ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಗೆ 4.5 ಕೋಟಿ ರೂ. ವೆಚ್ಚದ ಚಿನ್ನದ ರಥವನ್ನು ಮುಜರಾಯಿ ಸಚಿವ ಟಿ.ಬಿ. ಜಯಚಂದ್ರ ಅವರು ದೇವಳದ ಆಡಳಿತಾಧಿಕಾರಿ ನಿಂಗಯ್ಯ ಹಾಗೂ ಆನುವಂಶಿಕ ಮೊಕ್ತೇಸರರಿಗೆ ರವಿವಾರ ಹಸ್ತಾಂತರಿಸಿದರು.
ಬಳಿಕ ಮಾತನಾಡಿ, ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ; ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನರ ಮನಸ್ಸು ಶ್ರೀಮಂತವಾಗಿರುವುದರಿಂದ ಇಲ್ಲಿನ ದೇವಾಲಯಗಳೂ ಶ್ರೀಮಂತವಾಗಿವೆ ಎಂದರು.
ಭಕ್ತರ ದೇಣಿಗೆಯಿಂದ ಕಟೀಲು ದೇವಿಗೆ ಚಿನ್ನದ ರಥ ಸಮರ್ಪಣೆಯಾಗಿದೆ. ನಮ್ಮ ಮನಸ್ಸು ಕೂಡ ಸ್ವರ್ಣದಂತೆ ಶ್ರೀಮಂತವಾಗಲಿ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ಯುವಜನ ಸೇವೆ, ಕ್ರೀಡೆ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ನಳಿನ್ ಕುಮಾರ್ ಕಟೀಲು, ಅರಣ್ಯ ಸಚಿವ ಬಿ. ರಮಾನಾಥ ರೈ, ಶಾಸಕರಾದ ಮೊದಿನ್ ಬಾವಾ, ಕ್ಯಾ| ಗಣೇಶ್ ಕಾರ್ಣಿಕ್, ಶಾಸಕ ದಯಾನಂದ ರೆಡ್ಡಿ, ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಪಿ. ಜಯರಾಮ ಭಟ್, ಮುಂಬಯಿ ಸಂಜೀವನೀ ಟ್ರಸ್ಟ್ ಅಧ್ಯಕ್ಷ ಡಾ| ಕಟೀಲು ಸುರೇಶ್ ರಾವ್, ಮಂಗಳೂರು ಬಂಟರ ಮಾತೃ ಸಂಘದ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ, ಮುಂಬಯಿ ಜಾಗತಿಕ ಬಂಟರ ಸಂಘದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಮುಂಬಯಿ ಹೊಟೇಲ್ ಉದ್ಯಮಿ ಅಶೋಕ್ ಶೆಟ್ಟಿ, ಹೊಟೇಲ್ ಉದ್ಯಮಿ ಸುಧೀರ್ ಪ್ರಸಾದ್ ಶೆಟ್ಟಿ, ಬ್ರಾಮರೀ ವನದ ದಾನಿ ಸತೀಶ್ ವಿ. ಶೆಟ್ಟಿ ಉಪಸ್ಥಿತರಿದ್ದರು.
ದೇವಳದ ಆನುವಂಶಿಕ ಮೊಕ್ತೇಸರ ಕೆ. ವಾಸುದೇವ ಆಸ್ರಣ್ಣ, ಅರ್ಚಕರಾದ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ಕೆ. ಅನಂತಪದ್ಮನಾಭ ಆಸ್ರಣ್ಣ ಶುಭಾಶಂಸನೆಗೈದರು.
ಚಿನ್ನದ ರಥ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡ ಉಡುಪಿ ಸ್ವರ್ಣ ಸಂಸ್ಥೆಯ ರಾಮದಾಸ ನಾಯಕ್ ಹಾಗೂ ರಥಶಿಲ್ಪಿ ಸುದರ್ಶನ ಆಚಾರ್ಯ ಅವರನ್ನು ಗೌರವಿಸಲಾಯಿತು. ದೇವಳದ ಆಡಳಿತಾಧಿಕಾರಿ ನಿಂಗಯ್ಯ ಸ್ವಾಗತಿಸಿದರು. ವಿದ್ವಾನ್ ಪಂಜ ಭಾಸ್ಕರ ಭಟ್ ಪ್ರಸ್ತಾವನೆಗೈದರು. ಹರಿನಾರಾಯಣದಾಸ ಆಸ್ರಣ್ಣ ಶಿಕ್ಷಕ ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English