ಬದಿಯಡ್ಕ: ಸಹಪಾಠಿಗಳೊಂದಿಗೆ ಮಾನ್ಯದ ದೇವರಕೆರೆಯ ಕೆರೆ ನೀರಿನಲ್ಲಿ ಸ್ನಾನಕ್ಕಿಳಿದ ವೇಳೆ ಯುವಕ ಮುಳುಗಿ ಮೃತಪಟ್ಟಘಟನೆ ಭಾನುವಾರ ನಡೆದಿದೆ.
ಮಧ್ಯಾಹ್ನದ ವೇಳೆ ಸ್ನಾನಕ್ಕಿಳಿದು ಕಾಣದಾದ ಯುವಕನ ಮೃತದೇಹವನ್ನು ಪತ್ತೆಹಚ್ಚಲಾಗಿದೆ. ಎರಿಯಾಲ್ ಎಡಚ್ಚೇರಿಯ ಎ ಎಂ ಮಹಮ್ಮುದ್ ಸೈಫುನ್ನೀಸಾ ದಂಪತಿ ಪುತ್ರ ಶಿಯಾಸಿ(21) ಮೃತಪಟ್ಟ ದುರ್ದೈವಿ. ನೀರಿನಲ್ಲಿ ಮುಳುಗಿ ಮೃತಪಟ್ಟ ಯುವಕನ ಮೃತದೇಹವನ್ನು ಅಗ್ನಿಶಾಮಕ ದಳದ ಸಹಾಯದಿಂದ ಮೇಲಕ್ಕೆತ್ತಲಾಯಿತು.
ರಜಾದಿನ ಆದಿತ್ಯವಾರದಂದು ಸಹಪಾಠಿಗಳೊಂದಿಗೆ ಪುಟ್‌ಬಾಲ್ ಆಡಲು ತೆರಳಿದ್ದ ಶಿಯಾಸ್ ಆಟದ ನಂತರ ಸ್ನಾನ ಮಾಡಲೆಂದು ನೀರಿನ ಕೆರೆಗೆ ಇಳಿದಿದ್ದ ಎನ್ನಲಾಗಿದೆ, ಕೆರೆಯಲ್ಲಿ ಹೂಳಿದ್ದ ಕಾರಣ ಹಿಂದೆ ಬರಲು ಸಾಧ್ಯವಾಗಿಲ್ಲ.ಎಚ್ಚೆತ್ತ ಸ್ನೇಹಿತರು ತಕ್ಷಣವೇ ನಗರದ ಅಗ್ನಿಶಾಮಕ ದಳವನ್ನು ಸಂಪರ್ಕಿಸಿದ್ದಾರೆ, ಅಷ್ಟರೊಳಗೆ ಯುವಕ ಮೃತಪಟ್ಟಿದ್ದ .
ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ, ಸುದ್ದಿ ತಿಳಿದ ಮೃತ ಬಾಲಕನ ತಂದೆ ಕೊಲ್ಲಿ ರಾಷ್ಟ್ರದಿಂದ ಹೊರಟಿದ್ದು, ಊರಿಗೆ ತಲುಪಿದ ಕೂಡಲೇ ನಗರದ ಮಲಿಕ್ ದಿನಾರ್ ಮಸೀದಿ ಪರಿಸರದಲ್ಲಿ ಮೃತದೇಹವನ್ನು ದಫನ ಮಾಡಲಾಗುವುದು ಎಂದು ಸಂಬಂಧಿಕರು ತಿಳಿಸಿದ್ದಾರೆ.
ಇದು ಮೂರನೇ ಮರಣ
ಮಾನ್ಯ ಸನಿಹದ ದೇವರಕೆರೆ ಪಂಚಾಯತ್ ಕೆರೆಯಲ್ಲಿ ಈ ವರ್ಷ ಇದು ಮೂರನೇ ದುರ್ಮರಣವಾಗಿದ್ದು ಪ್ರತಿವರ್ಷ ಅಮಾಯಕ ಯುವಕರು ಸುಂದರವಾದ ಕೊಳದಿಂದ ಆಕರ್ಷಿತರಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ.ಬದಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಈ ಕೆರೆ ವಿಶಾಲವಾಗಿದ್ದು,ಕೆರೆಯ ಸುತ್ತಲೂ ಆವರಣ ಗೋಡೆಯಿಲ್ಲದೆ ಅಪಾಯಕ್ಕೆ ಕಾರಣವಾಗುತ್ತಿದೆ.
ರಜಾ ದಿನಗಳಲ್ಲಿ ಹಲವು ಯುವಕರು ಇತ್ತ ಈಜಾಡುವ ಹುಮ್ಮಸ್ಸಲ್ಲಿ ಆಗಮಿಸುತ್ತಿದ್ದು ಕೆರೆಯ ಆಳ ಅಗಲದ ಮಾಹಿತಿಯಿಲ್ಲದೆ ಜೀವ ಬಲಿಯಾಗುತ್ತಿವೆ.ಶೀಘ್ರ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಸಂರಕ್ಷಣಾ ಕ್ರಮ ನಡೆಸಬೇಕಿದೆ.
Click this button or press Ctrl+G to toggle between Kannada and English