- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಹದಾಯಿ ಹೋರಾಟ: ಲಾಠಿ ಪ್ರಹಾರಕ್ಕೆ ಸಂಬಂಧಪಟ್ಟಂತೆ ಒಬ್ಬ ಇನ್‌ಸ್ಪೆಕ್ಟರ್‌, 9 ಜನ ಪೊಲೀಸರು ಅಮಾನತು

Yamanooru [1]ಹುಬ್ಬಳ್ಳಿ: ಮಹದಾಯಿ ಹೋರಾಟದ ವೇಳೆ ಯಮನೂರಲ್ಲಿ ನಡೆದ ಲಾಠಿ ಪ್ರಹಾರಕ್ಕೆ ಸಂಬಂಧಪಟ್ಟಂತೆ ಒಬ್ಬ ಇನ್‌ಸ್ಪೆಕ್ಟರ್‌ ಸೇರಿದಂತೆ 9 ಜನ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಲಾಠಿ ಚಾರ್ಜ್‌ನ ವಿಡಿಯೋ ಹಾಗೂ ಧಾರವಾಡ ಎಸ್ಪಿ ನೀಡಿರುವ ವರದಿ ಆಧರಿಸಿ ಬೆಳಗಾವಿ ಉತ್ತರ ವಲಯದ ಐಜಿಪಿ ಡಾ.ಕೆ. ರಾಮಚಂದ್ರ ರಾವ್‌ ಅವರು 9 ಜನರನ್ನು ಅಮಾನತುಗೊಳಿಸಿ ಮಂಗಳವಾರ ಆದೇಶಿಸಿದ್ದಾರೆ.

ಧಾರವಾಡ ಜಿಲ್ಲೆಯ ನವಲಗುಂದ ಠಾಣಾಧಿಕಾರಿ ಅರುಣಕುಮಾರ ಹಪ್ಪಳಿ, ಇಬ್ಬರು ಪೇದೆಗಳು, ವಿಜಯಪುರ ಜಿಲ್ಲೆ ಇಬ್ಬರು, ಬೆಳಗಾವಿ ಜಿಲ್ಲೆಯ ನಾಲ್ವರು ಪೇದೆಗಳು ಸೇರಿ ಒಟ್ಟು 9 ಜನರನ್ನು ಅಮಾನತುಗೊಳಿಸಲಾಗಿದೆ ಎಂದು ಐಜಿಪಿ ರಾಮಚಂದ್ರರಾವ್‌ ತಿಳಿಸಿದ್ದಾರೆ.

ಧಾರವಾಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ನೀಡಿರುವ ವಿಡಿಯೋ ಹಾಗೂ ವರದಿ ಆಧರಿಸಿ ಇವರನ್ನೆಲ್ಲ ಅಮಾನತುಗೊಳಿಸಲಾಗಿದೆ. ಪೇದೆಗಳ ಹೆಸರುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಆಯಾ ಜಿಲ್ಲಾ ವರಿಷ್ಠಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮಹದಾಯಿ ನ್ಯಾಯಾಧಿಕರಣದಲ್ಲಿ ಕರ್ನಾಟಕದ ವಿರುದ್ಧ ತೀರ್ಪು ಬಂದಿದ್ದ ಪರಿಣಾಮ ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಸೇರಿ ವಿವಿಧೆಡೆ ರೈತರು ಪ್ರತಿಭಟನೆ ನಡೆಸಿದ್ದರು.

ಧಾರವಾಡ ಜಿಲ್ಲೆ ನವಲಗುಂದದಲ್ಲಿ ಹೋರಾಟ ತೀವ್ರವಾಗಿ ಹಿಂಸಾರೂಪಕ್ಕೆ ತಿರುಗಿತ್ತು. ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಬಳಿಕ ಮನೆಯಲ್ಲಿದ್ದ ಮಹಿಳೆಯರು, ಗರ್ಭಿಣಿಯರು, ವೃದ್ಧರು, ವಿದ್ಯಾರ್ಥಿಗಳ ಮೇಲೆಲ್ಲ ಪೊಲೀಸರು ಮನಸೋಚ್ಛೆ ಹಲ್ಲೆ ನಡೆಸಿದ್ದರು. ಇದರಿಂದ ಹಲವರು ಗಾಯಗೊಂಡಿದ್ದರು. ಈ ಬಗ್ಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿ ಪ್ರತಿಭಟನೆಗಳೆಲ್ಲ ನಡೆದಿದ್ದವು.

ಘಟನೆಗೆ ಸಂಬಂಧಪಟ್ಟಂತೆ ಗೃಹ ಸಚಿವ ಜಿ.ಪರಮೇಶ್ವರ್‌ ಕೂಡ ವಿಷಾದ ವ್ಯಕ್ತಪಡಿಸಿದ್ದುಂಟು. ಇದೀಗ ಒಬ್ಬ ಇನ್‌ಸ್ಪೆಕ್ಟರ್‌ ಸೇರಿದಂತೆ 9 ಜನರನ್ನು ಅಮಾನತುಗೊಳಿಸಲಾಗಿದೆ.