- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೊಲ್ಲೂರು ಮೂಕಾಂಬಿಕಾ ದೇವಿಯ ಲಕ್ಷಾಂತರ ರೂ. ಬೆಲೆಬಾಳುವ ಚಿನ್ನಾಭರಣ ಕ್ಷೇತ್ರಕ್ಕೆ ಹಸ್ತಾಂತರ

Kollur-Temple [1]ಕೊಲ್ಲೂರು: ಕೊಲ್ಲೂರು ಮೂಕಾಂಬಿಕಾ ದೇವಿಯ ಲಕ್ಷಾಂತರ ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ಕದ್ದು ವಿವಿಧ ಬ್ಯಾಂಕ್‌ ಹಾಗೂ ಲೇವಾದೇವಿ ಸಂಸ್ಥೆಗಳಲ್ಲಿ ಅಡವಿಟ್ಟಿದ್ದ ದೇಗುಲದ ನೌಕರ ಶಿವರಾಮ ಮಡಿವಾಳ ಅವರಿಂದ ವಶಪಡಿಸಿಕೊಳ್ಳಲಾದ 2 ಕಿ.ಜಿ. 289 ಗ್ರಾಂ. ಚಿನ್ನಾಭರಣಗಳನ್ನು ಪೊಲೀಸ್‌ ಅದಿಕಾರಿಗಳು ಸೋಮವಾರ ಕಾರ್ಯನಿರ್ವಹಣಾದಿಕಾರಿಯವರ ಸಮ್ಮುಖದಲ್ಲಿ ದೇಗುಲಕ್ಕೆ ಹಸ್ತಾಂತರಿಸಿದರು.

ಸುಮಾರು ರೂ. 75 ಲಕ್ಷಕ್ಕೂ ಮಿಕ್ಕಿ ಕಳವಾದ ಚಿನ್ನಾಭರಣಗಳ ಬಗ್ಗೆ ಪೊಲೀಸ್‌ ವರಿಷ್ಠಾದಿಕಾರಿ ಅಣ್ಣಾಮಲೈ ಮಾರ್ಗದರ್ಶನದಲ್ಲಿ ಅಂದಿನ ಡಿವೈ.ಎಸ್‌.ಪಿ. ಮಂಜುನಾಥ ಶೆಟ್ಟಿ, ಸರ್ಕಲ್‌ ಇನ್ಸ್‌ಪೆಕ್ಟರ್‌ ಸುದರ್ಶನ್‌, ಎಸ್‌.ಐ. ಶೇಖರ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು.

ಶಿವರಾಮ ಮಡಿವಾಳನನ್ನು ಪೊಲೀಸರು ವಿಚಾರಿಸಿದಾಗ ಆತ ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಅಡವಿಟ್ಟ ಚಿನ್ನಾಭರಣಗಳ ಬಗ್ಗೆ ಮಾಹಿತಿ ನೀಡಿದನಲ್ಲದೇ ದೇವಸ್ಥಾನದಲ್ಲಿ ಅಡಗಿಸಿಟ್ಟಿದ್ದ 430 ಗ್ರಾಂ ಚಿನ್ನಾಭರಣಗಳ ಬಗ್ಗೆಯೂ ಮಾಹಿತಿ ನೀಡಿದ್ದ.

ಅರೆಶಿರೂರಿನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿಟ್ಟಿದ್ದ 70 ಗ್ರಾಮ್‌ ಚಿನ್ನಾಭರಣದ ಬಗ್ಗೆ ಬ್ಯಾಂಕ್‌ ಅದಿಕಾರಿಗಳು ನ್ಯಾಯಾಲಯದಲ್ಲಿ ಹೋರಾಟ ನಡೆಸಿ ನ್ಯಾಯಾಲಯದ ಆದೇಶದಂತೆ ಅವುಗಳನ್ನು ಹಿಂದಕ್ಕೆ ಪಡೆದುಕೊಂಡಿರುತ್ತಾರೆ.

ಹಸ್ತಾಂತರಿಸಿದ ಸಂದರ್ಭದಲ್ಲಿ ಕಾರ್ಯನಿರ್ವಹಣಾದಿಕಾರಿ ಯೋಗೀಶ್ವರ್‌, ಉಪಕಾರ್ಯನಿರ್ವಹಣಾದಿಕಾರಿ ಕೃಷ್ಣಮೂರ್ತಿ, ಕೊಲ್ಲೂರು ಗ್ರಾ.ಪಂ. ಅಧ್ಯಕ್ಷ ವಿಶ್ವನಾಥ ಅಡಿಗ, ಚಿನ್ನಾಭರಣ ಮೌಲ್ಯಮಾಪಕ ಗಣೇಶ್‌ ಶೇಟ್‌ ಉಪಸ್ಥಿತರಿದ್ದರು.