- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬಹುಮುಖ ಪ್ರತಿಭಾನ್ವಿತ ಪೆರ್ಲದ ಸನ್ನಿಧಿ ಟಿ.ರೈಗೆ ಪ್ರಧಾನಿಯಿಂದ ಶುಭಾಶಯ ಪತ್ರ

Sannidi Rai [1]

ಪೆರ್ಲ : ಲಲಿತ ಕಲೆ, ಸಾಹಿತ್ಯ, ಸಂಗೀತಗಳಲ್ಲಿ ಬಹುಮುಖ ಪ್ರತಿಭೆಯಾಗಿ ಬೆಳೆದು ಬರುತ್ತಿರುವ ಪೆರ್ಲದ ಸನ್ನಿಧಿ ಟಿ.ರೈ ಎಂಬ ಹನ್ನೊಂದರ ಹರೆಯದ ಪುಟಾಣಿಗೆ ಭಾರತದ ಶ್ರೇಷ್ಠ ಪ್ರಧಾನಿಗಳಲ್ಲಿ ಒರ್ವರಾದ ನರೇಂದ್ರ ಮೋದಿ ನೇರಾ ಶುಭಾಶಯಪತ್ರ ಕಳುಹಿಸುವ ಮೂಲಕ ತನ್ನ ಬಿಡುವಿಲ್ಲದ ಕರ್ತವ್ಯದ ನಡುವೆಯೂ ಎಳೆಯ ಪ್ರತಿಭೆಗಳತ್ತಲೂ ತನ್ನ ಪ್ರೀತಿ,ಕಾಳಜಿಯನ್ನು ವ್ಯಕ್ತಪಡಿಸಿ ಗಮನ ಸೆಳೆದಿದ್ದಾರೆ.

ಎಣ್ಮಕಜೆ ಗ್ರಾ.ಪಂ.ನ ಹಳ್ಳಿ ಪ್ರದೇಶವಾದ ಪೆರ್ಲಕ್ಕೂ ಪ್ರಧಾನ ಮಂತ್ರಿ ಕಾರ್ಯಲಯದ ಡೆಲ್ಲಿಗೂ ಪತ್ರ ಮುಖೇನ ಅವಿನಭಾವ ಸಂಬಂಧವೇರ್ಪಡಿಸುವಲ್ಲಿ ಬದಿಯಡ್ಕ ಚಿನ್ಮಯ ಶಾಲೆಯ ೬ನೇ ತರಗತಿಯಲ್ಲಿ ಕಲಿಯುತ್ತಿರುವ ಸನ್ನಿಧಿ ಟಿ.ರೈ ಸಫಲಳಾಗಿದ್ದಾಳೆ. ಕಳೆದ ತಿಂಗಳು ಈಕೆ ಪ್ರಧಾನಿಯ ಕಾರ್ಯ ವೈಖರಿಯನ್ನು ಪ್ರಶಂಶಿಸಿ ಹಾಗೂ ಕೆಲವು ತನ್ನ ಆನಿಸಿಕೆಯ ಸಲಹೆ ಸೂಚನೆಗಳನ್ನು ಬರೆದು ನೇರವಾಗಿ ಮೋದಿಗೆ ಪತ್ರ ಕಳುಹಿಸಿದ್ದಳು. ಇದಕ್ಕೆ ಸಕಾಲಿಕವಾಗಿ ಪ್ರಧಾನಿಯೇ ಶುಭಾಶಯ ಹೇಳಿ ಮರು ಕಾಗದ ಕಳುಹಿಸಿರುವುದು ಇದೀಗ ಈ ಬಾಲ ಪ್ರತಿಭೆಯ ಸ್ಪೂರ್ತಿಗೊಂದು ಪ್ರೇರಣೆಯಾಗಿದೆ. ಆಂಗ್ಲ ಭಾಷೆಯಲ್ಲಿ ಬರೆದ ಪ್ರಸ್ತುತ ಪತ್ರದ ಕೊನೆಯಲ್ಲಿ ಸನ್ನಿಧಿ ಹೀಗೆ ಬರೆದಿದ್ದಳು ’ಕೆಲಸ ಕಾರ್ಯಗಳ ಅತ್ಯಂತ ಒತ್ತಡದಿಂದಿರುವ ಪ್ರಧಾನಿಗಳಾದ ತಾವು ಪುಟಾಣಿಯೊಬ್ಬಳ ಪತ್ರಕ್ಕೆ ಉತ್ತರಿಸುವ ಮನಸ್ಥಿತಿ ನಿಮ್ಮದಾಗಬೇಕೆಂದಿಲ್ಲ, ಆದರೆ ಭಾರತದ ಪೌರ ಎನ್ನುವ ದೃಷ್ಠಿಯಲ್ಲಿ ನಿಮಗೊಂದು ಪತ್ರ ಬರೆಯುವ ಅವಕಾಶ ನನಗಿದೆಯಲ್ಲ ಇದರಿಂದ ನಾನು ನನ್ನ ಕರ್ತವ್ಯವನ್ನಷ್ಟೆ ಮಾಡಿದ್ದೇನೆ ಎಂದಿದ್ದಳು. ಪತ್ರದಲ್ಲಿ ತಾನು ಸ್ವದೇಶ ವಸ್ತುಗಳ ಬಳಕೆ ಮಾಡುವ ಬಗ್ಗೆ ಹಾಗೂ ಸ್ವಚ್ಛ ಭಾರತ ಅಭಿಯಾನದಲ್ಲಿ ಕೈಜೋಡಿಸುವ ಸಣ್ಣ ಪುಟ್ಟ ಪ್ರಯತ್ನದ ಬಗ್ಗೆ ವಿವರಿಸಿದ್ದಳು.

ಭಾರತದಲ್ಲಿನ ಕೃಷಿ ಕ್ಷೇತ್ರದ ಬೆಳವಣಿಗೆ,ಊರಿಗೊಂದು ಪುಸ್ತಕಾಲಯ ಸ್ಥಾಪಿಸಿ ಜ್ಞಾನ ಸಂಪತ್ತನ್ನು ಹೆಚ್ಚಿಸುವ ಬಗ್ಗೆ ಹಾಗೂ ಸ್ವಚ್ಛ ಭಾರತದ ಅಭಿಯಾನ,ಸ್ವದೇಶಿ ವಸ್ತುಗಳ ಬಳಕೆಯ ಬಗ್ಗೆ ಮತ್ತು ಮುಂದೆ ತಾನು ಐ.ಎ.ಎಸ್ ಕಲಿತು ದೇಶ ಸೇವೆ ಮಾಡಬೇಕೆಂಬ ತನ್ನ ಊಹೆಗೆ ನಿಲುಕಿದ ಒಂದಷ್ಟು ಅಭಿಪ್ರಾಯಗಳನ್ನು ಬರೆದು ಸನ್ನಿಧಿ ಪ್ರಧಾನಿಗೆ ಪತ್ರ ಕಳುಹಿಸಿದ್ದಳು. ಇದರಲ್ಲಿ ಕೃಷಿಗೆ ,ಸ್ವಚ್ಛ ಭಾರತಕ್ಕೆ ಕಳೆದ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿತ್ತು ಎಂದು ಪ್ರಧಾನಿ ಸೂಚಿಸಿದ್ದಾರೆ. ದೇಶದ ಅಭಿವೃದ್ಧಿಗೆ ಪೂರಕವಾದ ಸಲಹೆಗಳನ್ನು ಪುಟಾಣಿಗಳು ನೀಡಿದರೂ ಸ್ವೀಕರಿಸುವ ದೊಡ್ಡ ಮನಸ್ಸು ಪ್ರಧಾನಿಯವರದ್ದು ಎಂದು ಇದರಿಂದ ಮನದಟ್ಟಾಗಿದೆ.