ಮಂಜೇಶ್ವರ: ಇಸ್ಲಾಮಿಕ್ ಸ್ಟೇಟ್ ನಂತಹ ಉಗ್ರಗಾಮಿ ಸಂಘಟನೆಗಳು ಮುಸ್ಲಿಂ ಸಮುದಾಯಕ್ಕೇ ಮುಖಭಂಗಕ್ಕೆ ಕಾರಣವಾಗುತ್ತಿರುವುದು ಆತಂಕಕಾರಿ. ಇದರಿಂದ ಜಾಗತಿಕ ಶಾಂತಿ ಭಂಗದ ಜೊತೆಗೆ ಬಹುದೊಡ್ಡ ಸಮುದಾಯದ ತೇಜೋವಧೆಗೆ ಕಾರಣವಾಗಿ ಲೋಕಮುಖಕ್ಕೆ ಎಲ್ಲರೂ ಅಪಾಯಕಾರಿಗಳಾಗಿ ಕಾಣಿಸಿಕೊಳ್ಳಲು ಕಾರಣರಾಗಿರುವುದು ಉತ್ತಮ ಬೆಳವಣಿಗೆಗಳಲ್ಲವೆಂದು ಮುಸ್ಲಿಂಲೀಗ್ ರಾಜ್ಯಾಧ್ಯಕ್ಷ ಪಾಣಕ್ಕಾಡ್ ಸಯ್ಯದ್ ಹೈದರಲಿ ಶಿಹಾಬ್ ತಂಙಳ್ ಅಭಿಪ್ರಾಯ ವ್ಯಕ್ತಪಡಿಸಿದರು.
ಹೊಸಂಗಡಿಯಲ್ಲಿ ಭಾನುವಾರ ಸಂಜೆ ಸಚಿವ ಪಿ.ಕೆ.ಕುಂಞಲಿಕುಟ್ಟಿ ನಾಯಕತ್ವದಲ್ಲಿ ಆರಂಭಗೊಂಡ ಮುಸ್ಲಿಂಲೀಗ್ ನ ಕೇರಳ ರಾಜ್ಯ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ನಿರಪರಾಧಿಗಳನ್ನು ಹತ್ಯೆಗೈಯ್ಯುವ ಪಾತಕಿಗಳನ್ನು ಇಸ್ಲಾಂ ಎಂದೂ ಅಂಗೀಕರಿಸದು.ಜನರನ್ನು ಕೋಮು ಆಧಾರದಲ್ಲಿ ವಿಭಜಿಸುವ ಮನೋವಿಕಲ್ಪಗಳನ್ನುಂಟುಮಾಡುವ ಯತ್ನಗಳು ಹಾಗೂ ಮತೀಯ ಉಗ್ರಗಾಮಿಗಳನ್ನು ಬೆಳೆಸುವ ಪ್ಯಾಪಿಸ್ಟ್ ಶಕ್ತಿಗಳ ವಿರುದ್ದ ಜಾಗೃತಿ ಅಗತ್ಯ ಎಂದು ಅವರು ತಿಳಿಸಿದರು.ಪ್ಯಾಪಿಸ್ಟ್ ಶಕ್ತಿಗಳು ಅಧಿಕಾರಕ್ಕೇರುವುದರಿಂದ ಅಸಹಿಷ್ಣುತೆ,ಮತೀಯ ವ್ಯತಿರಿಕ್ತತೆ ಅಧಿಕಗೊಂಡು ಅಶಾಂತಿಗೆಡೆಯಾಗಿದೆ.ಜಾತ್ಯಾತೀತ ಶಕ್ತಿಗಳು ಅಸಂಘಟಿತರಾಗಿರುವುದು ಸಮಸ್ಯೆಗಳ ಮೂಲ ಕಾರಣವಾಗಿದ್ದು,ಒಗ್ಗಟ್ಟು ಅಗತ್ಯವೆಂದು ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಜಾಥಾ ನಾಯಕ ಸಚಿವ ಪಿ.ಕೆ ಕುಂಞಲಿಕುಟ್ಟಿ,ಇಸ್ಲಾಮಿಕ್ ಸ್ಟೇಟ್ ನಂತಹ ಉಗ್ರ ಸಂಘಟನೆಗಳಿಗೆ ಬೇರೂರಲು ಮುಸ್ಲಿಂಲೀಗ್ ಕೇರಳದಲ್ಲಿ ಎಂದಿಗೂ ಅವಕಾಶ ನೀಡದೆಂದು ತಿಳಿಸಿದರು.ಸೌಹಾರ್ಧ,ಸಮತ್ವ ಮತ್ತು ಸಮನ್ವಯ ಯಾತ್ರೆಯ ಧ್ಯೇಯವಾಗಿರುವುದು ಪಕ್ಷದ ಮನೋಸ್ಥಿತಿಯ ಸಂಕೇತವೆಂದು ಅವರು ತಿಳಿಸಿದರು.
ಸಾದಿಕ್ ಅಲಿ ಶಿಹಾಬ್ ತಂಙಳ್ ಅಧ್ಯಕ್ಷತೆ ವಹಿಸಿದ್ದರು.ಸಚಿವರಾದ ಎಂ.ಕೆ.ಮುನೀರ್,ಇಬ್ರಾಹಿಂ ಕುಂಞಿ,ಅಬ್ದುರಬ್,ಮಂಞಳಾಂಕುಳಿ ಅಲಿ,ಸಂಸದ ಇ.ಅಹಮ್ಮದ್ ಬಶೀರ್,ನೇತಾರರಾದ ಕೆಪಿಎ ಮಜೀದ್,ಅಬ್ದುಸ್ಸಮದ್ ಸಮದಾನಿ,ಕೆ.ಎಂ.ಶಾಜಿ,ಚೆರ್ಕಳಂ ಅಬ್ದುಲ್ಲ,ಶಾಸಕರಾದ ಎನ್.ಎ.ನೆಲ್ಲಿಕುನ್ನು,ಪಿ.ಬಿ.ಅಬ್ದುಲ್ ರಸಾಕ್,ಕೇರಳ ಪ್ರದೇಶ ಕಾಂಗ್ರೆಸ್ಸ್ ಕಾರ್ಯದರ್ಶಿ ಕೆ.ಪಿ ಕುಂಞಿಕಣ್ಣನ್, ಜಿಲ್ಲಾ ಕಾಂಗ್ರೆಸ್ಸ್ ಅಧ್ಯಕ್ಷ ಅಡ್ವ.ಸಿ.ಕೆ.ಶ್ರೀಧರನ್,ಇ.ಎ.ಅಹಮ್ಮದ್ ಸಾಹಿಬ್,ಪಿ.ಕೆ.ಕೆ.ಬಾವ,ಸಿ.ಟಿ.ಅಹಮ್ಮದಲಿ,ಸಾದಿಕ್ ಅಲಿ ಮೊದಲಾದವರು ಮಾತನಾಡಿದರು.
ಮುಸ್ಲಿಂಲೀಗ್ ಪ್ರಧಾನ ಕಾರ್ಯದರ್ಶಿ ಮಜೀದ್ ಸಾಹಿಬ್ ಸ್ವಾಗತಿಸಿ,ಎ.ಕೆ.ಎಂ.ಅಶ್ರಫ್ ವಂದಿಸಿದರು. ರಾಜ್ಯದ 140 ವಿಧಾನ ಸಭಾ ಕ್ಷೇತ್ರಗಳಲ್ಲಿ ಪರ್ಯಟನೆ ನಡೆಸಲಿರುವ ಯಾತ್ರೆ ಫೆ.೧೧ ರಂದು ತಿರುವನಂತಪುರದಲ್ಲಿ ಸಮಾರೋಪಗೊಳ್ಳಲಿದೆ.
Click this button or press Ctrl+G to toggle between Kannada and English