ಮಂಗಳೂರು: ಮಂಗಳೂರು ಧರ್ಮ ಪ್ರಾಂತದ ಯುವ ಆಯೋಗ, ಯುವ ಜಾಗೃತ್ ವೇದಿಕೆ ಹಾಗೂ ಐಸಿವೈಎಂ ಮತ್ತು ವೈಸಿಎಸ್ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಮಾ. 4ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಮೇಣದ ಬತ್ತಿ ಉರಿಸಿ ಶಾಂತಿಯುತ ಪ್ರತಿಭಟನೆ ನಡೆಯಿತು.
ಈ ಸಂಧರ್ಭ ಮಾತನಾಡಿದ ಕ್ರೈಸ್ತ ಮುಖಂಡ ವಿನ್ಸೆಂಟ್ ಆಳ್ವ ಪಾಂಬೂರು ಮದರ್ ತೆರೆಸಾ ಅವರು ಪ್ರೀತಿ ಮತ್ತು ಸೇವೆಯ ಕ್ರಾಂತಿ ಮಾಡಿದ್ದಾರೆ. ಅವರ ಮೇಲೆ ಮತಾಂತರದ ಆರೋಪ ಹೊರಿಸುವುದು ಸರಿಯಲ್ಲ ಎಂದು ಹೇಳಿದರು.
ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ ಅವರು ಮದರ್ ತೆರೆಸಾ ಮೇಲೆ ಮತಾಂತರದ ಆರೋಪ ಹೊರಿಸಿರುವುದು, ಇತ್ತೀಚೆಗೆ ದೇರಳಕಟ್ಟೆಯ ಪಾನಿರ್ ಚರ್ಚ್‌ಗೆ ಸಂಬಂಧಪಟ್ಟ ಸಂತ ಜೋಸೆಫ್ ವಾಜ್ ಪ್ರಾರ್ಥನಾ ಮಂದಿರಕ್ಕೆ ಕಿಡಿಗೇಡಿಗಳು ಕಲ್ಲು ತೂರಿ ಹಾನಿ ಎಸಗಿರುವುದು ಮತ್ತು ಸಾಮಾಜಿಕ ಜಾಲ ತಾಣದಲ್ಲಿ ವ್ಯಕ್ತಿಯೊಬ್ಬರು ಯೇಸು ಕ್ರಿಸ್ತರನ್ನು ಅವಮಾನಿಸಿರುವುದನ್ನು ಪ್ರತಿಭಟಿಸಲು ಈ ಸಭೆ ವ್ಯವಸ್ಥೆ ಮಾಡಲಾಗಿತ್ತು.
ಯಾರೂ ಕೂಡ ಯಾವುದೇ ಧರ್ಮವನ್ನು ಅವಹೇಳನ ಮಾಡಬಾರದು ಮತ್ತು ದ್ವೇಷ ಸಾಧನೆಗೆ ಅವಕಾಶ ಮಾಡಿ ಕೊಡಬಾರದು ಎಂದ ಅವರು, ದೇವರು ಮತ್ತು ಧರ್ಮವನ್ನು ಅವಹೇಳನ ಮಾಡುವವರಿಗೆ ದೇವರು ಸದ್ಬುದ್ಧಿ ನೀಡಲಿ ಎಂಬುದಾಗಿ ಪ್ರಾರ್ಥಿಸೋಣ ಎಂದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ ಮತ್ತು ಸಿಪಿಎಂ ಮುಖಂಡ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಅಲ್ಪಸಂಖ್ಯಾಕರ ಮೇಲೆ ವ್ಯವಸ್ಥಿತವಾಗಿ ದಾಳಿ ಮತ್ತು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಮಂಗಳೂರು ಧರ್ಮ ಪ್ರಾಂತದ ಪ್ರಧಾನ ಗುರು ಮೊ| ಡೆನಿಸ್ ಮೊರಾಸ್ ಪ್ರಭು, ಐಸಿವೈಎಂ ನಿರ್ದೇಶಕ ಫಾ| ರೊನಾಲ್ಡ್ ಡಿ’ಸೋಜಾ, ವೈಸಿಎಸ್ ನಿರ್ದೇಶಕ ಫಾ| ಎಡ್ವಿನ್ ಕೊರೆಯಾ, ಫಾ| ಫ್ರಾನ್ಸಿಸ್ ಅಲ್ಮೇಡಾ, ಅಧ್ಯಕ್ಷೆ ಮೆಲಿಡಾ ರೊಡ್ರಿಗಸ್, ಸಂಘಟಕ ಶೆಲ್ಡನ್ ಕ್ರಾಸ್ತಾ, ನೆಲ್ಸನ್ ಮೋನಿಸ್, ಕೃಷ್ಣಪ್ಪ ಕೊಂಚಾಡಿ, ಸ್ಟಾನಿ ಅಲ್ವಾರಿಸ್, ಜಾನ್ ಮೊಂತೇರೊ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English