ದೇವರ ಭೂಲೋಕದಲ್ಲಿ ಮಕ್ಕಳು ಅತ್ಯಂತ ಸುಂದರ ಹೂಗಳು – ಬನಾರಿ ನಾರಾಯಣ ಭಟ್

12:15 PM, Wednesday, January 27th, 2016
Share
1 Star2 Stars3 Stars4 Stars5 Stars
(5 rating, 7 votes)
Loading...
Narayana Bhat Banari

ಬದಿಯಡ್ಕ : ವಸಂತ ಕಾಲದಲ್ಲಿ ಹೂಗಳೆಲ್ಲ ಅರಳಿ ಸುಂದರವಾಗಿ ಬರುವ ಕಾಲ. ಸುಂದರ ಹೂದೋಟದ ಮಧ್ಯೆ ಬಂದು ನಿಂತಿರುವ ಸಂಭ್ರಮವಿದೆ. ದೇವರ ಭೂಲೋಕದಲ್ಲಿ ಮಕ್ಕಳು ಅತ್ಯಂತ ಸುಂದರವಾದ ಹೂಗಳು ಎಂದು ನಿವೃತ್ತ ಶಿಕ್ಷಕ ಬನಾರಿ ನಾರಾಯಣ ಭಟ್ ನುಡಿದರು.

ಅವರು ಶುಕ್ರವಾರ ಸಂಜೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಶಾಲಾ ‘ವಸಂತೋತ್ಸವ’ವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಪ್ತವರ್ಣದ ಮಿಶ್ರಣದೊಂದಿಗೆ ಬಹುಸುಂದರ ಪುಷ್ಪಗಳು ಇಲ್ಲಿ ಅರಳುತ್ತಾ ಇದೆ. ಆದ್ದರಿಂದ ಇದು ವಸಂತೋತ್ಸವ ಆಗಿದೆ. ನನ್ನ ಜೀವನದ ಅತ್ಯಂತ ಸುಂದರವಾದ ಸಂಜೆ ಇದಾಗಿದೆ. ಪ್ರತಿಯೊಂದು ಮಗು ಹುಟ್ಟುವಾಗ ಚೈತನ್ಯವನ್ನು ತುಂಬಿಕೊಂಡೇ ಹುಟ್ಟುತ್ತದೆ. ಒಳಗಿರುವ ಚೈತನ್ಯವನ್ನು ಅನಾವರಣಗೊಳಿಸುವ ಕಾರ್ಯವು ಇದಾಗಿದೆ. ದೇಶದ ನಿಜವಾದ ಆಧಾರ ಸ್ಥಂಭವು ಇಂತಹ ಪ್ರಾಥಮಿಕ ಶಿಕ್ಷಣ ಕೇಂದ್ರಗಳಾಗಿವೆ. ಪ್ರಾಥಮಿಕ ವಿದ್ಯಾಭ್ಯಾಸವೇ ದೇಶದ ಮೂಲ ಸಂಪತ್ತು. ಪೂಜ್ಯ ರಾಘವೇಶ್ವರ ಶ್ರೀಗಳು ಸಮಾಜ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿರುವ ಹಲವಾರು ಸೇವಾ ಯಜ್ಞಗಳಲ್ಲಿ ಇದೂ ಒಂದು. ಅವರ ಕಲ್ಪನೆಯ ಈ ಕೂಸು ಸರಿಯಾದ ದಾರಿಯಲ್ಲಿ ಸಾಗುತ್ತಿದೆ. ಇಚ್ಛಾ ಶಕ್ತಿಯನ್ನು ಮೀರಿಸುವ ಶಕ್ತಿ ಜಗತ್ತಿನಲ್ಲಿ ಬೇರೆ ಯಾವ ಶಕ್ತಿಗೂ ಇಲ್ಲ ಎಂದರು.

ಮಕ್ಕಳಿಗೆ ಉತ್ತಮವಾದ ವೇದಿಕೆಯನ್ನು ಕಲ್ಪಿಸಿಕೊಡುವ ಶಾಲೆಗೆ ನನ್ನ ಮಗುವನ್ನು ಸೇರಿಸಿರುವುದು ನನಗೆ ಹೆಮ್ಮೆಯ ವಿಚಾರ ಎಂದು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಲೀಲಾವತಿ ಕನಕಪ್ಪಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಪೂರ್ವ ವಿದ್ಯಾರ್ಥಿ ನಾಯಕ ಕಾರ್ತಿಕ್ ಕೃಷ್ಣ ಕಾಡಮನೆ ಮಾತನಾಡಿದರು. ಬೇರ್ಕಡವು ಸೀತಾರಾಮ ಭಟ್ಟರ ಸ್ಮರಣಾರ್ಥ ಶಿವರಂಜನ್ ಬೇರ್ಕಡವು ಕೊಡಮಾಡುವ ದತ್ತಿನಿಧಿ ‘ಸ್ವರ್ಣಾಂಕುರ’ವನ್ನು ಹರ್ಷಿತಾ ಎನ್ ಪಡೆದುಕೊಂಡಳು.

ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕೊನೆಯಲ್ಲಿ ಮಕ್ಕಳಿಂದ ಸುದರ್ಶನ ವಿಜಯ ಎಂಬ ಯಕ್ಷಗಾನ ನಡೆಯಿತು. ಹಿಮ್ಮೇಳದಲ್ಲಿ ಬೇಂಗ್ರೋಡಿ ಗೋವಿಂದಭಟ್, ಸುಬ್ರಹ್ಮಣ್ಯ ಭಟ್, ಲಕ್ಷ್ಮೀಶ ಸಹಕರಿಸಿದರು. ಅಧ್ಯಾಪಕ ವೃಂದದವರ ಮಾರ್ಗದರ್ಶನದೊಂದಿಗೆ 10ನೇ ತರಗತಿಯ ವಿದ್ಯಾರ್ಥಿಗಳಾದ ಕಾರ್ತಿಕ್ ಸಾಗರ್, ರೋಹಿತ್ ಎಸ್, ಸನ್ನಿಧಿ, ಶರಣ್ಯ ಕೆ. ಆರ್, ಅನುಶ್ರೀ ಪಿ., ಶ್ರದ್ಧಾ ಪಿ.ರೈ ನಿರೂಪಣೆಗೈದರು. ಶಾಲಾ ನಾಯಕ ಅನೀಶ್ ಸ್ವಾಗತಿಸಿ, ಆಡಳಿತ ಸಮಿತಿಯ ಕಾರ್ಯದರ್ಶಿ ರಾಜಗೋಪಾಲ ಧನ್ಯವಾದವನ್ನಿತ್ತರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English