವರ ಚಾಕರಿ ಮಾಡುವವರು ತಮ್ಮದಾಗಿಸಿ ಕೊಂಡರು. ಕದ್ರಿಯಲ್ಲಿ ಈಗ ಕಟ್ಟಡ ನಿರ್ಮಾಣ ವಾಗುವ ಸ್ಥಳಗಳೆಲ್ಲವೂ ದೇವಸ್ಥಾನದ ಉಂಬಳಿ ಪಡೆದಿದ್ದ ಸ್ಥಳಗಳು. ಉಂಬಳಿ ಪಡೆದವರೇ ದುಡ್ಡಿನ ಆಸೆಗೆ ದೇವರ ಸ್ಥಳವನ್ನು ಮಾರಿ ದುಡ್ಡು ಸಂಪಾದನೆ ಮಾಡಿದ ರು. ಕದ್ರಿಯ ಕಂಬಳಕ್ಕೂ, ದೇವರ ಲಕ್ಷದೀಪೋತ್ಸವಕ್ಕೂ ಇತಿಹಾಸಿಕ ಸಂಬಂಧವಿದೆ. ಕದ್ರಿ ಕಂಬಳ ನಡೆಯದೆ ಅಂದು ದೇವರ ಲಕ್ಷದೀಪೋತ್ಸವ ನಡೆಯುತ್ತಿರಲಿಲ್ಲ. ನಾಥಮುನಿಗಳು ಕಂಬಳದಗದ್ದೆಗೆ ಬಂದು ದೇವರ ಪ್ರಸಾದ ಕೊಟ್ಟು ಕಂಬಳ ನಡೆಯುತ್ತಿತ್ತು ಅದಾದ ಕೆಲವೇ ದಿನಗಳಲ್ಲಿ ದೇವರ ಲಕ್ಷದೀಪೋತ್ಸವ ನಡೆಯುತ್ತಿತ್ತು.

ಕಂಬಳ ನಡೆಯುವ ಸ್ಥಳವೂ ದೇವರ ಚಾಕರಿ ಮಾಡಿದವರಿಗೆ ಉಂಬಳಿ ನೀಡಿದ ಸ್ಥಳ. ಅದನ್ನೂ ಈಗ ಅತೀ ಹೆಚ್ಚು ದುಡ್ಡಿಗೆ ಮಾರಾಟ ಮಾಡಿ ಕದ್ರಿ ಕಂಬಳ ಮರೆಯಾಗಿದೆ. ದುಡ್ಡಿನ ಮುಂದೆ ಸಂಪ್ರದಾಯವೂ ಇಲ್ಲ ದೇವರ ಹೆದರಿಕೆಯೂ ಇಲ್ಲ ಕದ್ರಿಯ ಮಂಜುನಾಥ ಕೂಡ ಪ್ರತಿಭಟಿಸಲಾಗದೆ ಸುಮ್ಮನಿದ್ದಾನೆ.

ಕದ್ರಿಯ ಒಳ ರಸ್ತೆಯಲ್ಲಿ ಚರಂಡಿಗಳು ನಾರುತ್ತಿದೆ.
ಕದ್ರಿಯ ಕಾರ್ಪೋರೇಟರ್ ಗಳಾದ ಡಿ.ಕೆ ಆಶೋಕ, ರೂಪಾ ಬಂಗೇರರ ವಾರ್ಡುಗಳಲ್ಲಿ ಹೊಸ ರಸ್ತೆಯಲ್ಲಿ ಹರಿಯುವ ತೋಡಿಗೆ ಅಕ್ಕ ಪಕ್ಕದ ಮನೆಯವರು, ದೊಡ್ಡ ದೊಡ್ಡ ಕಟ್ಟಡಗಳ ಡ್ರೈನೇಜುಗಳನ್ನು ಹರಿದು ಬಿಟ್ಟು ದುರ್ನಾತದಿಂದ ಮಲೇರಿಯಾದಂತಹ ರೋಗಗಳ ಕುರುಹುಗಳು ಈ ಹಿಂದೆ ಕಂಡು ಬಂದಿತ್ತು. ಕದ್ರಿಯ ಪ್ರದೇಶದಲ್ಲಿ ಅತ್ಯಧಿಕ ಪ್ರವಾಸಿಗರು ಬರುವ ಪ್ರದೇಶವಾದರೂ ಇಲ್ಲಿ ಯಾವುದೇ ಕ್ರಮಗಳನ್ನು ಜರುಗಿಸಿಲ್ಲ. ಸೂಕ್ತ ಡೈನೇಜ್ ವ್ಯವಸ್ಥೆ ಇಲ್ಲದೆ ಜನ ತೋಡಿಗೆ ಡೈನೇಜ್ ಬಿಡುತ್ತಿದ್ದಾರೆ.

ಕೃಪೆ : ಮೆಗಾ ಮೀಡಿಯಾ ನ್ಯೂಸ್ ಪತ್ರಿಕೆ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English