ಮಂಗಳೂರು: ಸಮಾಜೋತ್ಸವ ಸಂದರ್ಭ ಪೆಟ್ರೋಲ್ ಬಾಂಬ್ ಎಸೆದು ಗಲಭೆ ನಡೆಸಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ಒಟ್ಟು ಏಳು ಮಂದಿ ಪಿಎಫ್‌ಐ ಕಾರ್ಯಕರ್ತರನ್ನು ನಗರದ ಸಿಸಿಬಿ ಪೊಲೀಸರು ಹಾಗೂ ಉಳ್ಳಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸಿಸಿಬಿ ಪೊಲೀಸರು ಅಬ್ದುಲ್ ಸತ್ತಾರ್ ಯಾನೆ ಸತ್ತಾರ್, ನಿಯಾಜ್, ಮೊಹಮ್ಮದ್ ನಾಸಿರ್ ಯಾನೆ ನಾಸಿರ್, ಮೊಹಮ್ಮದ್ ಬಶೀರ್ ಯಾನೆ ಬಶೀರ್ ಎಂಬವರನ್ನು ಬಂಧಿಸಿದ್ದರು. ಈ ಆರೋಪಿಗಳು ನೀಡಿದ ಮಾಹಿತಿಯಂತೆ ಉಳ್ಳಾಲ ಪೊಲೀಸರು ಶಬ್ಬೀರ್ ಅಹಮ್ಮದ್, ಅಹಮ್ಮದ್ ಶಫೀಕ್ ಹಾಗೂ ಅಸ್ಲಂ ಎಂಬವರನ್ನು ಬಂಧಿಸಿದ್ದಾರೆ.
ಕೆ.ಸಿ.ರೋಡ್‌ನಲ್ಲಿ ಇತ್ತೀಚೆಗೆ ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಭಾನುವಾರ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಈ ಸಂದರ್ಭ ಅವರನ್ನು ತೀವ್ರ ತಪಾಸಣೆ ನಡೆಸಿದಾಗ ಸಮಾಜೋತ್ಸವದಿಂದ ಹಿಂತಿರುಗಿ ಹೋಗುವ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿ ಗಲಭೆ ಸೃಷ್ಟಿಸಲು ಹೊಂಚು ಹಾಕಿರುವುದಾಗಿ ಬಾಯ್ಬಿಟ್ಟಿದ್ದಾರೆ.
ಈ ನಾಲ್ವರು ಆರೋಪಿಗಳು ನೀಡಿದ ಮಾಹಿತಿಯಂತೆ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇವರೆಲ್ಲರ ಬಳಿ ಪೆಟ್ರೋಲ್ ಬಾಂಬ್ ತಯಾರಿಸುವ ಪರಿಕರಗಳಿದ್ದು, ಸೊತ್ತುಗಳನ್ನು ಉಳ್ಳಾಲ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Click this button or press Ctrl+G to toggle between Kannada and English