ಪ್ರಾಮಾಣಿಕ ಅಧಿಕಾರಿ ಡಿ.ಕೆ.ರವಿವರ ಸಾವಿನ ಪ್ರಕರಣವನ್ನು ಉನ್ನತ ತನಿಖೆಗೆ ವಹಿಸಿ

9:38 PM, Tuesday, March 17th, 2015
Share
1 Star2 Stars3 Stars4 Stars5 Stars
(4 rating, 4 votes)
Loading...

ABvp ಮಂಗಳೂರು : ರಾಜ್ಯದ ದಕ್ಷ ಐ.ಎ.ಎಸ್ ಅಧಿಕಾರಿ ಡಿ.ಕೆ.ರವಿಯವರ ಸಾವಿನ ಕುರಿತಂತೆ ಉನ್ನತ ತನಿಖೆಯನ್ನು ನಡೆಸಬೇಕು ಮತ್ತು ರಾಜ್ಯದ ಪ್ರಾಮಾನಿಕ ಅಧಿಕಾರಿಗಳಿಗೆ ರಕ್ಷಣೆ ನೀಡಬೇಕೆಂದು ಎಬಿವಿಪಿ ಆಗ್ರಹಿಸಿ ಮಂಗಳವಾರ ಎಬಿವಿಪಿ ನಗರದಲ್ಲಿ ಪ್ರತಿಭಟನೆಯನ್ನು ನಡೆಸಿತು.

ಶಾರದ ಕಾಲೇಜಿನಿಂದ ಹೊರಟ ನೂರಾರು ಎಬಿವಿಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯ ಮೂಲಕ ಬಂದು ಬೆಸೆಂಟ್ ಕಾಲೇಜು ವೃತ್ತದ ಬಳಿ ಸೇರಿದರು. ಅಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಎಬಿವಿಪಿ ನಗರ ಕಾರ್ಯದರ್ಶಿ ಜಯೇಶ್ ಮಾತನಾಡಿ, ಐಎಎಸ್ ಅಧಿಕಾರಿ ಡಿ. ಕೆ. ರವಿಯವರು ರಾಜ್ಯದ ವಿವಿಧೆಡೆಯಲ್ಲಿ ಅನೇಕ ಹುದ್ದೆಗಳನ್ನು ನಿರ್ವಹಿಸಿ ಕಳೆದ ಒಂದೂವರೆ ವರ್ಷದಿಂದ ರಾಜ್ಯದ ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುವಲ್ಲಿ ಶ್ರಮಿಸಿದ್ದರು, ಹಲವಾರು ಅಕ್ರಮಗಳಿಗೆ ಕಡಿವಾಣವನ್ನು ಹಾಕಿದ್ದ ದಕ್ಷ ಅಧಿಕಾರಿಯ ಸಾವಿನಿಂದ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲದ್ದಾಗಿದೆ ಎಂದರು.

ನಂತರ ಮಾತನಾಡಿದ ಅವರು ಈ ಸಾವಿನ ಹಿಂದೆ ರಾಜಕೀಯ ಮತ್ತು ಭೂ ಮಾಪಿಯಾ ವಲಯಗಳಿಂದ ನಡೆದಿರುವುದು ಮೇಲ್ನೋಟಕ್ಕೆ ಶಂಕೆ ವ್ಯಕ್ತವಾಗುತ್ತಿದೆ ಎಂದರು. ವಿದ್ಯಾರ್ಥಿ ಮುಖಂಡ ಸಂದೀಪ್ ಮಾತನಾಡಿ ರಾಜ್ಯ ಸರ್ಕಾರ ತಕ್ಷಣ ಈ ಪ್ರಾಮಾಣಿಕ ಅಧಿಕಾರಿಯ ಸಾವಿನ ಕುರಿತು ಸತ್ಯಾಸತ್ಯತೆಯನ್ನು ಕಂಡು ಹಿಡಿಯಬೇಕು, ಉನ್ನತಾಧಿಕಾರಿಗಳಿಂದ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಷ್ಠಾವಂತ ದಕ್ಷ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ನೈತಿಕ ಸ್ಥೈರ್ಯವನ್ನು ತುಂಬಬೇಕೆಂದು ಆಗ್ರಹಿಸಿದರು.

ಸ್ವರಾಜ್, ಸಂಕೇತ್, ಪ್ರವೀಣ್, ಅರವಿಂದಾಕ್ಷ, ಕು. ದೀಕ್ಷಾ ಈ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English