ನವದೆಹಲಿ: ದೆಹಲಿಯಲ್ಲಿ ಹೆಚ್ಚಾದ ವಾಯು ಮಾಲಿನ್ಯ ಹಿನ್ನೆಲೆಯಲ್ಲಿ ಇನ್ಮುಂದೆ ಹೊಸ ಡೀಸೆಲ್ ಕಾರುಗಳ ನೋಂದಣಿ ಬೇಡ. ಅಲ್ಲದೇ 10 ವರ್ಷಗಳ ಹಳೆಯ ಡೀಸೆಲ್ ಕಾರುಗಳನ್ನು ನಿಷೇಧಿಸುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್ ಜಿಟಿ) ಪೀಠ ಶುಕ್ರವಾರ ಆದೇಶ ಹೊರಡಿಸುವ ಮೂಲಕ ಸೂಚನೆ ನೀಡಿದೆ.
ಸರ್ಕಾರ ಕೂಡ ತಮ್ಮ ಇಲಾಖೆಗಳಿಗಾಗಿ ಡೀಸೆಲ್ ವಾಹನಗಳನ್ನು ಖರೀದಿಸಬಾರದು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನಿರ್ದೇಶನ ನೀಡಿದೆ. ಹೊಸ ಡೀಸೆಲ್ ವಾಹನಗಳನ್ನು ಖರೀದಿಸಬಾರದು. ಹೊಸ ಡೀಸೆಲ್ ಕಾರುಗಳ ನೋಂದಣಿಯೂ ಬೇಡ ಎಂದು ಹೇಳಿದೆ.
ದೆಹಲಿಯಲ್ಲಿ ಡೀಸೆಲ್ ಕಾರುಗಳ ಸಂಚಾರ ನಿಷೇಧಿಸಬೇಕೆಂದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ಡಿಸೆಂಬರ್ 15ರಂದು ನಡೆಯಲಿದೆ. ಈ ಪ್ರಕರಣದ ವಿಚಾರಣೆ ನಡೆಸಬೇಕೆಂದು ಅರ್ಜಿದಾರ ಅರವಿಂದ್ ಗುಪ್ತಾ ಸುಪ್ರೀಂಕೋರ್ಟ್ ಸಿಜೆಐ ಟಿಎಸ್ ಠಾಕೂರ್ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.