ದೇಶದಲ್ಲಿ ಸಂಭವಿಸುವ ಅಪಘಾತ ಪ್ರಕರಣಗಳನ್ನು ಪರಿಗಣಿಸಿ ಕಠಿಣ ಕಾನೂನು ಕ್ರಮ ಜಾರಿ

11:15 AM, Thursday, August 4th, 2016
Share
1 Star2 Stars3 Stars4 Stars5 Stars
(No Ratings Yet)
Loading...

drink-and-driveಹೊಸದಿಲ್ಲಿ: ದೇಶದಲ್ಲಿ ವಾರ್ಷಿಕ ಸಂಭವಿಸುವ 5 ಲಕ್ಷ ಅಪಘಾತ ಪ್ರಕರಣಗಳಲ್ಲಿ 1.5 ಲಕ್ಷ ಜನ ಸಾವನ್ನಪ್ಪುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ, ರಸ್ತೆ ಅಪಘಾತಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಠಿನ ಕಾನೂನುಗಳನ್ನು ಒಳಗೊಂಡ ಮೋಟಾರು ಕಾಯ್ದೆ (ತಿದ್ದುಪಡಿ) ಮಸೂದೆ 2016ಕ್ಕೆ ಬುಧವಾರ ಅನುಮೋದನೆ ನೀಡಿದೆ.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರಿಗೆ 10,000 ರೂ. ವರೆಗೆ ದಂಡ, ಹಿಟ್‌ ಆ್ಯಂಡ್‌ ರನ್‌ ಕೇಸಲ್ಲಿ ಸಂತ್ರಸ್ತರಿಗೆ 2 ಲಕ್ಷ ರೂ. ಪರಿಹಾರ, ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರಿಗೆ 10 ಲಕ್ಷ ರೂ. ಪರಿಹಾರ ನೀಡುವಂಥ ಮಹತ್ವದ ಅಂಶಗಳು ಹೊಸ ಕಾಯ್ದೆಯಲ್ಲಿವೆ.

ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡುವ, ವಾಹನ ಚಲಾವಣೆಗೆ ಶೈಕ್ಷಣಿಕ ಹಿನ್ನೆಲೆ ಕಡ್ಡಾಯ ಎಂಬ ನಿಯಮ ರದ್ದು, ಲೈಸನ್ಸ್‌ ಅವಧಿ ಹೆಚ್ಚಳ, ತಾತ್ಕಾಲಿಕ ನೋಂದಣಿ ವ್ಯವಸ್ಥೆ ರದ್ದು ಮಾಡುವ ಅಂಶಗಳೂ ಹೊಸ ಕಾಯ್ದೆಯಲ್ಲಿವೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ಮಸೂದೆಗೆ ಅನುಮೋದನೆ ನೀಡಲಾಗಿದೆ.

ಹೊಸ ಕಾಯ್ದೆಯ ಅನ್ವಯ, ವಿಮೆ ಇಲ್ಲದೆ ವಾಹನ ಚಲಾಯಿಸಿದರೆ 2,000 ರೂ. ದಂಡ, 3 ತಿಂಗಳ ಜೈಲು ಅಥವಾ ಎರಡೂ ಶಿಕ್ಷೆ, ಹೆಲ್ಮೆಟ್‌ ಇಲ್ಲದೆ ಬೈಕ್‌ ಸಂಚಾರಕ್ಕೆ 1,000 ರೂ. ದಂಡ, 3 ತಿಂಗಳು ಲೈಸನ್ಸ್‌ ಅಮಾನತು ಮಾಡಲಾಗುವುದು.

ಇನ್ನು ಅಪ್ರಾಪ್ತ ವಯಸ್ಕರು ಚಲಾಯಿಸುವ ವಾಹನಗಳು ಅಪಘಾತಕ್ಕೀಡಾದರೆ ಅಂಥ ಸಂದರ್ಭ ಅವರ ಹೆತ್ತವರನ್ನೇ ಹೊಣೆ ಮಾಡುವ ಜತೆಗೆ ವಾಹನದ ನೋಂದಣಿ ರದ್ದು ಮಾಡಲಾಗುವುದು. ಇಂಥ ಪ್ರಕರಣಗಳಲ್ಲಿ ದೋಷಿಗಳಿಗೆ 25,000 ರೂ. ದಂಡ ಮತ್ತು 3 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿರುತ್ತದೆ.

ಇನ್ನು ಸಂಚಾರ ನಿಯಮ ಉಲ್ಲಂಘಿಸಿದರೆ ಈ ಹಿಂದೆ 100 ರೂ. ದಂಡ ವಿಧಿಸಲಾಗುತ್ತಿತ್ತು. ಅದನ್ನು 500 ರೂ.ಗೆ ಹೆಚ್ಚಿಸಲಾಗಿದೆ. ಇದಲ್ಲದೆ ಅಧಿಕಾರಿಗಳ ಆದೇಶದ ಕುರಿತು ಅಶಿಸ್ತಿನ ವರ್ತನೆ ತೋರಿದರೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣವನ್ನು 500 ರೂ.ಗಳಿಂದ 2,000 ರೂ.ಗೆ ಹೆಚ್ಚಿಸಲಾಗಿದೆ.

ಲೈಸನ್ಸ್‌ ಇಲ್ಲದೆ ವಾಹನ ಚಲಾಯಿಸಿದರೆ ಮತ್ತು ಅನಧಿಕೃತವಾಗಿ ವಾಹನ ಚಲಾಯಿಸಿದರೆ 5,000 ರೂ. ದಂಡ ವಿಧಿಸಲಾಗುವುದು. ಒಂದು ವೇಳೆ ವಾಹನ ಚಾಲನೆ ಮಾಡದಂತೆ ಶಿಕ್ಷೆ ವಿಧಿಸಿದ್ದರೂ ವಾಹನ ಚಲಾಯಿಸಿದರೆ ಅಂಥ ಸಂದರ್ಭ ಕನಿಷ್ಠ 10,000 ರೂ. ದಂಡ ವಿಧಿಸಲಾಗುವುದು. ಅಪಾಯಕಾರಿಯಾಗಿ ವಾಹನ ಚಲಾಯಿಸಿದರೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣವನ್ನು 1,000 ರೂ.ನಿಂದ 5,000 ರೂ.ಗೆ ಹೆಚ್ಚಳ ಮಾಡಲಾಗಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ 10,000 ರೂ. ದಂಡ ಹಾಕಲಾಗುವುದು.

ಇನ್ನು ಮಿತಿ ಮೀರಿ ಸರಕು ಸಾಗಿಸುವ ವಾಹನಗಳಿಗೆ 20,000 ರೂ. ದಂಡ, ಬೆಲ್ಟ್ ಹಾಕಿಕೊಳ್ಳದೆ ವಾಹನ ಚಲಾಯಿಸುವವರಿಗೆ 1,000 ರೂ. ದಂಡ, ಹಿಟ್‌ ಆ್ಯಂಡ್‌ ರನ್‌ ಕೇಸಲ್ಲಿ ಸಂತ್ರಸ್ತರಿಗೆ 25,000 ರೂ.ನಿಂದ 2 ಲಕ್ಷ ರೂ.ವರೆಗೆ ಪರಿಹಾರ, ರಸ್ತೆ ಅಪಘಾತದಲ್ಲಿ ಮೃತಪಟ್ಟರೆ 10 ಲಕ್ಷ ರೂ. ಪರಿಹಾರ ನೀಡುವ ಅಂಶಗಳು ಹೊಸ ಕಾಯ್ದೆಯಲ್ಲಿವೆ.

ಇದೇ ವೇಳೆ ದೇಶದ ಪ್ರತಿ ಮೂಲೆಗೂ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸ್ಟೇಜ್‌ ಕ್ಯಾರಿಯೇಜ್‌, ಕಾಂಟ್ರ್ಯಾಕ್ಟ್ ಕ್ಯಾರಿಯೇಜ್‌ ಪರವಾನಿಗೆ ಅಧಿಕಾರವನ್ನು ರಾಜ್ಯಗಳಿಗೆ ನೀಡಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English