- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನಗರೋತ್ಥಾನ ಕಾಮಗಾರಿ: ತ್ವರಿತಗೊಳಿಸಲು ಸಚಿವರ ಸೂಚನೆ

dc meeting [1]

ಮಂಗಳೂರು : ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಕಾರ್ಯಕ್ರಮ ನಗರೋತ್ಥಾನ ಯೋಜನೆ-2ರಡಿ ಜಿಲ್ಲೆಯ ಎಲ್ಲಾ ಪಟ್ಟಣ ಪ್ರದೇಶಗಳಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅರಣ್ಯ ಮತತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸೂಚಿಸಿದ್ದಾರೆ.

ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಗರೋತ್ಥಾನ ಯೋಜನೆಯ ಪ್ರಗತಿ ಪರಿಶೀಲಿಸಿ ಮಾತನಾಡುತ್ತಿದ್ದರು. ಯೋಜನೆಯಡಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ಜಿಲ್ಲೆಯಲ್ಲಿ ಕಾಮಗಾರಿಯ ನಿಗದಿತ ಕಾಲಾವಧಿ ಮುಗಿದಿದ್ದರೂ, ಹಲವು ಕಾಮಗಾರಿಗಳು ಇನ್ನೂ ಪ್ರಾರಂಭಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತೀ ಮೂರು ತಿಂಗಳಿಗೊಮ್ಮೆ ಈ ಬಗ್ಗೆ ಸಭೆ ನಡೆಸುವಂತೆ ಸೂಚಿಸಿದ ಸಚಿವರು, ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಯೋಜನೆಯ ಸಮಾಲೋಚಕರಿಗೆ ತಿಳಿಸಿದರು. ಅಲ್ಲದೆ, ಮುಂದಿನ 1 ವಾರದೊಳಗೆ ಎಲ್ಲ ನಗರ ಸ್ಥಳೀಯ ಸಂಸ್ತೆಗಳಿಗೆ ಭೇಟಿ ನೀಡಿ, ಕಾಮಗಾರಿಗಳ ಪ್ರಗತಿ ಪರಿಶೀಲಿಸಲು ತಿಳಿಸಿದರು.

ನಗರೋತ್ಥಾನ ಯೋಜನೆಯಲ್ಲಿ ಈಗಾಗಲೇ ಅನುಮೋದಿತವಾಗಿರುವ ಕಾಮಗಾರಿಗಳಿಗೆ ಪರ್ಯಾಯವಾಗಿ ಬದಲಿ ಕಾಮಗಾರಿಗಳು ಅಗತ್ಯವಿದ್ದಲ್ಲಿ ನಿರ್ಣಯ ಮಾಡಿ, ಕಳುಹಿಸುವಂತೆ ಸಚಿವ ರಮಾನಾಥ ರೈ ಸೂಚಿಸಿದರು. ಬಂಟ್ವಾಳ ಪೇಟೆಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಸಂಬಂಧ ಮುಂದಿನ 2ದಿನದೊಳಗೆ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ಮಾತನಾಡಿ, ಯೋಜನೆಯಲ್ಲಿ ಪುತ್ತೂರು ಪುರಸಭೆ ವ್ಯಾಪ್ತಿಯಲ್ಲಿ ಇನ್ನೂ ಹಲವು ಕಾಮಗಾರಿಗಳು ಪ್ರಾರಂಭಗೊಂಡಿಲ್ಲ. ಈ ಹಿನ್ನೆಲೆಯಲ್ಲಿ, ಸ್ಥಳೀಯ ಶಾಸಕರು, ಪುರಸಭೆ ಅಧ್ಯಕ್ಷರೊಂದಿಗೆ ಪ್ರತ್ಯೇಕ ಸಭೆ ನಡೆಸುವುದಾಗಿ ಹೇಳಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ತಾಕತ್ ರಾವ್ ಸಭೆಯಲ್ಲಿ ಯೋಜನೆಯ ಮಾಹಿತಿ ನೀಡಿ, ನಗರೋತ್ಥಾನ ಯೋಜನೆಯಡಿ 26.11 ಕೋಟಿ ರೂ. ಅನುದಾನ ಜಿಲ್ಲೆಗೆ ಬಿಡುಗಡೆಯಾಗಿದೆ. ಇದರಲ್ಲಿ 24 ಕೋಟಿ ರೂ. ಖರ್ಚಾಗಿದೆ. ಬಂಟ್ವಾಳ ಪುರಸಭೆ( 5ಕೋಟಿ), ಮೂಡಬಿದ್ರೆ( 5 ಕೋಟಿ), ಪುತ್ತೂರು(5 ಕೋಟಿ), ಉಳ್ಳಾಲ(5 ಕೋಟಿ), ಬೆಳ್ತಂಗಡಿ( 5ಕೋಟಿ), ಮೂಲ್ಕಿ(5 ಕೋಟಿ) ಹಾಗೂ ಸುಳ್ಯ ಪಟ್ಟಣ ಪಂಚಾಯತ್‌ನಲ್ಲಿ ೫ ಕೋಟಿ ರೂ. ಕಾಮಗಾರಿ ಮಂಜೂರಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಶಾಸಕರಾದ ಶಕುಂತಳಾ ಶೆಟ್ಟಿ, ಎಸ್. ಅಂಗಾರ, ಐವನ್ ಡಿಸೋಜಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ, ಮಂಗಳೂರು ನಗರಪಾಲಿಕೆ ಆಯುಕ್ತೆ ಹೆಪ್ಸಿಬಾ ರಾಣಿ ಮತ್ತಿತರರು ಉಪಸ್ಥಿತರಿದ್ದರು.