ಬದಿಯಡ್ಕ : ಟ್ಯಾಕ್ಸಿ ಡ್ರೈವರುಗಳು ಸದಾ ಪೋಲೀಸರೊಂದಿಗೆ ಸಹಕರಿಸುತ್ತಿರಬೇಕು. ತಮ್ಮ ನಿಲ್ದಾಣಗಳಲ್ಲಿ ಏನೇ ನಡೆದರೂ ಅದನ್ನು ಪೋಲೀಸರಿಗೆ ತಿಳಿಸಬೇಕು. ನೀವು ನಮ್ಮ ಕಣ್ಣಾಗಿರಬೇಕು ಎಂದು ಬದಿಯಡ್ಕ ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ದಾಮೋದರನ್ ಅವರು ನುಡಿದರು.
ಅವರು ಗುರುವಾರ ಬದಿಯಡ್ಕ ಎಂ.ಎಸ್. ಆಡೊಟೋರಿಯಂನಲ್ಲಿ ಜನಮೈತ್ರಿ ಪೋಲೀಸ್ ಸ್ಟೇಶನ್‌ನ ನೇತೃತ್ವದಲ್ಲಿ ಟ್ಯಾಕ್ಸಿ ಚಾಲಕರಿಗಾಗಿ ನಡೆದ ತಿಳುವಳಿಕಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅವರು ಮಾತನಾಡಿ ಮನೆಯವರು ನಮ್ಮ ಬರುವಿಕೆಯನ್ನು ಎದುರುನೋಡುತ್ತಿರುತ್ತಾರೆ. ನಾವು ಸುರಕ್ಷಿತರಾಗಿ ವಾಹನ ಚಲಾಯಿಸಿ ಸದಾ ಸಂತಸವನ್ನೇ ನೀಡಬೇಕೆಂಬ ಆಕಾಂಕ್ಷೆ ಇರಬೇಕು. ಕಾನೂನನ್ನು ಗೌರವಿಸಿ, ಪೊಲೀಸ್ ಹೆಲ್ಪ್ ಲೈನ್ ನಂಬರುಗಳನ್ನು ಸರಿಯಾಗಿ ಉಪಯೋಗಿಸಿ ಎಂದು ಹೇಳಿದರು.
ಹಿರಿಯ ಟ್ಯಾಕ್ಸಿ ಚಾಲಕ ಪ್ರಭಾಕರನ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾಸರಗೋಡು ಮೋಟಾರು ವಾಹನ ಇಲಾಖೆಯ ಇನ್ಸ್‌ಪೆಕ್ಟರ್ ರಾಜೀವನ್ ಅವರು ತಿಳುವಳಿಕಾ ಶಿಬಿರವನ್ನು ನಡೆಸಿಕೊಟ್ಟರು. ಅವರು ಮಾತನಾಡಿ ನಿಯಮಗಳನ್ನು ಗಾಳಿಗೆ ತೂರಿ ವಾಹನ ಚಲಾಯಿಸಬಾರದು. ಮಧ್ಯಪಾನವನ್ನು ಮಾಡಿ ವಾಹನ ಚಲಾಯಿಸಬೇಡಿ. ಹಿರಿಯ ನಾಗರಿಕರನ್ನು ಹಾಗೂ ಸ್ತ್ರೀಯರನ್ನು ಅತೀ ಸುರಕ್ಷಿತವಾಗಿ ಅವರು ತಿಳಿಸುವ ಸ್ಥಳಕ್ಕೆ ತಲುಪಿಸುವ ಜವಾಬ್ದಾರಿ ನಿಮಗಿದೆ ಎಂದು ವಾಹನ ಚಾಲಕರಿಗೆ ಕಿವಿಮಾತು ಹೇಳಿದರು.
ಜನಮೈತ್ರಿ ಪೋಲೀಸ್‌ನ ಅಜಯ ಕುಮಾರ್ ಸ್ವಾಗತಿಸಿ,ವಂದಿಸಿದರು.
Click this button or press Ctrl+G to toggle between Kannada and English