- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪ್ಲಾಸ್ಟಿಕ್ ನಿಷೇಧ ಆದೇಶ ಅನುಷ್ಠಾನಕ್ಕೆ ತನ್ನಿ: ಜಿಲ್ಲಾಧಿಕಾರಿ ಸೂಚನೆ

ಜಿಲ್ಲಾಧಿಕಾರಿ ಸುಬೋಧ್ ಯಾದವ್ [1]ಮಂಗಳೂರು : ಜಿಲ್ಲೆಯಾದ್ಯಂತ ಪ್ಲಾಸ್ಟಿಕ್ ನಿಷೇಧ ಆದೇಶ ಸಮಗ್ರವಾಗಿ ಜಾರಿಗೆ ತರಲು ಮಾರ್ಚ್ 30 ಅಂತಿಮ ದಿನವಾಗಿದ್ದು, ಪರ್ಯಾಯವನ್ನು ಜನರಿಗೆ ನೀಡಿ ಆದೇಶ ಪಾಲನೆಗೆ ಸಜ್ಜಾಗಿ ಎಂದು ಜಿಲ್ಲಾಧಿಕಾರಿ ಶ್ರೀ ಸುಬೋಧ್ ಯಾದವ್ ಅವರು ಅಧಿಕಾರಿಗಳಿಗೆ ಆದೇಶಿಸಿದರು.
ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲಾಡಳಿತ ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಮತ್ತು ಪ್ಲಾಸ್ಟಿಕ್ ಮುಕ್ತ ವಾತಾವರಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ಅಧಿಕಾರಿಗಳ ಕರ್ತವ್ಯಲೋಪಕ್ಕೆ ಕಠಿಣ ಶಿಕ್ಷೆ ಕಾದಿದೆ ಎಂದರು.
ಗ್ರಾಮಾಂತರ ವಲಯವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವಹಿಸಿದ್ದು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಜವಾಬ್ದಾರಿ ನಿಗದಿ ಮಾಡಲಾಗಿದೆ. ಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಉಸ್ತುವಾರಿಯನ್ನು ಖುದ್ದು ಜಿಲ್ಲಾಧಿಕಾರಿಗಳೇ ನಿರ್ವಹಿಸುವರು. ಸ್ಥಳೀಯ ಸಂಸ್ಥೆಗಳು ಸ್ವಯಂ ಸೇವಾ ಸಂಸ್ಥೆಗಳ ನೆರವನ್ನು ಪಡೆಯಬೇಕು. ಸ್ಥಳೀಯ ಸಂಸ್ಥೆಗಳಿಗೆ ಪ್ಲಾಸ್ಟಿಕ್ ಗುಣಮಟ್ಟ ಪರಿಶೀಲನೆಗೆ ಕೇವಲ ಒಂದು ಗೇಜ್ ನ್ನು ಖರೀದಿಸುವ ಅವಕಾಶವಿದೆ. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಲಯನ್ಸ್ ಮತ್ತು ಕೆನರಾ ಚೇಂಬರ್ಸ್ ನವರು 10 ಗೇಜ್ ಗಳನ್ನು ನೀಡುವರು. ಇದೇ ಮಾದರಿ ಅನುಸರಿಸಿ ಸ್ವಚ್ಛ ಹಾಗೂ ಮಾಲಿನ್ಯಮುಕ್ತ ನಗರ ನಿರ್ಮಾಣಕ್ಕೆ ಆದ್ಯತೆ ನೀಡಿ ಎಂದು ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು.
ಪರ್ಯಾಯ ವ್ಯವಸ್ಥೆಯ ಹಾಗೂ ಸಾಕಷ್ಟು ಮಾಹಿತಿ ನೀಡಿದ ಬಳಿಕವೂ ಪ್ಲಾಸ್ಟಿಕ್ ಬಳಕೆ ಕಂಡು ಬಂದರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಥಮ ಹಂತದಲ್ಲಿ 250 ರೂ., ಟಿ ಎಂ ಸಿಗೆ 150 ರೂ.ಮತ್ತು ನಗರ ಪಂಚಾಯತ್ ಗೆ 100 ರೂ. ದಂಡ ವಿಧಿಸುವ ನಿರ್ಣಯವನ್ನು ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಘನತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ನಿರಂತರವಾಗಿದ್ದು, ಮೂಡಬಿದ್ರೆ ಮತ್ತು  ಮುಲ್ಕಿ ಪ್ರಕ್ರಿಯೆಯಲ್ಲಿ ಹಿಂದೆ ಬಿದ್ದಿದೆ. ಈ ಸಂಬಂಧ ಈಗಾಗಲೇ ಜವಾಬ್ದಾರಿಯುತ ಅಧಿಕಾರಿಗಳ ಸಂಬಳ ತಡೆಗೆ ಆದೇಶಿಸಲಾಗಿದೆ ಎಂದರು. ಸಭೆಯಲ್ಲಿ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.