- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರಾಜ್ಯದ ಸಾಂಸ್ಕೃತಿಕ ಪರಂಪರೆಗಳ ಪ್ರಾತಿನಿಧಿಕ ಕೇಂದ್ರವಾಗಿ ಜಾನಪದ ವಿವಿ. ಬೆಳೆಯಬೇಕು : ಹೆಗ್ಗಡೆ ಸಲಹೆ.

Veerendra Hegde [1]

ಉಜಿರೆ: ಮೂಲಭೂತ ಸೌಕರ್ಯ, ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಸರ್ಕಾರ ಹಾಗೂ ದಾನಿಗಳ ಸಹಕಾರದೊಂದಿಗೆ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವನ್ನು ರಾಜ್ಯದ ಸಾಂಸ್ಕೃತಿಕ ಪರಂಪರೆಗಳ ಪ್ರಾತಿನಿಧಿಕ ಕೇಂದ್ರವಾಗಿ ಬೆಳೆಸಬೇಕು. ಜನರ ವಿಶ್ವವಿದ್ಯಾಲಯವಾಗಿ ಬೆಳೆಯಬೇಕು, ಬೆಳಗಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸಲಹೆ ನೀಡಿದರು.

ಹಾವೇರಿಯ ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಯಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಡಾ. ಕೆ. ಚಿನ್ನಪ್ಪಗೌಡ ಭಾನುವಾರ ಧರ್ಮಸ್ಥಳದಲ್ಲಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆದರು.

ದೇಶ-ವಿದೇಶಗಳ ವಿಶ್ವವಿದ್ಯಾಲಯಗಳನ್ನು ಹಾಗೂ ವಿದ್ವಾಂಸರನ್ನು ಸಂಪರ್ಕಿಸಿ ಅವರ ಸಲಹೆ, ಸೂಚನೆ ಪಡೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶ್ವವಿದ್ಯಾಲಯವನ್ನು ಬೆಳೆಸಬೇಕು. ಮೂಲಭೂತ ಸೌಕರ್ಯಗಳೊಂದಿಗೆ ಶೈಕ್ಷಣಿಕವಾಗಿಯೂ ವಿಶ್ವವಿದ್ಯಾಲಯವನ್ನು ಬೆಳೆಸಬೇಕು ಎಂದು ಹೇಳಿದ ಹೆಗ್ಗಡೆಯವರು ಈ ಬಗ್ಯೆ ತಮ್ಮ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ದೇವರ ದರ್ಶನದ ಬಳಿಕ ಹಾವೇರಿಗೆ ಅವರು ಪ್ರಯಾಣ ಬೆಳೆಸಿದರು. ಪತ್ನಿ ಡಾ. ಶಾಂತಿ ಇದ್ದರು.

ಸಮಸ್ಯೆಗಳ ಸರಮಾಲೆ:
ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ವಿಶ್ವವಿದ್ಯಾಲಯದಲ್ಲಿ ದಾಖಲಾತಿ ಕೇಂದ್ರ ಹಾಗೂ ವಸ್ತುಸಂಗ್ರಹಾಲಯ ಪ್ರಾರಂಭಿಸಿ ಸಂಶೋಧನೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಕಟ್ಟಡಗಳು, ಗ್ರಂಥಾಲಯಗಳು, ಸಿಬ್ಬಂದಿ ಕೊರತೆ ಮೊದಲಾದ ಹಲವು ಸಮಸ್ಯೆಗಳಿದ್ದು ಅದನ್ನು ಸವಾಲಾಗಿ ಸ್ವೀಕರಿಸಿ ವಿಶ್ವವಿದ್ಯಾಲಯವನ್ನು ಪ್ರಗತಿಯ ಹಾದಿಯಲ್ಲಿ ಮುನ್ನಡೆಸುವುದಾಗಿ ಕುಲಪತಿಗಳು ತಿಳಿಸಿದ್ದಾರೆ.