- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮತ್ತೆ ತೀವ್ರಗೊಂಡ ಕಾಡಾನೆ ಹಾವಳಿ-ಜೀವನ ಪರ್ಯಂತರದ ಕೃಷಿ ಕಣ್ಣೆದುರೇ ವ್ಯರ್ಥ

waild Elephant [1]

ಮುಳ್ಳೇರಿಯಾ: ಕೃಷಿಯನ್ನು ತಪಸ್ಸಿನಂತೆ ಸ್ವೀಕರಿಸಿ ಜೀವನ ಪರ್ಯಂತರದ ಸಾಧನೆ,ಸಾಮರ್ಥ್ಯವನ್ನು ಧಾರೆಯೆರೆದು ಪೋಶಿಸಿ ಬೆಳೆಸಿದ ಬೆಳೆ ನಿಮಿಷಗಳಲ್ಲಿ ನಾಶವಾಗುವುದನ್ನು ಯಾವ ಕೃಷಿಕನೂ ಸಹಿಸಲಾರ. ಆದರೆ ಇಂತಹ ನೋವುಗಳನ್ನು ಕಳೆದ ಹಲವು ವರ್ಷಗಳಿಂದ ಅನುಭವಿಸುತ್ತಿರುವ ನೂರಾರು ಕೃಷಿ ಕುಟುಂಬ ಸಮಸ್ಯೆಗಳನ್ನು ಅನುಭವಿಸುತ್ತಾ ಕಣ್ಣೀರಿಡುತ್ತಿರುವುದು ಮುಂದುವರಿದಿದೆ.

ಮುಳ್ಳೇರಿಯಾ ಸಮೀಪದ ಕೊಟ್ಟಂಗುಳಿಯ ಇ.ರಾಘವನ್ ನಾಯರ್ ರವರ ತೋಟಕ್ಕೆ ಭಾನುವಾರ ಮುಂಜಾನೆ ನುಗ್ಗಿದ ಕಾಡಾನೆಗಳ ಹಿಂಡು ಭೀಕರ ಧಾಳಿ ನಡೆಸಿ ಲಕ್ಷಾಂತರ ರೂ.ಗಳ ಕೃಷಿ ನಾಶಗೈದಿದೆ. 2 ಮರಿ ಆನೆಗಳ ಜೊತೆಗೆ 6 ದೊಡ್ಡ ಕಾಡಾನೆಗಳು ಧಾಳಿ ನಡೆಸಿ ವ್ಯಾಪಕ ನಾಶಕ್ಕೆ ಕಾರಣವಾಗಿದೆ.ಸುಮಾರು 120 ಕ್ಕಿಂತಲೂ ಅಧಿಕ ಕಂಗು,30 ತೆಂಗು ಸಹಿತ ಬಾಳೆ ಗಿಡಗಳನ್ನು ಕಾಡಾನೆಗಳು ಪುಡಿಗಟ್ಟಿದವು. ಇವರ ತೋಟದ ಪಕ್ಕದ ಮಾಧವನ್ ನಾಯರ್ ಮತ್ತು ಕೃಷ್ಣ ನಾಯರ್ ರವರ ತೋಟಗಳಿಗೂ ನುಗ್ಗಿ ಆನೆಗಳು ಪುಂಡಾಟ ಮೆರೆದಿವೆ.

ಕಳೆದ ಒಂದು ವಾರಗಳಿಂದ ಇದೇ ಪರಿಸರದಲ್ಲಿ ಸುತ್ತಿರುವ ಕಾಡಾನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಮಧ್ಯರಾತ್ರಿಯ ತನಕ ಬೆಂಕಿಗಳನ್ನುರಿಸಿ ಹಾಗೂ ಸಿಡಿಮದ್ದುಗಳನ್ನು ಸಿಡಿಸಿ ನಿಯಂತ್ರಣ ಕ್ರಮ ಕೈಗೊಳ್ಳುತ್ತಿವೆ. ಆದರೆ ಭಾನುವಾರ ಮುಂಜಾನೆಯ ವೇಳೆಗೆ ಧಾಳಿ ನಡೆಸಿರುವುದು ಇದೇ ಮೊದಲ ಬಾರಿಯಾಗಿದೆ.
ಪಾಣೂರು,ಕೊಳತ್ತಿಂಗಲ್,ಕೊಟ್ಟಂಗುಳಿ,ಆದೂರು,ಮುಳಿಯಾರು,ಕಾನತ್ತೂರು ಸಹಿತ ದೇಲಂಪಾಡಿ ಪ್ರದೇಶದ ಪಾಂಡಿ ಮೊದಲಾದೆಡೆಗಳಲ್ಲಿ ಕಳೆದೊಂದು ವರ್ಷದಲ್ಲಿ 100 ಎಕ್ರೆಗಿಂತಲೂ ಅಧಿಕ ಕೃಷಿ ಭೂಮಿ ಕಾಡಾನೆಗಳ ಧಾಳಿಗೆ ನಾಶವಾಗಿದೆ.ಅರಣ್ಯ ಇಲಾಖೆಯ ಸತತ ಸಾಮಾನ್ಯ ನಿಯಂತ್ರಣ ಕ್ರಮಗಳ ಹೊರತಾಗಿಯೂ ಕಾಡಾನೆಗಳ ನಿಯಂತ್ರಣಕ್ಕೆ ಆಧುನಿಕ ವ್ಯವಸ್ಥೆಗಳು ಇಲ್ಲದಿರುವುದು ಸಮಸಮ್ಯೆಯ ಮುಂದುವರಿಕೆಗೆ ಕಾರಣವಾಗಿದೆ.ತಳಿಪರಂಬದಲ್ಲಿ ಕಾರ್ಯಾಚರಿಸುವ ಆರ್‌ಆರ್‌ಟಿ ತಂಡವೊಂದೇ ಇಡೀ ಜಿಲ್ಲೆಯ ಕಾಡಾನೆ ನಿಯಂತ್ರಣಕ್ಕೆ ಇರುವ ತಂಡವಾಗಿದ್ದು,ವಿಶಾಲವಾಗಿ ವ್ಯಾಪಿಸಿರುವ ಮಲೆನಾಡ ಗಡಿ ಜಿಲ್ಲೆಗಳಾದ್ಯಂತ ಕಾರ್ಯಾಚರಿಸುವಲ್ಲಿ ಈ ತಂಡ ಸೋತಿದೆ.ಕರ್ನಾಟಕ ಅರಣ್ಯ ವ್ಯಾಪ್ತಿಯನ್ನು ಗಡಿಯಾಗಿ ಹೊಂದಿರುವ ದೇಲಂಪಾಡಿ,ಆದೂರು,ಪಾಂಡಿ,ಕಾನತ್ತೂರು,ಬೇಡಡ್ಕ,ಮುಳಿಯಾರ್ ಅರಣ್ಯ ಪ್ರದೇಶಗಳ ಕಾಡಾನೆ ನಿಯಂತ್ರಣಕ್ಕೆ ಸರಕಾರ ಡಿಟ್ಟ ಕ್ರಮಗಳನ್ನು ಇನ್ನಾದರೂ ಕೈಗೊಳ್ಳದಿದ್ದರೆ ಜನರ ಪ್ರಾಣಕ್ಕೂ ಕಂಟಕವಾಗಲಿದೆ.