- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬದಿಯಡ್ಕದಲ್ಲಿ ಕನ್ನಡ ಚಿಂತನೆ ಕಾರ್ಯಕ್ರಮ- ಕಯ್ಯಾರ ಕಾವ್ಯ ವಿಶೇಷೋಪನ್ಯಾಸ ಹಾಗೂ ಕಾವ್ಯಗಾಯನ

Kyyara [1]

ಬದಿಯಡ್ಕ: ಕವಿ ಕಯ್ಯಾರರಿಗೆ ಬದುಕು ಮತ್ತು ಕಾವ್ಯ ಬೇರೆಯಾಗಿರಲಿಲ್ಲ.ಅವರ ಕೃತಿಗಳೆಲ್ಲವು ಜೀವನಾನುಭವಗಳ ತಿರುಳುಗಳಾಗಿದ್ದವು.ಇವು ಕಯ್ಯಾರರ ಜೀವನ್ಮುಖಿ ಚಿಂತನೆಗಳನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆಯೆಂದು ಅಧ್ಯಾಪಿಕೆ,ಕವಯಿತ್ರಿ ದಿವ್ಯಗಂಗಾ ಪಿ.ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರಿನ ಕನ್ನಡ ಆಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಾಸರಗೋಡಿನ ಅಪೂವ ಕಲಾವಿದರು ಇದರ ಸಹಯೋಗದಲ್ಲಿ ಬದಿಯಡ್ಕದ ಅಂಬೇಡ್ಕರ್ ವಿಚಾರ ವೇದಿಕೆಯ ಸಹಕಾರದಲ್ಲಿ ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ಆಯೋಜಿಸಲಾಗಿದ್ದ ಮೂರನೇ ಕನ್ನಡ ಚಿಂತನ ಕಾರ್ಯಕ್ರಮದಲ್ಲಿ ಅವರು ಕಯ್ಯಾರರ ಕಾವ್ಯಗಳಲ್ಲಿ ಜೀವನ ದೃಷ್ಟಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.

ಕಯ್ಯಾರರ ಬಹುತೇಕ ಕಾವ್ಯಗಳಲ್ಲಿ ನವೋದಯದ ಪರಿಕಲ್ಪನೆಗಳಿವೆ.ಪ್ರಕೃತಿ ಪ್ರೇಮ,ರಾಷ್ಟ್ರೀಯತೆ,ವಾಸ್ತವತೆಯನ್ನು ಒಪ್ಪಿಕೊಳ್ಳುವ ಭಾವದ ಜೀವನ ಚಿತ್ರಣ ಕಯ್ಯಾರರ ಕೃತಿಗಳಲ್ಲಿ ಎದ್ದು ಕಾಣುತ್ತದೆಯೆಂದು ಅವರು ತಿಳಿಸಿದರು.ಜಾತಿ,ಅಸಮಾನತೆ,ಕೆಟ್ಟ ವ್ಯವಸ್ಥೆಗಳ ಬಗ್ಗೆ ಕಯ್ಯಾರರಿಗಿದ್ದ ಆಕ್ರೋಶಗಳೂ ಕೃತಿಯಲ್ಲಿ ಕಂಡುಬರುತ್ತದೆಯೆಂದು ಅವರು ತಿಳಿಸಿದರು.

ಸಾಹಿತಿ ಶಶಿ ಭಾಟಿಯ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ,ಕಯ್ಯಾರರ ಜ್ಞಾನ ಶ್ರೀಮಂತಿಕೆಗೆ ಉಪನಿಷತ್ತಿನ ಅನುವಾದ ಸಾಕ್ಷಿಯಾಗಿದ್ದು,ಗದ್ಯ-ಪದ್ಯಗಳೆರಡರಲ್ಲೂ ಅಪ್ರತಿಮ ಸಾಧನೆಗಳನ್ನು ಮಾಡಿರುವ ಕಯ್ಯಾರರು ಕನ್ನಡ ಸಾರಸ್ವತ ಲೋಕದಲ್ಲಿ ಅಚ್ಚಳಿಯದೆ ಉಳಿವ ವ್ಯಕ್ತಿತ್ವದವರೆಂದು ತಿಳಿಸಿದರು.

ಹಿರಿಯ ಯಕ್ಷಗಾನ ಅರ್ಥಧಾರಿ ಬೆಳ್ಳಿಗೆ ನಾರಾಯಣ ಮಣಿಯಾಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಭೆಯಲ್ಲಿ ಕಯ್ಯಾರರ ಪುತ್ರ ಪುತ್ತೂರು ಫಿಲೋಮಿನ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನ ರೈ,ಅಪೂರ್ವ ಕಲಾವಿದರು ಸಂಘಟನೆಯ ಅಧ್ಯಕ್ಷ ಎಂ.ಉಮೇಶ್ ಸಾಲಿಯಾನ್,ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ,ಬೇಬಿ ಜಯರಾಂ ಮಣಿಯಂಪಾರೆ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿಜಯಶ್ರೀ ಭಾಗ-2 ಎಂಬ ಉದ್ಯೋಗ ಮಾರ್ಗದರ್ಶಿ ಪುಸ್ತಕದ ಬಿಡುಗಡೆ ನಡೆಯಿತು. ರಂಜಿನಿ ಪಟ್ಟಾಜೆ ಮತ್ತು ಬಳಗದವರು ಪ್ರಾರ್ಥನೆ ಹಾಡಿದರು. ಸುಂದರ ಬಾರಡ್ಕ ಸ್ವಾಗತಿಸಿ, ಡಾ.ರತ್ನಾಕರ ಮಲ್ಲಮೂಲೆ ಪ್ರಾಸ್ತವನೆಗೈದರು. ಪ್ರಭಾವತಿ ಕೆದಿಲಾಯ ಪುಂಡೂರು ವಂದಿಸಿದರು. ಎಸ್.ಜಗನ್ನಾಥ ಶೆಟ್ಟಿ ಕುಂಬಳೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ರತ್ನಾಕರ ಎಸ್.ಓಡಂಗಲ್ಲು ಮತ್ತು ಬಳಗದವರಿಂದ ಕನ್ನಡದ ಪ್ರಸಿದ್ಧ ಕವಿಗಳ ಕಾವ್ಯ ಗಾಯನ ಕಾರ್ಯಕ್ರಮ ಜರಗಿತು. ಪ್ರಕಾಶ್ ಆಚಾರ್ಯ ಕುಂಟಾರ್,ಸಾಯಿ ಮನೋಹರ್,ಪ್ರಶಾಂತ ಬದಿಯಡ್ಕ ಹಿನ್ನಲೆ ಸಂಗೀತದಲ್ಲಿ ಸಹಕರಿಸಿದರು.