- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಚೆನ್ನಮ್ಮ ಐಪಿಎಸ್ ವಿಮರ್ಶೆ

Chennamma IPS/ಚೆನ್ನಮ್ಮ ಐ.ಪಿ. ಎಸ್ [1]“ನಾನು ಖಾಕಿ ಹಾಕಿರೋದು ಶೋಕಿಗಲ್ಲ…ಗನ್ ಹಿಡಿದಿರೋದು ಅಲಂಕಾರಕ್ಕಲ್ಲ…ಅನ್ಯಾಯಕ್ಕೆ ಹಳ್ಳತೋಡಿ ಸಮಾಧಿ ಕಟ್ಟೋಕೆ…ನ್ಯಾಯದ ಬಾವುಟ ಹಾರಿಸೋಕೆ…” ಎಂದು ಚೆನ್ನಮ್ಮ ಅಬ್ಬರಿಸಿದರೆ ಸಾಕು ಎದುರಾಳಿಗಳ ಚಡ್ಡಿ ಒದ್ದೆಮುದ್ದೆಯಾಗುತ್ತದೆ. ಸಾಹಸ ಪ್ರಿಯರಿಗೆ ಚಿತ್ರಮಂದಿರದಲ್ಲೇ ದೀಪಾವಳಿ. ಚೆನ್ನಮ್ಮ ಐಪಿಎಸ್ ಚಿತ್ರದಹೈಲೈಟ್‌ಗಳು ಒಂದೆರಡಲ್ಲ. ಅದಿಯಿಂದ ಅಂತ್ಯದವರೆಗೂ ಜಯಹೇ ಜಯ ಜಯ ಜಯಹೇ. ಚೆನ್ನಮ್ಮ ಫಸ್ಟ್ ವಾರ್ನ್ ಮಾಡ್ತಾರೆ. ಬದಲಾದರೆ ಸಂತೋಷ. ಇಲ್ಲಾಂದ್ರೆ ವಾರ್. ಸತ್ತರೂ ಸಂತೋಷ…ಬದುಕಾ ಸಾವಾ? ನೀನೆ ಡಿಸೈಟ್ ಮಾಡು ಎನ್ನುತ್ತಿದ್ದರೆ ರೌಡಿಗಳು ಮನಸ್ಸಿನಲ್ಲೇ ಜನಗಣ ಮನ ಜಪಿಸುತ್ತಾರೆ.ರಫ್ ಅಂಡ್ ಟಫ್ ಪೊಲೀಸ್ ಅಧಿಕಾರಿಣಿಯಾಗಿ ಲೇಡಿ ಬ್ರೂಸ್ಲಿ ಖ್ಯಾತಿಯ ಅಯಿಷಾ ಗಮನಸೆಳೆಯುತ್ತಾರೆ. ಚೆನ್ನಮ್ಮನ ಹೋರಾಟ ಕೇವಲ ಲೋಕಲ್ ರೌಡಿಗಳ ವಿರುದ್ಧ ಅಷ್ಟೆ ಅಲ್ಲ. ಅನ್ಯಾಯ, ಭ್ರಷ್ಟಾಚಾರ ಕಂಡರೂ ಬೆಲ್ಟ್ ಬಿಚ್ಚುತ್ತಾರೆ.ಲಂಚ ಕೋರರನ್ನು ಸಾವಿನ ಮಂಚಕ್ಕೆ ಅಟ್ಟ್ಟುತ್ತಾಳೆ. ನಟಿ ಮಾಲಾಶ್ರೀಯೇ ಮೈಮೇಲೆ ಬಂದಂತೆ ಆಡುತ್ತಾರೆ. ಜೀವನದಲ್ಲಿ ಸಾಕಷ್ಟು ಹೊಡೆದ ತಿಂದ ಚೆನ್ನಮ್ಮ ಪೆಟ್ಟುತಿಂದ ಹುಲಿಯಂತಾಗುತ್ತಾಳೆ. ಪ್ರಾಮಾಣಿಕ ಪೊಲೀಸ್ ಅಧಿಕಾರಿಣಿಯಾದ ಚೆನ್ನಮ್ಮ ರಫ್ ಅಂಡ್ ಟಪ್ ಆಗಲು ಕಾರಣ ಏನು ಎಂಬಲ್ಲಿಗೆ ಕತೆ ಫ್ಲ್ಯಾಶ್ ಬ್ಯಾಕ್‌ಗೆ ಹೊರಳುತ್ತದೆ. ರಾಮನಗರದ ಅಪ್ಪಣ್ಣ ಹಾಗೂ ಅವನ ಮಗನ ವಿರುದ್ಧ ಚೆನ್ನಮ್ಮ ಕೆರಳಿದ ಸರ್ಪದಂತಾಗುತ್ತಾಳೆ. ಅಪ್ಪಣ್ಣ ಹಾಗೂ ಅವರ ಚೇಲಾಗಳು ಚೆನ್ನಮ್ಮನ ಕುಟುಂಬವನ್ನು ಸರ್ವನಾಶ ಮಾಡುತ್ತಾರೆ. ಚೆನ್ನಮ್ಮನನ್ನು ಮುಗಿಸಲು ಪ್ಲಾನ್ ಮಾಡುತ್ತಾರೆ. ಆದರೆ ಚೆನ್ನಮ್ಮ ಅವರಿಗೆ ಚಳ್ಳೆಹಣ್ಣು ತಿನ್ನಿಸಿ ಪಾರಾಗುತ್ತಾಳೆ. ಅಪ್ಪಣ್ಣನ ವಿರುದ್ಧ ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಲು ಕಂಕಣಕಟ್ಟುತ್ತಾಳೆ. ತನ್ನ ಹೋರಾಟದಲ್ಲಿ ಚೆನ್ನಮ್ಮ ಗೆಲ್ಲುತ್ತಾಳಾ ಇಲ್ಲವೆ ಎಂಬುದು ಚಿತ್ರದಕುತೂಹಲಭರಿತ ಅಂಶ. ಚಿತ್ರದಲ್ಲಿನ ಏಳೆಂಟು ಆಕ್ಷನ್ ಸೀನ್‌ಗಳನ್ನು ನೋಡಲು ಎರಡು ಕಣ್ಣು ಸಾಲದು. ಚಿತ್ರದ ನಿರ್ದೇಶಕ ಆನಂದ್ ಪಿ ರಾಜು ಪ್ರೇಕ್ಷಕರಿಗೆ ನಿರಾಶೆ ಮೂಡಿಸದಂತೆ ಚಿತ್ರಕತೆಯನ್ನೂ ಹೆಣೆದಿದ್ದಾರೆ. ಚಿತ್ರದ ಮೊದಲಾರ್ಧ ಒಂಚೂರು ಜಗ್ಗಿದಂತೆ ಕಂಡರೂ ದ್ವಿತೀಯಾರ್ಧದಲ್ಲಿ ಜಗ್ಗಿನಕ್ಕ ಜಗ್ಗಿನಕ್ಕ. ಅಪ್ಪಣ್ಣನಾಗಿ ಮಂಡ್ಯ ನಾಗರಾಜ್ ಪಾತ್ರ ಗಮನಸೆಳೆಯುತ್ತದೆ. ಅವರ ಸಂಭಾಷಣೆ, ಹೊಸ ಶೈಲಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಪಿ ಎನ್ ಸತ್ಯ, ಅಶೋಕ್, ಶಂಕರ್ ಅಶ್ವತ್ಥ್, ಪದ್ಮವಾಸಂತಿ ಮುಂತಾದವರು ಓಕೆ. ಆದರೆ ಚಿತ್ರದಲ್ಲಿ ಹಾಡುಗಳೇ ಇಲ್ಲದಿರುವುದು ಒಂಥರಾ ಕೊರತೆಯಂತೆ ಕಾಣುತ್ತದೆ. ಅಯಿಷಾ ಅವರ ಒನ್ ವುಮನ್ ಶೋ ಸಾಹಸಪ್ರಿಯರಿಗೆ ದೀಪಾವಳಿ ಹೋಳಿ ಒಟ್ಟಿಗೆ ಆಚರಿಸಿದಂತೆ. -ದಟ್ಸ್ ಕನ್ನಡ