- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಿಎಂ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ

ಬಿ.ಎಸ್.ಯಡಿಯೂರಪ್ಪ [1]ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧದ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ವರದಿ ನೀಡುವಂತೆ ಲೋಕಾಯುಕ್ತ ವಿಶೇಷ ಕೋರ್ಟ್ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ಮಂಗಳವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕುಟುಂಬ ವರ್ಗದ ವಿರುದ್ಧದ ಭೂ ಹಗರಣದ ಕುರಿತಂತೆ ಲೋಕಾಯುಕ್ತ ಕೋರ್ಟ್ ಆದೇಶಕ್ಕೆ ತಡೆ ನೀಡಬೇಕೆಂದು ಕೋರಿ ಸಿಎಂ ಅಳಿಯ ಸೋಹನ್ ಕುಮಾರ್ ಸೋಮವಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಇಂದು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಲೋಕಾಯುಕ್ತ ಸ್ಪೆಶಲ್ ಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ, ದೂರುದಾರ ಸಿರಾಜಿನ್ ಬಾಷಾಗೂ ನೋಟಿಸ್ ಜಾರಿ ಮಾಡಿದೆ.
ಭೂ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಮೂರು ಪ್ರಕರಣಗಳಿಗೆ ಮಾತ್ರ ಅನುಮತಿ ನೀಡಿದ್ದರು. ಆದರೆ ದೂರುದಾರರು ರಾಜ್ಯಪಾಲರ ಅನುಮತಿಯನ್ನು ದುರ್ಬಳಕೆ ಮಾಡಿಕೊಂಡು ದೂರು ನೀಡಿರುವುದಾಗಿ ಸೋಮವಾರ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿದ್ದರು.
ಲೋಕಾಯುಕ್ತ ಕೋರ್ಟ್‌ಗೆ ನೀಡಿರುವ ದೂರಿನಲ್ಲಿ ರಾಜ್ಯಪಾಲರು ಪ್ರಕರಣಕ್ಕೆ ನೀಡಿರುವ ಅನುಮೋದನೆ ಸಂಖ್ಯೆಯನ್ನು ನಮೂದಿಸಿಲ್ಲ. ಹಾಗಾಗಿ ಕೋರ್ಟ್ ಪ್ರಕರಣದ ವಿಚಾರಣೆಗೆ ಸ್ವೀಕರಿಸುವ ಮುನ್ನ ಕಾರಣಗಳನ್ನೂ ತಿಳಿಸಿಲ್ಲ ಎಂದು ವಾದ ಮಂಡಿಸಿ, ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಪೀಠ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತ್ತು.
ಭೂ ಹಗರಣಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ಪೀಠ ಮಧ್ಯಂತರ ತಡೆ ನೀಡುವ ಮೂಲಕ ಸಿಎಂ ವಿರುದ್ಧದ ಎಲ್ಲಾ ತನಿಖೆಗೂ ಬ್ರೇಕ್ ಬಿದ್ದಂತಾಗಿದೆ. ಸಿಎಂ ಅಳಿಯ ಸೋಹನ್ ಕುಮಾರ್ ಪರವಾಗಿ ಬಿ.ವಿ.ಆಚಾರ್ಯ ವಾದ ಮಂಡಿಸಿದ್ದರು.