- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರೆ ಆರಂಭ

Kanipura Jatre [1]

ಕುಂಬಳೆ: ಕುಂಬಳೆ ಸೀಮೆಯ ಪ್ರಸಿದ್ಧ ನಾಲ್ಕು ಕ್ಷೇತ್ರಗಳಲ್ಲಿ ಒಂದಾದ ಅತ್ಯಂತ ಕಾರಣಿಕ ಮಹತ್ವ ಪಡೆದಿರುವ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಜ.14ರಿಂದ 18ರ ವರೆಗೆ ಐದು ದಿನಗಳ ಪರ್ಯಂತ ಶ್ರದ್ಧಾಭಕ್ತಿಯಿಂದ ಜರಗಲಿದೆ. ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳು ಕಾರ್ಯಕ್ರಮಗಳ ನೇತೃತ್ವ ವಹಿಸಲಿದ್ದಾರೆ.

ಕಣಿಪುರ ದೇವಾಲಯದ ಜಾತ್ರಾ ಮಹೋತ್ಸವದ ಪ್ರಯುಕ್ತ ಕುಂಬಳೆ ಪೇಟೆ ಹಾಗೂ ಆಸುಪಾಸಿನ ಪ್ರದೇಶಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ಎಲ್ಲಡೆ ಕೇಸರಿ ಬಂಟಿಂಗ್ಸ್ , ಓಂಕಾರ ಧ್ವಜಗಳು, ಫ್ಲೆಕ್ಸ್ ಬೊರ್ಡ್ ಗಳು ರಾರಾಜಿಸುತ್ತಿವೆ.

ಕಣಿಪುರ ಕ್ಷೇತ್ರಕ್ಕೆ ತೆರಳುವ ಇಕ್ಕಡೆಗಳಲ್ಲಿ ಸಂತೆಗಳನ್ನು ಹಾಕಲಾಗಿದ್ದು , ಭರ್ಜರಿ ಮಾರಾಟ ನಡೆಯುವ ಸಾಧ್ಯತೆ ಕಂಡುಬರುತ್ತಿದೆ. ಕಣಿಪುರ ಜಾತ್ರೆ ಸಂತೆಗೆ ವಿಶೇಷ ಮಹತ್ವವಿದ್ದು , ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಂದ ಹಿಡಿದು ಸಾರ್ವಜನಿಕರು ಕೂಡ `ಜಾತ್ರೆ ಮಿಠಾಯಿ’ ಸಹಿತ ಸಾಕಷ್ಟು ಸಾಮಗ್ರಿಗಳನ್ನು ಸಂತೆಯಿಂದ ಪಡೆದುಕೊಳ್ಳಲಿದ್ದಾರೆ. ಕಣಿಪುರ ಮಹೋತ್ಸವದ ಅಂಗವಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪರಿಸರದಾದ್ಯಂತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಕಾರ್ಯಕ್ರಮಗಳ ವಿವರ
ಜ.14ರಂದು ಪೂರ್ವಾಹ್ನ 8ಗಂಟೆಗೆ ಸೋಪಾನ ಸಂಗೀತ, 9.30ಕ್ಕೆ ಕಣಿಪುರ ಶ್ರೀ ಗೋಪಾಲಕೃಷ್ಣ ಸೇವಾ ಸಮಿತಿ ಕೃಷ್ಣನಗರ ಕುಂಬಳೆ ಇದರ ವತಿಯಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ, 10ಗಂಟೆಗೆ ಧ್ವಜಾರೋಹಣ, ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ 5ಕ್ಕೆ ನಡೆ ತೆರೆಯುವುದು, 6.30ಕ್ಕೆ ದೀಪಾರಾಧನೆ, ಶಾಸ್ತ್ರೀಯ ಸಂಗೀತ, ರಾತ್ರಿ 8.30ಕ್ಕೆ ಉತ್ಸವ ಬಲಿ, ರಂಗಪೂಜೆ.

ಜ.15ರಂದು ಪೂರ್ವಾಹ್ನ 6ಗಂಟೆಗೆ ಉತ್ಸವ ಶ್ರೀ ಭೂತ ಬಲಿ, 10.30ಕ್ಕೆ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಬಲಿ, ಅನ್ನದಾನ, ಸಂಜೆ 4.30ಕ್ಕೆ ನಡೆ ತೆರೆಯುವುದು, 6.30ಕ್ಕೆ ದೀಪಾರಾಧನೆ, ಭಜನೆ, ರಾತ್ರಿ 8.30ಕ್ಕೆ ಸಣ್ಣ ದೀಪೋತ್ಸವ, ಪ್ರದಕ್ಷಿಣೆ ಬಲಿ, ಪೂಜೆ, 11.30ಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ಕೃಪಾಶ್ರಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ `ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ.

ಜ.16ರಂದು ಪೂರ್ವಾಹ್ನ 6ಗಂಟೆಗೆ ಉತ್ಸವ, ಶ್ರೀ ಭೂತ ಬಲಿ, 10.30ಕ್ಕೆ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಬಲಿ, ಅನ್ನದಾನ, ಸಂಜೆ 4.30ಕ್ಕೆ ನಡೆ ತೆರೆಯುವುದು, 6.30ಕ್ಕೆ ಕುಂಬಳೆ ಸೀಮೆಯ ಭಕ್ತವೃಂದದವರಿಂದ ವಿಶ್ವರೂಪದರ್ಶನ (ದೀಪೋತ್ಸವ), ಹಿಂದುಸ್ಥಾನಿ ಸಂತವಾಣಿ ಹಾಗೂ ದಾಸವಾಣಿ, ರಾತ್ರಿ 8.30ಕ್ಕೆ ನಡು ದೀಪೋತ್ಸವ, ದರ್ಶನ ಬಲಿ, ಪೂಜೆ.

ಜ.17ರಂದು ಪೂರ್ವಾಹ್ನ 6ಗಂಟೆಗೆ ಉತ್ಸವ ಶ್ರೀ ಭೂತಬಲಿ, 10.30ಕ್ಕೆ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನದಾನ, ಸಂಜೆ 4ಕ್ಕೆ ನಡೆ ತೆರೆಯುವುದು, ಭಜನೆ, 6ರಿಂದ ತಾಯಂಬಕ, 6.30ಕ್ಕೆ ನೃತ್ಯ ವೈವಿಧ್ಯ, ದೀಪಾರಾಧನೆ, ರಾತ್ರಿ 8.30ಕ್ಕೆ ಉತ್ಸವ, 9.45ರಿಂದ ಭಕ್ತವೃಂದದ ವತಿಯಿಂದ ವಿಶೇಷ ಬೆಡಿ ಪ್ರದರ್ಶನ, ಮುಂಜಾನೆ 2.45ಕ್ಕೆ ಶಯನ, ಕವಾಟ ಬಂಧನ.

ಜ.18ರಂದು ಪೂರ್ವಾಹ್ನ 6ರಿಂದ ಕವಾಟೋದ್ಘಾಟನೆ, 10.30ಕ್ಕೆ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನದಾನ, ಸಂಜೆ 4.30ಕ್ಕೆ ನಡೆ ತೆರೆಯುವುದು, 6.30ಕ್ಕೆ ದೀಪಾರಾಧನೆ, ಯಕ್ಷಗಾನ ತಾಳಮದ್ದಳೆ, ರಾತ್ರಿ 8.30ಕ್ಕೆ ಉತ್ಸವ, ಪ್ರದಕ್ಷಿಣೆ ಬಲಿ, ಘೋಷಯಾತ್ರೆ, ಅವಭೃತ ಸ್ನಾನ (ಶೇಡಿಗುಮ್ಮೆಯಲ್ಲಿ ), 10ರಿಂದ ಭಾರ್ಗವ ವಿಜಯ, ಗಧಾಯುದ್ಧ ‘ ಯಕ್ಷಗಾನ ಬಯಲಾಟ, 12.30ಕ್ಕೆ ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವರೋಹಣ.

ಜ.19ರಂದು ಪೂರ್ವಾಹ್ನ 10ಕ್ಕೆ ಶ್ರೀ ದೇವರಿಗೆ ಪಂಚಾಮೃತ ಮತ್ತು ಎಳನೀರು ಅಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಬಲಿ, ಅನ್ನದಾನ, ಸಂಜೆ 6.30ಕ್ಕೆ ದೀಪಾರಾಧನೆ, ರಾತ್ರಿ 7ಕ್ಕೆ ಭಜನೆ, 8ರಿಂದ ಮಹಾಪೂಜೆ, ಉತ್ಸವ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ.