- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನಾಥ ಪಂಥ ಮಾನವ ಜನ್ಮದ ಧರ್ಮ ದೀಪಿಕಾ : ನಿತ್ಯಾನಂದ ಸ್ವಾಮೀಜಿ

jogi-mutt [1]

ಮಂಗಳೂರು : ನಾಥ ಪಂಥ ಮಾನವ ಜನ್ಮದ ಧರ್ಮ ದೀಪಿಕಾ. ಪಂಥದ ಝಂಡಿಯಾತ್ರೆಯ ಹಿಂದೆ ರಾಷ್ಟ್ರೀಯತೆ, ಸಮಗ್ರತೆಯ ಚಿಂತನೆ ಇದೆ ಎಂದು ಚಿಕ್ಕಮಗಳೂರು ಶ್ರೀ ವೇದವಿಜ್ಞಾನ ಕೇಂದ್ರದ ಶ್ರೀ ಕೆ.ಎಸ್. ನಿತ್ಯಾನಂದ ಸ್ವಾಮೀಜಿ ನುಡಿದರು.

ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜ ಪಟ್ಟಾಭಿಷೇಕ ಮಹೋತ್ಸವದಂಗವಾಗಿ ಜೋಗಿ ಮಠ ಪರಿಸರದ ಶ್ರೀ ಸಿದ್ಧಗುರು ಸುಂದರನಾಥ ವೇದಿಕೆಯಲ್ಲಿ ನಡೆದ ನಾಲ್ಕನೇ ದಿನದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಪ್ರಚಾರವಿಲ್ಲದ ಪಂಥ ನಾಥಪಂಥ. ಸರಳ ಬದುಕು ಹೇಳಿಕೊಡುವ ನಾಥಪಂಥ ಕ್ರಮ ಪುಸ್ತಕ ರಹಿತ ಜೀವನ ಎಂದರು.

ತನ್ನ ಬದುಕು ಎಲ್ಲರಿಗಾಗಿ ಎಂಬುದು ನಾಥ ಪಂಥದ ಸಿದ್ಧಾಂತ. ಸರಳ ಬದುಕು ಮತ್ತು ತ್ಯಾಗ ಜೀವನವೇ ನಾಥಪಂಥದ ಸಾಧುಗಳ ಜೀವನಕ್ರಮ. ತ್ಯಾಗ, ಸಹಿಷ್ಣುತೆ ಮತ್ತು ಸರಳವಾಗಿ ಬದುಕಿ ತೋರಿಸುತ್ತಾರೆ. ಅದರಿಂದಲೇ ವಿಶ್ವವನ್ನು ಜಯಿಸಬಲ್ಲರು ಎಂದು ಹೇಳಿದರು.

ಸಾನಿಧ್ಯ ವಹಿಸಿ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಉಪ್ಪಳ ಶ್ರೀ ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತಿ ಶ್ರೀ
ಸಂತರು, ಸೈನಿಕರು ಪೂಜನೀಯರು. ಇವರ ಬಗ್ಗೆ ಸಮಾಜ ಹೆಚ್ಚೆಚ್ಚು ತಿಳಿದುಕೊಳ್ಳಬೇಕು, ಗೌರವಿಸಬೇಕು. ಆಗ ಸಮಾಜಕ್ಕೆ ಶಕ್ತಿ ಬರುತ್ತದೆ ಎಂದರು.

ಇಂದು ಕಲಿಯುಗ. ಹೀಗಾಗಿ ನಮ್ಮ ಮನಸ್ಸಿನಲ್ಲಿ ವಿಚಾರ ಸಂಘರ್ಷವಿರುತ್ತದೆ. ಆಧ್ಯಾತ್ಮ ವಿಚಾರಕ್ಕೆ ಬದ್ಧರಾದಾಗ ಮನಸ್ಸಿಗೆ ಉತ್ತಮ ಸಂಸ್ಕಾರ ದೊರೆತು ಮಾನಸಿಕ ಅಶಾಂತಿಯನ್ನು ದೂರವಾಗುತ್ತದೆ ಎಂದು ಹೇಳಿದರು.

ಮಂಗಳೂರು ದಕ್ಷಿಣ ಶಾಸಕ ಜೆ. ಆರ್. ಲೋಬೊ ಅಧ್ಯಕ್ಷತೆ ವಹಿಸಿದ್ದರು.

ಹೊಸ ದಿಗಂತ ಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಎಸ್. ಪ್ರಕಾಶ್, ಒಡಿಯೂರು ಶ್ರೀ ಗುರುದೇವ ಗ್ರಾಮ ವಿಕಾಸ ಯೋಜನೆಯ ಸಂಚಾಲಕ ಟಿ. ತಾರನಾಥ ಕೊಟ್ಟಾರಿ, ಕಾರ್ಪೊರೇಟರ್ ರೂಪ ಡಿ. ಬಂಗೇರ, ಶ್ರೀ ಗುರುದೇವ ಸೇವಾ ಬಳಗ ಮಂಗಳೂರು ವಲಯ ಅಧ್ಯಕ್ಷ ಜಯಂತ್ ಜೆ. ಕೋಟ್ಯಾನ್, ಮಂಗಳಾದೇವಿ ಗೀತಾ ಇಲೆಕ್ಟ್ರಿಕಲ್ಸ್‌ನ ಅಶೋಕ್ ಕುಮಾರ್ ಬಿ. ಮುಖ್ಯ ಅತಿಥಿಗಳಾಗಿದ್ದರು.

ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ, ಸಲಹೆಗಾರ ಎಂ. ರಾಮಚಂದ್ರ, ಜೆ. ಪಿ. ಗಂಗಾಧರ, ಮುಂಬೈ ಜೋಗಿ ಸಮಾಜದ ಮುಂದಾಳು ಬಾಲಕೃಷ್ಣ ಜೋಗಿ, ಮಾಜಿ ಮೇಯರ್ ದಿವಾಕರ್, ಜೋಗಿ ಸಮಾಜ ಮಹಿಳಾ ಘಟಕದ ಅಧ್ಯಕ್ಷೆ ಅಮಿತಾ ಸಂಜೀವ್, ಗೋರಕ್ಷನಾಥ್ ಯುವ ವೇದಿಕೆ ಅಧ್ಯಕ್ಷ ಮಿತಾಶ್ ಜೋಗಿ ಉಪಸ್ಥಿತರಿದ್ದರು.

ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜಪಟ್ಟಾಭಿಷೇಕ ಮಹೋತ್ಸವ ಸಮಿತಿ ಅಧ್ಯಕ್ಷ ಎಚ್. ಕೆ. ಪುರುಷೋತ್ತಮ್ ಸ್ವಾಗತಿಸಿ, ಸುಧಾ ನಾಗೇಶ್ ಕಾರ್ಯಕ್ರಮ ನಿರ್ವಹಿಸಿದರು.

ಬಳಿಕ ಪಿ. ಕೆ. ಗಣೇಶ್ ಪುತ್ತೂರು ಮತ್ತು ಬಳಗದಿಂದ ಸ್ಯಾಕ್ಸೋಫೋನ್ ಕಚೇರಿ ನಡೆಯಿತು.