ಧರ್ಮಸ್ಥಳ : ಇಲ್ಲಿಗೆ ಬರುವ ಭಕ್ತರ ಅಭೀಷ್ಟಗಳು ನೆರವೇರುತ್ತವೆ. ಧರ್ಮಸ್ಥಳದಲ್ಲಿ ನಿತ್ಯವೂ ನಡೆಯುವ ಚತುರ್ವಿಧ ದಾನಗಳು ಹಾಗೂ ಸೇವಾ ಕಾರ್ಯಗಳು ಇಂದು ರಾಷ್ಟ್ರವ್ಯಾಪಿ ಪಸರಿಸಿದ್ದು ಸರ್ವರಿಗೂ ಕಲ್ಯಾಣಕಾರಿಯಾಗಿವೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಧರ್ಮಸ್ಥಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಬುಧವಾರ ಅಮೃತವರ್ಷಿಣಿ ಸಭಾ ಭವನದಲ್ಲಿ ಏರ್ಪಡಿಸಲಾದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ನಾಡಿಗೆ ಸೀಮಿತವಾಗಿದ್ದ ಧರ್ಮಸ್ಥಳದ ಸೇವಾಕಾರ್ಯ ವೀರೇಂದ್ರ ಹೆಗ್ಗಡೆಯವರ ದಕ್ಷ ನೇತೃತ್ವದಲ್ಲಿ ಇಂದು ರಾಷ್ಟ್ರವ್ಯಾಪಿಯಾಗಿ ವಿಸ್ತರಿಸಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಇಡೀ ರಾಷ್ಟ್ರವೇ ಧರ್ಮಸ್ಥಳವಾಗಬೇಕು ಎಂದು ಸ್ವಾಮೀಜ ಆಶಯ ವ್ಯಕ್ತಪಡಿಸಿ ಇಲ್ಲಿನ ಸೇವಾಕಾರ್ಯ ನಿರಂತರವಾಗಿ ನಡೆದು ಲೋಕಕಲ್ಯಾಣವಾಗಲಿ ಎಂದು ಹಾರೈಸಿದರು.
ಸೋಂದಾ ಸ್ವಾದಿ ಜೈನ ಮಠದ ಭಟ್ಟಾಕಳಂಕ ಸ್ವಾಮೀಜಿ ಮಾತನಾಡಿ ನಾವು ಮಾಡಿರುವ ಕರ್ಮಗಳಿಗೆ ಅನುಗುಣವಾಗಿ ಶುಭಾಶುಭ ಫಲವನ್ನು ಅನುಭವಿಸುತ್ತೇವೆ. ನಮ್ಮ ಸೀಮಿತ ಆಯುಷ್ಯದಲ್ಲಿ ನಿತ್ಯವೂ ಭಕ್ತಿ-ಭಾವದಿಂದ ಧರ್ಮ ಮಾರ್ಗದಲ್ಲಿ ನಡೆದು ಆತ್ಮಕಲ್ಯಾಣ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ಮನುಷ್ಯ ಆಧ್ಯಾತ್ಮಿಕವಾಗಿಯೂ ಸಾಮಾಜಿಕವಾಗಿಯೂ ವಿಸ್ತಾರವಾದ ಪರಿಕಲ್ಪನೆಯಲ್ಲಿ ಸಾರ್ಥಕ ಜೀವನ ನಡೆಸಬೇಕು. ನಾವು ಮಾಡುವ ಸೇವೆ ಭಗವಂತನಿಗೆ ಕೊಡುವ ತೆರಿಗೆಯಾಗಿದೆ ಎಂದರು.
ಒಡಿಯೂರಿನ ಗುರುದೇವಾನಂದ ಸ್ವಾಮೀಜಿ, ಕನ್ಯಾಡಿ ರಾಮಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ, ಕಟೀಲಿನ ಲಕ್ಷ್ಮೀನಾರಯಣ ಆಸ್ರಣ್ಣ ಮತ್ತು ವಿಶ್ವಹಿಂದೂ ಪರಿಷತ್‌ನ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್ ಶುಭಾಶಂಸನೆ ಮಾಡಿದರು.
ತಂತ್ರಿಗಳಿಗೆ ಸನ್ಮಾನ : ಬ್ರಹ್ಮಕಲಶೋತ್ಸವದ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದ ನೀಲೇಶ್ವರದ ಆಲಂಬಾಡಿ ವಾಸುದೇವ ತಂತ್ರಿ, ಮಾಧವ ತಂತ್ರಿ ಮತ್ತು ಪದ್ಮನಾಭ ತಂತ್ರಿಯವರನ್ನು ಹೆಗ್ಗಡೆಯವರು ಸನ್ಮಾನಿಸಿದರು.
ಮಂಗಳೂರಿನ ಅರಕೆರೆ ಬೈಲು ಅಂಬಾನಗರ ಅಂಬಾಮಹೇಶ್ವರಿ ಭಜನಾ ಮಂಡಳಿ ವತಿಯಿಂದ ಮಹಾವಿಷ್ಣು ಗಜಲಕ್ಷ್ಮೀ ಶತಪತ್ರದಳ ನಂದಾದೀಪವನ್ನು ಧರ್ಮಸ್ಥಳಕ್ಕೆ ಕಾಣಿಕೆಯಾಗಿ ಭಕ್ತರು ಅರ್ಪಿಸಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಧರ್ಮವು ಪಂಡಿತರಿಗೆ ಮತ್ತು ಗ್ರಂಥಕ್ಕೆ ಸೀಮಿತವಾಗಿರಬಾರದು. ಧರ್ಮವು ನಮ್ಮ ಬದುಕಿಗೆ ನೇರ ಸಂಪರ್ಕ ಹೊಂದಿದ್ದು ನಡೆ-ನುಡಿಯಲ್ಲಿ ವ್ಯಕ್ತವಾಗಬೇಕು.
ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ ಸಾನ್ನಿಧ್ಯ ಪ್ರತ್ಯಕ್ಷವಾಗಿದ್ದು ಭಕ್ತರು ಸ್ವಾಮಿಯನ್ನು ಸ್ಪರ್ಶಿಸಿ ಅವರ ಅನುಗ್ರಹಕ್ಕೆ ಪಾತ್ರರಾಗಬಹುದು. ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಈಗ ಮೂಡನಂಬಿಕೆಗಳು ಹೆಚ್ಚಾಗಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ ಹೆಗ್ಗಡೆಯವರು ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗಬೇಕು ಎಂದರು. ಧಾರ್ಮಿಕತೆ ಹೆಸರಿನಲ್ಲಿ ಶೋಷಣೆ ಸಲ್ಲದು ಎಂದು ಅವರು ಸಲಹೆ ನೀಡಿದರು. ಮಂಜುನಾಥ ಸ್ವಾಮಿಯ ಸೇವೆಯ ಜೊತೆಗೆ ತನ್ನ ಕರ್ತವ್ಯ ರೂಪದಲ್ಲಿ ಸಮಾಜಕ್ಕೆ ಸಕಾಲಿಕ ಮಾರ್ಗದರ್ಶನ ನೀಡುತ್ತಿರುವುದಾಗಿ ಅವರು ಹೇಳಿದರು.
ಮೂರು ಕೆ.ಜಿ,. ತೂಕದ ಸ್ವರ್ಣ ಪ್ರಭಾವಳಿಯನ್ನು ಹೆಗ್ಗಡೆಯವರು ದೇವರಿಗೆ ಅರ್ಪಿಸಿದರು.
ಡಿ. ಸುರೇಂದ್ರ ಕುಮಾರ್ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English