- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಐಷಾರಾಮಿ ಕಳ್ಳರು : ಕಾರಲ್ಲಿ ತೆರಳಿ ಕಳವು ನಡೆಸುವ ಮೂವರ ಬಂಧನ

thieves [1]ಬದಿಯಡ್ಕ: ರಾತ್ರಿ ಹೊತ್ತು ಕಾರಲ್ಲಿ ಸಂಚರಿಸಿ ಅಡಿಕೆ ಸಹಿತ ಕೃಷಿ ಉತ್ಪನ್ನಗಳನ್ನು ಕಳವು ನಡೆಸುವ ತಂಡದ ಮೂವರು ಐಷಾರಾಮಿ ಕಳ್ಳರನ್ನು ಬದಿಯಡ್ಕ ಪೋಲೀಸರು ಬಂಧಿಸಿದ್ದಾರೆ.

ನೆಲ್ಲಿಕಟ್ಟೆ ಮೀನಾಡಿಪಳ್ಳದ ಅಬ್ದುಲ್ ರಹಿಮಾನ್(58),ಮಂಗಳೂರು ಜೋಕಟ್ಟೆಯ ಉಮರುಲ್ ಫಾರೂಖ್(44),ಉಳ್ಳಾಲ ಬಿ.ಸಿ.ರೋಡಿನ ಮೊಹಮ್ಮದ್ ಹನೀಫಾ(45)ಎಂಬವರನ್ನು ಬಂಧಿಸಲಾಗಿದೆ.

ಬದಿಯಡ್ಕ ಬಾರಡ್ಕ ನಿವಾಸಿ, ಬದಿಯಡ್ಕದ ವ್ಯಾಪಾರಿ ಯೂಸುಫ್ ರವರ ಮನೆ ಬಳಿಯ ಅಡಿಕೆ ಕಳವು ನಡೆಸಲೆತ್ನಿಸಿದ ಪ್ರಕರಣದಲ್ಲಿ ಈ ಮೂವರನ್ನು ಬಂಧಿಸಲಾಗಿದೆ.ಜೂ.23 ರಂದು ರಾತ್ರಿ ಇನ್ನೋವಾ ಕಾರಲ್ಲಿ ಬಂದಿದ್ದ ಈ ಮೂವರ ತಂಡ ಬಾರಡ್ಕ ತಲಪಿ ಯೂಸುಫ್ ರ ಮನೆ ಬಳಿಯ ಶೆಡ್ ನ ಬೀಗ ಮುರಿದು ಅಡಿಕೆ ಕಳವಿಗೆತ್ನಿಸಿದ್ದರು. ಕಾರಲ್ಲಿ 6 ಚೀಲ ಅಡಿಕೆ ತುಂಬಿಸುತ್ತಿರುವಂತೆ ಕಾರು ಪಕ್ಚರ್ ಆದ್ದರಿಂದ ಕಳವು ಯತ್ನ ವಿಫಲಗೊಂಡಿತ್ತು. ಈ ವೇಳೆ ಮನೆಯವರು ಎಚ್ಚೆತ್ತ ಕಾರಣ ಕಳವುಗೈಯ್ಯಲು ಬಂದವರು ಪರಾರಿಯಾಗಿದ್ದರು. ಆದರೆ ಈ ವೇಳೆ ಕಾರಿನ ಅರ್ ಸಿ ಬಿದ್ದುಹೋಗಿತ್ತು. ಬಳಿಕ ಪೋಲೀಸರು ತಪಾಸಣೆ ನಡೆಸುತ್ತಿದ್ದಾಗ ಬಿದ್ದುಹೋದ ಆರ್ ಸಿ ಲಭ್ಯವಾಗಿದ್ದು,ಇದರ ಆಧಾರದಲ್ಲಿ ತನಿಖೆ ನಡೆಸಿದಾಗ ಆರೋಪಿಗಳ ಪತ್ತೆಕಾರ್ಯ ಸುಲಭವಾಯಿತು.ಕಾರಿನ ಆರ್ ಸಿ ಮಾಲಕ ಮಂಗಳೂರಿನ ನಿವಾಸಿಯಾಗಿದ್ದು,ಈತ ಉಳ್ಳಾಲ ಮೊಹಮ್ಮದ್ ಹನೀಪಾನ ಸ್ನೇಹಿತನಾಗಿದ್ದಾನೆ. ಮಂಗಳೂರು ಪೇಟೆಗೆ ತೆರಳಲು ಕಾರು ಬೇಕೆಂದು ಈತ ಸ್ನೇಹಿತನಿಂದ ಕಾರು ಪಡೆದಿದ್ದನೆಂದು ತನಿಖೆಯ ವೇಳೆ ತಿಳಿದುಬಂದಿದೆ.

ಬಳಿಕ ಪೋಲೀಸರು ನಡೆಸಿದ ತುರ್ತು ಕಾರ್ಯಾಚರಣೆಯಲ್ಲಿ ಅಬ್ದುಲ್ ರಹಿಮಾನ್ ನನ್ನು ನೆಲ್ಲಿಕಟ್ಟೆ ಮೀನಾಡಿಪಳ್ಳದ ವಸತಿಯಿಂದ,ಉಮರುಲ್ ಫಾರೂಖ್ ಹಾಗೂ ಮೊಹಮ್ಮದ್ ಹನೀಫ್ ನನ್ನು ಮಂಗಳೂರು ಬಂದರು ಪರಿಸರದಿಂದ ಬಂಧಿಸಲಾಯಿತು.ಬಂಧಿತರ ಪೈಕಿ ಅಬ್ದುಲ್ ರಹಿಮಾನ್ ವಿರುದ್ದ ಬದಿಯಡ್ಕ,ಆದೂರು,ಕಾಸರಗೋಡು ಸಹಿತ ವಿವಿಧ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ.ಮತ್ತಿಬ್ಬರು ಆರೋಪಿಗಳ ವಿರುದ್ದವೂ ಮಂಗಳೂರಿನ ವಿವಿಧ ಠಾಣೆಗಳಲ್ಲಿ ದೂರುಗಳಿವೆಯೆಂದು ಪೋಲೀಸರು ತಿಳಿಸಿದ್ದಾರೆ.

ಬೃಹತ್ ಬಂಧನ ಕಾರ್ಯಾಚರಣೆಯಲ್ಲಿ ಬದಿಯಡ್ಕ ಠಾಣಾಧಿಕಾರಿ ದಾಮೋದರನ್,ಪೋಲೀಸರಾದ ಫಿಲಿಫ್ ಥೋಮಸ್,ವೇಲಾಯುಧನ್,ರಂಜಿತ್,ಶ್ರೀರಾಜ್ ನೇತೃತ್ವ ವಹಿಸಿದ್ದರು.