ಮಂಗಳೂರು : ದೆಹಲಿ ಕರ್ನಾಟಕ ಸಂಘವು ಮೈಸೂರು ರಂಗಾಯಣದ ಮಂಜುನಾಥ ಬೆಳೆಕೆರೆಯವರ ನಿರ್ದೇಶನದಲ್ಲಿ ಸ್ಥಳೀಯ ಕಲಾವಿದರಿಂದ ನಾಟಕವೊಂದನ್ನು ಏಪ್ರಿಲ್ ೧೯ರಂದು ಪ್ರದರ್ಶನ ಮಾಡಲಿದೆ. ದೆಹಲಿ ಕರ್ನಾಟಕ ಸಂಘದ ಸಾಂಸ್ಕೃತಿಕ ಸಮುಚ್ಚಯದ ದಶಮಾನೋತ್ಸವದ ಈ ವಿಶೇಷ ಕಾರ್ಯಕ್ರಮದಲ್ಲಿ ಕನ್ನಡ ಭಾರತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಶ್ರೀ ವಸಂತ ಶೆಟ್ಟಿ ಬೆಳ್ಳಾರೆಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದೆಹಲಿ ಕರ್ನಾಟಕ ಸಂಘವು ಈ ವರ್ಷದಿಂದ ದೆಹಲಿಯ ಕನ್ನಡ ರಂಗಭೂಮಿಯಲ್ಲಿ ೬೦-೭೦ರ ದಶಕದಲ್ಲಿ ಕ್ರಿಯಾಶೀಲವಾಗಿದ್ದ ಕನ್ನಡ ಭಾರತಿಯ ಹೆಸರಿನಲ್ಲಿ ಕನ್ನಡ ರಂಗಭೂಮಿಯಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ನೀಡಲಿರುವ ಮೊದಲ ಪ್ರಶಸ್ತಿಯನ್ನು ಕನ್ನಡ ಭಾರತಿಯ ಯಶಸ್ಸಿಗೆ ವಿಶೇಷ ಸೇವೆ ಸಲ್ಲಿಸಿರುವ ಶ್ರೀ ಎಂ.ವಿ. ನಾರಾಯಣ ರಾವ್ ಅವರಿಗೆ ನೀಡಲಿದೆ. ಈ ಪ್ರಶಸ್ತಿ ರೂಪಾಯಿ ೫೦,೦೦೦ ನಗದು ಮತ್ತು ಫಲಕವನ್ನೊಳಗೊಂಡು ಪ್ರಶಸ್ತಿ ಮತ್ತು ವಿಜೇತರಿಗೆ ಪ್ರಯಾಣ ವೆಚ್ಚವನ್ನು ಕೂಡ ನೀಡಲಿದೆ.
ಕನ್ನಡ ಭಾರತಿ ಸಂಸ್ಥೆಯು ದೆಹಲಿಯ ಕನ್ನಡ ರಂಗಭೂಮಿಯ ಚಟುವಟಿಕೆಯಲ್ಲಿ ಕಳೆದ ಶತಮಾನದ ೬೦ರ ದಶಕದಲ್ಲಿ ಅತ್ಯಂತ ಕ್ರಿಯಾಶೀಲವಾಗಿತ್ತು. ದಿ. ಬಿ.ವಿ. ಕಾರಂತ, ಎಂ.ಎಸ್. ಸತ್ಯು, ದಿ.ಯು. ಪ್ರಭಾಕರ ರಾವ್ ಮುಂತಾದ ರಂಗಭೂಮಿಯ ದಿಗ್ಗಜರು ನಾಟಕಗಳನ್ನು ನಿರ್ದೇಶಿಸಿದರೆ, ದಿ. ಜ್ಯೋತ್ಸ್ನಾರಾವ್, ಎಚ್.ಎಸ್. ಕುಲಕರ್ಣಿ, ಭೀಮರಾವ್ ಮುರಗೋಡ ಮೊದಲಾದವರು ನಾಟಕಗಳಲ್ಲಿ ಅಭಿನಯಿಸಿದ್ದರು.
ಎಂ.ವಿ. ನಾರಾಯಣ ರಾವ್
ಕನ್ನಡ ಮಾತೃ ಭಾಷೆಯ ಎಂ.ವಿ. ನಾರಾಯಣ ರಾವ್ ಅವರು ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಕೂಡಾ ಪ್ರವೀಣತೆಯನ್ನು ಪಡೆದಿದ್ದರು. ೮೪ ವಯಸ್ಸಿನ ಎಂ.ವಿ. ನಾರಾಯಣ ರಾವ್ ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. (ಇಂಗ್ಲಿಷ್), ಎಂ.ಎ. (ಸಂಸ್ಕೃತ), ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಭಾಷಾಧ್ಯಯನದಲ್ಲಿ ಡಿಪ್ಲೋಮಾ ವಿದ್ಯಾಭ್ಯಾಸವನ್ನು ಪಡೆದಿದ್ದರು.
ಉಡುಪಿ ಎಂ.ಜಿ.ಎಂ. ಕಾಲೇಜಿನಲ್ಲಿ ಮತ್ತು ಲಯೋಲಾಕಾಲೇಜಿನಲ್ಲಿ ಐದು ವರ್ಷ ಕಾಲ ಇಂಗ್ಲಿಷ್ ಅಧ್ಯಾಪಕರಾಗಿದ್ದ ಅವರು ೧೯೫೭ರ ಜುಲೈನಲ್ಲಿ ದೆಹಲಿಯಲ್ಲಿ ಕೇಂದ್ರ ಸರಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದಲ್ಲಿ ಸಬ್ ಎಡಿಟರ್ ಹುದ್ದೆಗೆ ನೇಮಕಗೊಂಡರು. ಅನಂತರ, ಅಸಿಸ್ಟೆಂಟ್ ಎಡಿಟರ್, ಅಸಿಸ್ಟೆಂಟ್-ಡೈರೆಕ್ಟರ್ (ಎಡಿಟಿಂಗ್), ಪಬ್ಲಿಸಿಟಿ ಚೀಫ್ ಆಗಿ ಕೇಂದ್ರ ಸರಕಾರದ ವಿವಿಧ ಸಚಿವಾಲಯಗಳಲ್ಲಿ ದುಡಿದು, ೧೯೮೪ರ ಜನವರಿಯಲ್ಲಿ ಹಸ್ತಶಿಲ್ಪ ವಿಭಾಗದಲ್ಲಿ ಸೀನಿಯರ್ ಡೈರೆಕ್ಟರಾಗಿ ನೇಮಕಗೊಂಡರು. ೧೯೯೧ರ ಫೆಬ್ರವರಿಯಲ್ಲಿ ವಾಸ್ತುಶಿಲ್ಪ ಇಲಾಖೆಯಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ವೃತ್ತಿ ಜೀವನದಿಂದ ನಿವೃತ್ತರಾದರು.
೧೯೫೭ರಲ್ಲಿ ದೆಹಲಿಗೆ ಬಂದ ಶ್ರೀ ಎಂ.ವಿ. ನಾರಾಯಣ ರಾವ್ ಅವರು ೧೯೬೦ ರಿಂದ ೬೩ರವರೆಗೆ ದೆಹಲಿಯ ದಕ್ಷಿಣ ಭಾರತ ನಟಿ-ನಟ ಸಮಾಖ್ಯದ ಜಂಟಿ ಕಾರ್ಯದರ್ಶಿಯಾಗಿ ಅನೇಕ ಕನ್ನಡ ಕಾರ್ಯಕ್ರಮ ಹಾಗೂ ನಾಟಕಗಳನ್ನು ನಡೆಸಿದ್ದಾರೆ. ’ವೀರಯೋಧ’, ’ಆಷಾಢಭೂತಿ’, ’ವೈದ್ಯನ ವ್ಯಾಧಿ’ ನಾಟಕಗಳ ರಂಗಪ್ರಯೋಗ ಮಾಡಿ ಅದರಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು.
೧೯೬೩ರಲ್ಲಿ ಪ್ರಭಾಕರ ರಾವ್, ಶಾ. ಬಾಲು ರಾವ್, ಎಂ.ಎಸ್. ಸತ್ಯು, ಬಿ.ವಿ. ಕಾರಂತ, ಡಿ. ರಮೇಶ್, ವಿ. ರಾಮಮೂರ್ತಿ ಇವರೆಲ್ಲರ ನೆರವಿನಿಂದ ’ಕನ್ನಡ-ಭಾರತಿ’ ಸಂಸ್ಥೆಯ ಸ್ಥಾಪನೆಯಲ್ಲಿ ಸಹಭಾಗಿಯಾದರು. ಅಂದಿನಿಂದ ಇಂದಿನವರೆಗೂ ಸ್ಥಾಪಕ-ಕಾರ್ಯದರ್ಶಿಯಾಗಿ ಕನ್ನಡಕ್ಕಾಗಿ, ಕನ್ನಡ ರಂಗಭೂಮಿಗಾಗಿ ದುಡಿದಿದ್ದಾರೆ. ಕನ್ನಡ ಭಾರತಿಯ ರಜತ ಮಹೋತ್ಸವವನ್ನು ಒಂದು ವರ್ಷ ಪರ್ಯಂತ ೧೯೯೦ರಲ್ಲಿ ಯಶಸ್ವಿಯಾಗಿ ಆಚರಿಸಿದ್ದಾರೆ.
ಷೇಕ್ಸ್‌ಪಿಯರ್ ಮಹಾಕವಿಯ ನಾನೂರನೇ ಹುಟ್ಟುಹಬ್ಬದ ಆಚರಣೆ, ೧೯೬೪ರಲ್ಲಿ; ಡಿ.ವಿ.ಜಿ. ಅವರ ಕನ್ನಡ ’ಮ್ಯಾಕ್‌ಬೆತ್’ ನಾಟಕದ ಪ್ರಯೋಗ; ’ಷೇಕ್ಸ್‌ಪಿಯರಿಗೆ ನಮಸ್ಕಾರ’ ಗ್ರಂಥದ ಬಿಡುಗಡೆ, ಮತ್ತು ನಿರಂತರವಾಗಿ ಶ್ರೀರಂಗ, ಸಂಸ, ಕೈಲಾಸಂ, ಗಿರೀಶ್ ಕಾರ್ನಾಡ್, ಜಿ.ಬಿ. ಜೋಷಿ, ಆನಂದ ಮೊದಲಾದ ಹೆಸರಾಂತ ಕನ್ನಡ ನಾಟಕಕಾರ ನಾಟಕಗಳ ಪ್ರಯೋಗಗಳನ್ನು ಮಾಡಿದರು. ವಿಜಯ ತೆಂಡೂಲ್ಕರ್, ಲಲಿತ ಸೆಹಗಲ್, ಸಫ್ದರ್ ಹಶ್ಮಿ, ಮೋಹನ ರಾಕೇಶ್ ಮೊದಲಾದವರ ಹಿಂದಿ ನಾಟಕಗಳ ಕನ್ನಡ ರೂಪಾಂತರ ಮತ್ತು ಅವುಗಳ ರಂಗಪ್ರಯೋಗ; ಕನ್ನಡ ಕಾರ್ಯಕ್ರಮಗಳ ಜೊತೆಗೆ ದೆಹಲಿಯ ಇತರ ಭಾಷಾ ಪ್ರೇಮಿಗಳಿಗೂ ಉಪಯೋಗವಾಗುವಂತೆ ಕನ್ನಡ ನಾಟಕ ಹಾಗೂ ನಾಟಕಕಾರರ ಮೇಲೆ ಇಂಗ್ಲಿಷ್‌ನಲ್ಲಿ ಕಿರುಹೊತ್ತಿಗೆಗಳ ಪ್ರಕಟಣೆ ಕೂಡಾ ಮಾಡಿದ್ದಾರೆ. ನಾಟಕಗಳೇ ಅಲ್ಲದೆ ಕನ್ನಡ ಕಲಾವಿದರ ಕಲಾ ಪ್ರದರ್ಶನಗಳು, ಕನ್ನಡ ಸಂಗೀತಗಾರರ ಗಾಯನ ಕಾರ್ಯಕ್ರಮಗಳು, ಕನ್ನಡ ನೃತ್ಯ ಕಲಾವಿದೆಯರಿಂದ ನಾಟ್ಯಪ್ರದರ್ಶನಗಳು, ಛಾಯಾಚಿತ್ರ ಪ್ರದರ್ಶನಗಳನ್ನು ಏರ್ಪಡಿಸುವಲ್ಲಿಯೂ ಅವರು ಬಹಳಷ್ಟು ಶ್ರಮ ವಹಿಸಿದ್ದಾರೆ.
ಸ್ವತಃ ನಟನಾಗಿ ಅನೇಕ ನಾಟಕ ಹಾಗೂ ಚಲನಚಿತ್ರಗಳಲ್ಲಿ ಪಾತ್ರ ನಿರ್ವಹಣೆ, ’ಮ್ಯಾಕ್‌ಬೆತ್’ನಲ್ಲಿ,-ಮ್ಯಾಕ್‌ಬೆತನಾಗಿ, ಆಷಾಢಭೂತಿ’ಯಲ್ಲಿ-ಸುಬ್ಬಾಶಾಸ್ತ್ರಿಯಾಗಿ, ದಾರಿ ಯಾವುದಯ್ಯಾ ವೈಕುಂಠಕೆ’ ಯಲ್ಲಿ- ನಾಟಕಕಾರನಾಗಿ, ತುಘಲಕ್ ನಲ್ಲಿ-ತುಘಲಕ್‌ನಾಗಿ, ’ವಿಜಯನಾರಸಿಂಹ’ದಲ್ಲಿ-ರಣಧೀರ ಕಂಠೀರವನಾಗಿ, ’ರಂಗ ಭಾರತ’ದಲ್ಲಿ-ಧರ್ಮರಾಯನಾಗಿ, ಬಂಡ್ವಾಳ್ವಿಲ್ಲದ ಬಡಾಯಿ’ಯಲ್ಲಿ-ಲಾಯರ್ ಅಹೋಬ್ಳು ಆಗಿ, ಯಯಾತಿ’ ಯಲ್ಲಿ ಯಯಾತಿಯಾಗಿ, ಸರ್ವೇರ್ಶವರ ಸಾಕ್ಸೇನ ಅವರ ’ಕುರಿ’ಯಲ್ಲಿ ನಟ-ಸೂತ್ರಧಾರನಾಗಿ, ’ನಾ.ಕೃ.ಸ. ಅವರ ’ನಹಿ ನಹಿ ರಕ್ಷತಿ’ಯಲ್ಲಿ ಪದ್ಮಪಾದನಾಗಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಐದು ಚಲನಚಿತ್ರಗಳಲ್ಲಿ ನಟಿಸಿರುವ ಅವರು ಹಂಸಗೀತೆ’ಯಲ್ಲಿ ಸೋದರಮಾವ ಅನಂತಯ್ಯನಾಗಿ, ಬರ’ದಲ್ಲಿ ಪೋಲಿಸ್ ಸೂಪರಿಂಟೆಂಡೆಂಟ್ ಆಗಿ, ಅದರ ಹಿಂದೀ ಅವತರಣಿಕೆಯಾದ ’ಸುಖಾ’ದಲ್ಲಿ ಪೋಲಿಸ್ ಸೂಪರಿಂಟೆಂಡೆಂಟ್ ಆಗಿ, ಸಂಸ್ಕೃತ ಚಿತ್ರ ಆದಿ ಶಂಕರಾಚಾರ್ಯ’ದಲ್ಲಿ ಮಂಡನ ಮಿಶ್ರ-ಸುರೇಶ್ವರಾಚಾರ್ಯನಾಗಿ, ಪ್ರಥಮ ಉಷಾಕಿರಣ’ದಲ್ಲಿ ನಾಯಕನ ತಂದೆಯಾಗಿ ಪಾತ್ರ ನಿರ್ವಹಣೆ. ಅಲ್ಲದೆ ’ಕಾಯರ್’ ಹಿಂದಿ ಟೆಲಿ ಸೀರಿಯಲ್‌ನಲ್ಲಿ ’ಪರಮು ಆಶನ್’ ಆಗಿ ಪಾತ್ರ ನಿರ್ವಹಣೆ ಮಾಡಿದ್ದಾರೆ.
ಅವರ ಪತ್ನಿ ಲೀಲಾರಾವ್ ಅವರೂ ಅವರ ಜತೆ ತುಘಲಕ್‌ನಲ್ಲಿ, ಯಯಾತಿಯಲ್ಲಿ ಚಿತ್ರಲೇಖೆಯಾಗಿ, ’ಆದಿ ಶಂಕರಾಚಾರ್ಯ’ ಚಲನಚಿತ್ರದಲ್ಲಿ ಉಭಯ ಭಾರತಿಯಾಗಿ ಪಾತ್ರ ನಿರ್ವಹಿಸಿದ್ದಾರೆ. ವೃತ್ತಿಯಿಂದ ನಿವೃತ್ತಿಯಾದ ನಂತರ ಅವರು ಒಂಭತ್ತು ತಿಂಗಳು ಅಮೆರಿಕಾ, ಇಂಗ್ಲೆಂಡ್ ದೇಶಗಳಲ್ಲಿ ಸುತ್ತಾಡಿ ಅಲ್ಲಿಯ ಜನಜೀವನ, ಸಂಸ್ಕೃತಿ ಹಾಗು ಅಲ್ಲೆಲ್ಲಾ ನೆಲಸಿರುವ ಕನ್ನಡಿಗರ ಕನ್ನಡ ಚಟುವಟಿಕೆಗಳನ್ನು ಅಧ್ಯಯನ ಮಾಡಿ ಬಂದಿದ್ದಾರೆ. ಕನ್ನಡದಲ್ಲಿ ಮತ್ತು ಇಂಗ್ಲಿಷ್‌ನಲ್ಲಿ ಅವರು ಲೇಖನಗಳನ್ನು ಕೂಡಾ ಪತ್ರಿಕೆಗಳಿಗೆ ಬರೆಯುತ್ತಿದ್ದರು. ಇಂಗ್ಲಿಷ್ ಪುಸ್ತಕಗಳನ್ನು ಕನ್ನಡಕ್ಕೆ ರೂಪಾಂತರಿಸುವ ಹವ್ಯಾಸವೂ ಅವರಿಗಿದೆ.
Click this button or press Ctrl+G to toggle between Kannada and English